ಸಾರಾಂಶ
- ಚಿಕ್ಕಮಗಳೂರು ನಗರದ ವಿವಿಧೆಡೆ ಸ್ವಚ್ಛತೆ, ಕಾರ್ಯಕ್ರಮಕ್ಕೆ ಚಾಲನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರಸಭೆ ಕುಡಿಯುವ ನೀರು, ಸ್ವಚ್ಛತೆ, ರಸ್ತೆ, ಚರಂಡಿ, ಬೀದಿದೀಪ ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಜಿಲ್ಲಾ ಆಟದ ಮೈದಾನದ ಸುತ್ತ ಹಾಗೂ ನ್ಯಾಯಾಲಯ, ಎಲ್‌ಐಸಿ ರಸ್ತೆಯಲ್ಲಿ ನಗರಸಭೆಯಿಂದ ಸೋಮವಾರ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅನುದಾನದ ಕೊರತೆ ಮುಂದಿಟ್ಟುಕೊಂಡು ಜನರ ಅನಿಸಿಕೆ ಗಳಿಗೆ ತೊಂದರೆಯಾಗಬಾರದು. ನಗರಸಭೆ ಸಿಬ್ಬಂದಿಗಳನ್ನು ಬಳಸಿಈ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಸಲಹೆ ನೀಡಿದರು.ಸ್ವಚ್ಚತೆಗೆ ಆದ್ಯತೆ ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು. ನಗರದಲ್ಲಿ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವು ಮಾಡದಿದ್ದರೆ ₹5 ಸಾವಿರ ದಂಡ ವಿಧಿಸುವುದಾಗಿ ಸಂಬಂಧಪಟ್ಟ ಮಾಲೀಕರಿಗೆ ಸೂಚನಾ ಪತ್ರ ನೀಡಿ ಎಂದು ಹೇಳಿದರು.
ನಗರದಲ್ಲಿ ಜನಸಂಖ್ಯೆ ಹೆಚ್ಚಳದ ಜೊತೆಗೆ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು, ಜೊತೆಗೆ ಅಂಗಡಿ ಮಾಲಿಕರು ಫುಟ್‌ಪಾತ್ ಮೇಲೆ ವಸ್ತುಗಳನ್ನು ಇಟ್ಟು ಜನರ ಓಡಾಟಕ್ಕೆ ತೊಂದರೆಯಾಗಿದ್ದು, ಈ ಕುರಿತು ಕ್ರಮ ಜರುಗಿಸಬೇಕೆಂದು ನಗರಸಭೆ ಅಧ್ಯಕ್ಷರಿಗೆ ಸೂಚಿಸಿದರು.ಸಂತೆ ಮಾರ್ಕೆಟ್‌ನಲ್ಲಿ ಜನರ ಓಡಾಟಕ್ಕೆ ತೊಂದರೆಯಾಗುವಂತೆ ಕಟ್ಟೆಯ ಮುಂಭಾಗದಲ್ಲಿ ತರಕಾರಿ ಇಡುತ್ತಿದ್ದಾರೆ. ಇದಕ್ಕೆ ನಗರಸಭೆ ಕಡಿವಾಣ ಹಾಕಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು. ಈ ಎಲ್ಲಾ ಕಾರ್ಯಗಳು ಮುಂದಿನ 9 ತಿಂಗಳ ಅಧಿಕಾರವಧಿಯಲ್ಲಿ ನಿರಂತರವಾಗಿ ಸಾಗಬೇಕು ಎಂದು ಸಲಹೆ ನೀಡಿದರು.
ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ತಾವೂ ಸೇರಿದಂತೆ ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ನಗರಸಭೆ ಸಿಬ್ಬಂದಿಯೊಂದಿಗೆ ನಗರ ಪ್ರದಕ್ಷಣೆ ಕೈಗೊಳ್ಳುತ್ತೇವೆ. ಇದನ್ನು ಸಾರ್ವಜನಿಕವಾಗಿ ತೋರಿಸುವ ಮೂಲಕ ಲಂಚಮುಕ್ತ ನಗರಸಭೆಯನ್ನಾಗಿಸಲು ಸಂಕಲ್ಪ ಮಾಡಬೇಕೆಂದು ಹೇಳಿದರು.ಪೌರ ಕಾರ್ಮಿಕರ ಹಲವು ಬೇಡಿಕೆಗಳ ಬಗ್ಗೆ ಶಾಸಕರ ನೇತೃತ್ವದಲ್ಲಿ ನಿಯೋಗ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಗೆಹರಿಸುವ ಜೊತೆಗೆ ನಗರಸಭೆಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ನಮ್ಮ ಕಾರ್ಯಕ್ಕೆ ಪೌರ ಕಾರ್ಮಿಕರು ಸಾತ್ ನೀಡಿದ್ದು, ನಾಯಕರಾದ ಎಸ್.ಎಲ್ ಭೋಜೇಗೌಡರು ಚಾಲನೆ ನೀಡಿದ್ದಾರೆಂದರು.ಸದಸ್ಯ ಎ.ಸಿ. ಕುಮಾರಗೌಡ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಯೋಜನೆ ರೂಪಿಸಲಾಗಿದೆ. ಜೊತೆಗೆ ಇಂದಿನಿಂದ ಕಸಮುಕ್ತ ನಗರ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಕಸಮುಕ್ತ ನಗರ ಯೋಜನೆಗೆ ಎಲ್ಲಾ ಪೌರ ಕಾರ್ಮಿಕರು ಕೈಜೋಡಿಸಿದ್ದಾರೆ. ಶಾಸಕರು, ಎಂಎಲ್‌ಸಿ ನಮ್ಮೊಂದಿಗಿದ್ದಾರೆ. ಮುಂದಿನ ದಿನಗಳಲ್ಲಿ ಆರೋಗ್ಯಕರ ಪರಿಸರವನ್ನು ಕಾಪಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪೌರಾಯುಕ್ತ ಬಿ.ಸಿ. ಬಸವರಾಜ್, ಆರೋಗ್ಯ ನಿರೀಕ್ಷರು ಮತ್ತು ಸಿಬ್ಬಂದಿ ಹಾಜರಿದ್ದರು. 7 ಕೆಸಿಕೆಎಂ 1ಚಿಕ್ಕಮಗಳೂರು ನಗರದ ಎಲ್‌ಐಸಿ ರಸ್ತೆಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಸ್ವಚ್ಛತೆಗೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಪೌರಾಯುಕ್ತ ಬಿ.ಸಿ. ಬಸವರಾಜ್ ಇದ್ದರು.