ನೀರು ಸಮಸ್ಯೆ ನೀಗಿಸಿದ ನಗರಸಭೆ

| Published : Mar 29 2024, 12:52 AM IST

ಸಾರಾಂಶ

ಸಕಾಲಕ್ಕೆ ಮಳೆಯಾಗದ್ದರಿಂದ ಎಲ್ಲೆಡೆ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ತಲೆದೋರಿದೆ. ಭೀಕರ ಬರಗಾಲ ಹಾಗೂ ಬೇಸಿಗೆಯ ಹೆಚ್ಚಿನ ತಾಪಮಾನದಿಂದ ಜಲಮೂಲಗಳು ಬತ್ತುತ್ತಿದ್ದು, ಅಂತರ್ಜಲಮಟ್ಟ ಕುಸಿಯುತ್ತಿದೆ. ಬೋರ್‌ವೆಲ್‌ಗಳು ಸರಿಯಾಗಿ ನೀರು ನೀಡುತ್ತಿಲ್ಲ. ಇದರಿಂದ ಮುಧೋಳ ಸೇರಿದಂತೆ ಎಲ್ಲೆಡೆ ನೀರು ಪೂರೈಸುವುದೇ ಹರಸಾಹಸ ಆಗಿದೆ. ಆದರೂ ನಗರಸಭೆಯ ಅಗತ್ಯ ಕ್ರಮಗಳಿಂದಾಗಿ ಜನರ ನೀರಿನ ಭವಣೆ ಅಲ್ಪಮಟ್ಟಿಗೆ ದೂರವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮುಧೋಳ

ಸಕಾಲಕ್ಕೆ ಮಳೆಯಾಗದ್ದರಿಂದ ಎಲ್ಲೆಡೆ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ತಲೆದೋರಿದೆ. ಭೀಕರ ಬರಗಾಲ ಹಾಗೂ ಬೇಸಿಗೆಯ ಹೆಚ್ಚಿನ ತಾಪಮಾನದಿಂದ ಜಲಮೂಲಗಳು ಬತ್ತುತ್ತಿದ್ದು, ಅಂತರ್ಜಲಮಟ್ಟ ಕುಸಿಯುತ್ತಿದೆ. ಬೋರ್‌ವೆಲ್‌ಗಳು ಸರಿಯಾಗಿ ನೀರು ನೀಡುತ್ತಿಲ್ಲ. ಇದರಿಂದ ಮುಧೋಳ ಸೇರಿದಂತೆ ಎಲ್ಲೆಡೆ ನೀರು ಪೂರೈಸುವುದೇ ಹರಸಾಹಸ ಆಗಿದೆ. ಆದರೂ ನಗರಸಭೆಯ ಅಗತ್ಯ ಕ್ರಮಗಳಿಂದಾಗಿ ಜನರ ನೀರಿನ ಭವಣೆ ಅಲ್ಪಮಟ್ಟಿಗೆ ದೂರವಾಗುತ್ತಿದೆ.

ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಇನ್ನೂ ಬಿಗಡಾಯಿಸುವ ಲಕ್ಷಣಗಳಿವೆ. ಆದ್ದರಿಂದ ಮುಧೋಳ ನಗರಸಭೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದು, ಜನರಿಗೆ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ. ಮುಧೋಳ ನಗರದ ಸಮೀಪದಲ್ಲಿರುವ ಹಳೇ ಗುಡದಿನ್ನಿ ಪುನರ್ವಸತಿಯಲ್ಲಿರುವ ಬೋರ್‌ವೆಲ್‌ನಿಂದ 3.5 ಕಿಮೀ ಪೈಪ್‌ಲೈನ್ ಮಾಡಲಾಗಿದೆ. ಅಲ್ಲಿಂದ ನೀರು ತಂದು ನಗರದ ಬಸ್‌ ಡಿಪೋ ಹಿಂದಿನ 100 ಆಶ್ರಯ ಮನೆಗಳಿಗೆ ಹಾಗೂ ಅಲ್ಲಿನ ಸುತ್ತಮುತ್ತಲಿನ ಮನೆಗಳಿಗೆ ಸಾರ್ವಜನಿಕ ನಲ್ಲಿಯ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಮೆಳ್ಳಿಗೇರಿ ಲೇಔಟ್‌ನಿಂದ ಜಯನಗರ, ಜಯನಗರ ಸ್ಲಂ, ವಿನಾಯಕ ನಗರ, ಬಳ್ಳೂರ ಪ್ಲಾಟ್‌ಗಳಲ್ಲಿರುವ ಸುಮಾರು 300 ಮನೆಗಳ 6 ಸಾವಿರ ಜನತೆಗೆ ನಲ್ಲಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪವನಚುಕ್ಕಿಯಲ್ಲಿ ಬೋರ್‌ವೆಲ್ ಕೊರೆದು ಪವನಚುಕ್ಕಿ ಹಾಗೂ ಸಿದ್ಧರಾಮೇಶ್ವರ ನಗರದ ಸುಮಾರು 250 ಮನೆಗಳಿಗೆ ನೀರು ನೀಡಲಾಗುತ್ತಿದೆ. ಬೋರ್‌ವೆಲ್‌ ನೀರನ್ನು ಟೆಸ್ಟ್ ಮಾಡಿ ನಂತರವೇ ನೀರನ್ನು ಬಿಡಲಾಗುತ್ತದೆ.

ರಾತ್ರಿ ಹಗಲೆನ್ನದೇ ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಅವರ ಮಾರ್ಗದರ್ಶನದಲ್ಲಿ ನಗರಸಭೆ ಸಿಬ್ಬಂದಿ, ಜಲಸಂರಕ್ಷಣೆ ಹಾಗೂ ನೀರು ಪೂರೈಕೆಗೆ ಕಾರ್ಯ ನಿರ್ವಹಿಸುತ್ತಿದೆ. ಸಮಸ್ಯೆ ಇರುವೆಡೆ ಸ್ವತಃ ಪೌರಾಯುಕ್ತರೇ ಭೇಟಿ ನೀಡುತ್ತಿದ್ದಾರೆ. ನಗರಸಭೆಯ ಈ ಕಾರ್ಯಕ್ಕೆ ನಗರದ ನಿವಾಸಿ ರತ್ನಾ ಕಾಂಬಳೆ ಹಾಗೂ ಇನ್ನಿತರರು ಸಂತಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ 325 ಬೋರ್‌ವೆಲ್‌ಗಳಿವೆ. ಅವುಗಳಲ್ಲಿ 308 ಬೋರ್‌ವೆಲ್‌ ಗಳು ಕಾರ್ಯನಿರ್ವಹಿಸುತ್ತಿವೆ. ಬರಗಾಲದ ಹಿನ್ನೆಲೆಯಲ್ಲಿ ಅಂತರ್‌ಜಲ ಮಟ್ಟ ಕುಸಿದಿರುವುದರಿಂದ ನೀರಿನ ಲಭ್ಯತೆಯ ಉದ್ದೇಶ ದಿಂದ ಮತ್ತಷ್ಟು ಆಳಕ್ಕೆ ಬೋರ್‌ವೆಲ್‌ಗಳನ್ನು ಕೊರೆಯಿಸಿ ನೀರಿನ ಲಭ್ಯತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ನೀರು ಪೂರೈಕೆ ಇಂಜನಿಯರ್ ರಾಜು ಚವ್ಹಾಣ ತಿಳಿಸಿದ್ದಾರೆ. ಬೇಸಿಗೆಯಲ್ಲಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಉತ್ತಮ ಬೋರ್‌ವೆಲ್‌ಗಳನ್ನು ಹೊಂದಿರುವ ಸಾರ್ವಜನಿಕರು ನೀರು ಪೂರೈಕೆ ಮಾಡಿದರೆ ಅವರಿಗೆ ನಗರಸಭೆಯಿಂದ ಸೌಲಭ್ಯಗಳನ್ನು ಒದಗಿಸಲಾಗುವುದು. ಆದ್ದರಿಂದ ದಾನಿಗಳು ನೀರು ಪೂರೈಸಲು ಮುಂದೆ ಬರಬೇಕು.

- ರಾಜು ಚವ್ಹಾಣ

ಇಂಜನಿಯರ್

-----ಮೆಳ್ಳಿಗೇರಿ ಲೇಔಟ್‌ನಿಂದ ಜಯನಗರ, ಜಯನಗರ ಸ್ಲಂ, ವಿನಾಯಕ ನಗರ, ಬಳ್ಳೂರ ಪ್ಲಾಟ್‌ಗಳಲ್ಲಿರುವ ಸುಮಾರು 300 ಮನೆಗಳ 6 ಸಾವಿರ ಜನತೆಗೆ ನಲ್ಲಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪವನಚುಕ್ಕಿಯಲ್ಲಿ ಬೋರ್‌ವೆಲ್ ಕೊರೆದು ಪವನಚುಕ್ಕಿ ಹಾಗೂ ಸಿದ್ಧರಾಮೇಶ್ವರ ನಗರದ ಸುಮಾರು 250 ಮನೆಗಳಿಗೆ ನೀರು ನೀಡಲಾಗುತ್ತಿದೆ. ಬೋರ್‌ವೆಲ್‌ ನೀರನ್ನು ಟೆಸ್ಟ್ ಮಾಡಿ ನಂತರವೇ ನೀರನ್ನು ಬಿಡಲಾಗುತ್ತದೆ.

- ಗೋಪಾಲ ಕಾಸೆ

ನಗರಸಭೆ ಪೌರಾಯುಕ್ತ

--------