26.13 ಲಕ್ಷ ರು. ಉಳಿತಾಯ ಬಜೆಟ್ ಮಂಡನೆ

| Published : Feb 18 2024, 01:37 AM IST

ಸಾರಾಂಶ

2024-25ನೇ ಸಾಲಿನಲ್ಲಿ ಪುರಸಭೆಗೆ ಸ್ವಂತ ಆದಾಯದಿಂದ ಹಲವು ಕೋಟಿ ರು. ಗಳ ನಿರೀಕ್ಷೆ ಮಾಡಲಾಗಿದ್ದು, ಆ ಪೈಕಿ ಆಸ್ತಿ ತೆರಿಗೆಯಿಂದ 2.80 ಕೋಟಿ, ನೀರಿನ ತೆರಿಗೆಯಿಂದ 92 ಲಕ್ಷ, ಪುರಸಭೆಗೆ ಸೇರಿದ ಮಳಿಗೆಗಳ ಬಾಡಿಗೆಯಿಂದ 95 ಲಕ್ಷ, ಉದಿಮೆ ಪರವಾನಿಗೆ ಯಿಂದ 15.8 ಲಕ್ಷ ಮತ್ತು ಕಟ್ಟಡ ಪರವಾನಿಗೆ, ಮೇಲ್ವಿಚಾರಣೆ ಹಾಗೂ ಖಾತೆ ಬದಲಾವಣೆಯಿಂದ 1.80 ಕೋ ಅಂದಾಜಿಸಲಾಗಿದೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಪಟ್ಟಣದ ಪುರಸಭೆಯ 2024-25ನೇ ಸಾಲಿನ 26,13,500 ಲಕ್ಷ ರು. ಗಳ ಉಳಿತಾಯ ಬಜೆಟ್ ಅನ್ನು ಮುಖ್ಯಾಧಿಕಾರಿ ಡಾ. ಜಯಣ್ಣ ಮಂಡಿಸಿದರು.

ಪುರಸಭೆಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಆಡಳಿತಾಧಿಕಾರಿಗಳು ಆದ ಹುಣಸೂರು ಉಪವಿಭಾಗಾಧಿಕಾರಿ ಮಹಮದ್ ಹಾರಿಸ್ ಸುಮೈರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡಿಸಿ ಇತರ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

2024-25ನೇ ಸಾಲಿನಲ್ಲಿ ಪುರಸಭೆಗೆ ಸ್ವಂತ ಆದಾಯದಿಂದ ಹಲವು ಕೋಟಿ ರು. ಗಳ ನಿರೀಕ್ಷೆ ಮಾಡಲಾಗಿದ್ದು, ಆ ಪೈಕಿ ಆಸ್ತಿ ತೆರಿಗೆಯಿಂದ 2.80 ಕೋಟಿ, ನೀರಿನ ತೆರಿಗೆಯಿಂದ 92 ಲಕ್ಷ, ಪುರಸಭೆಗೆ ಸೇರಿದ ಮಳಿಗೆಗಳ ಬಾಡಿಗೆಯಿಂದ 95 ಲಕ್ಷ, ಉದಿಮೆ ಪರವಾನಿಗೆ ಯಿಂದ 15.8 ಲಕ್ಷ ಮತ್ತು ಕಟ್ಟಡ ಪರವಾನಿಗೆ, ಮೇಲ್ವಿಚಾರಣೆ ಹಾಗೂ ಖಾತೆ ಬದಲಾವಣೆಯಿಂದ 1.80 ಕೋ ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಇದೇ ಸಾಲಿನಲ್ಲಿ ಸರ್ಕಾರದ 15ನೇ ಹಣಕಾಸು ಅನುದಾನದಿಂದ 1.60 ಕೋಟಿ, ಎಸ್.ಎಫ್.ಸಿ ಅನುದಾನದಿಂದ 70 ಲಕ್ಷ, ಎಸ್.ಎಫ್.ಸಿ ವಿದ್ಯುತ್ ಅನುದಾನದಿಂದ 1.50 ಕೋಟಿ, ಎಸ್.ಎಫ್.ಸಿ ವೇತನ ಅನುದಾನದಿಂದ 3.25 ಕೋಟಿ, ಎಸ್.ಎಫ್.ಸಿ ವಿಶೇಷ ಅನುದಾನದಿಂದ 4.05 ಕೋಟಿ ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನದಿಂದ 3 ಲಕ್ಷ ಮತ್ತು ಸ್ವಚ್ಚ ಭಾರತ್ ಮಿಷನ್ ಅನುದಾನದಿಂದ 1.30 ಕೋಟಿ ರು. ಗಳನ್ನು ನಿರೀಕ್ಷೆ ಮಾಡಲಾಗಿದೆ ಎಂದರು.

ಇದರ ಜತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪುರಸಭೆಯಿಂದ ವಿವಿಧ ಯೋಜನೆ, ಕಾಮಗಾರಿ, ಅಭಿವೃದ್ದಿ, ವೇತನ ಸೇರಿದಂತೆ ಇತರ ಬಾಬ್ತುಗಳಿಗೆ ಭರಿಸಬೇಕಾದ ಅಂದಾಜು ವ್ಯಯದ ಪಟ್ಟಿಯನ್ನು ಮಂಡಿಸಿದ ಮುಖ್ಯಾಧಿಕಾರಿಗಳು ಆ ಸಂಬಂಧ ಪೂರ್ಣ ಮಾಹಿತಿ ನೀಡಿದರು.

ಕಚೇರಿ ನಿರ್ವಹಣೆಗೆ 65.25 ಲಕ್ಷ, ಕಟ್ಟಡ ರಸ್ತೆ, ಚರಂಡಿ, ಕಲ್ವರ್ಟ್ ಮ್ಯಾನ್ಹೋಲ್ ದುರಸ್ತಿ ಹಾಗೂ ನಿರ್ವಹಣೆಗೆ 70 ಲಕ್ಷ ರು, ಬೀದಿ ದೀಪ ನಿರ್ವಹಣೆಗೆ 35 ಲಕ್ಷ, ಪುರಸಭೆ ಸದಸ್ಯರುಗಳ ಅಧ್ಯಯನ ಪ್ರವಾಸಕ್ಕೆ 10 ಲಕ್ಷ, ವಾಹನಗಳ ಇಂಧನ, ದುರಸ್ಥಿ ಮತ್ತು ನಿರ್ವಹಣೆಗೆ 25 ಲಕ್ಷ, ಹೊರಗುತ್ತಿಗೆ ನೌಕರರ ನೇರ ಪಾವತಿಗೆ 58 ಲಕ್ಷ, ಪೌರ ಕಾರ್ಮಿಕರ ಆರೋಗ್ಯ ತಪಾಸಣೆಗೆ 3 ಲಕ್ಷ, ಬೆಳಗ್ಗಿನ ಉಪಹಾರಕ್ಕೆ 10 ಲಕ್ಷ, ವಿಮೆಗೆ 6 ಲಕ್ಷ, ನೀರು ಸರಬರಾಜಿಗೆ 94 ಲಕ್ಷ ರು. ಗಳು ವೆಚ್ಚವಾಗಲಿದೆ ಎಂದು ಪ್ರಕಟಿಸಿದರು.

ಇದರ ಜತೆಗೆ ಕಚೇರಿ ಯಂತ್ರೋಪಕರಣ ಖರೀದಿಗೆ 11 ಲಕ್ಷ, ರಸ್ತೆ ನಿರ್ಮಾಣಕ್ಕೆ 2 ಕೋಟಿ, ಚರಂಡಿ ನಿರ್ಮಾಣಕ್ಕೆ ಒಂದು ಕೋಟಿ, ಮಳೆ ನೀರು ಚರಂಡಿ ನಿರ್ಮಾಣಕ್ಕೆ 18 ಲಕ್ಷ, ಸ್ಮಶಾನ ಅಭಿವೃದ್ದಿಗೆ 30 ಲಕ್ಷ, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಅಭಿವೃದ್ದಿಗೆ 1.38 ಕೋಟಿ, ನೀರು ಸರಬರಾಜು ವಿಭಾಗಕ್ಕೆ 50 ಲಕ್ಷ, ಯುಜಿಡಿ ಸಂಪರ್ಕ ಕಲ್ಪಿಸಲು 20 ಲಕ್ಷ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ 100 ಲಕ್ಷ, ಮತ್ತು ಉಧ್ಯಾನವನಗಳ ಅಭಿವೃದ್ದಿಗೆ 50 ಲಕ್ಷ ಖರ್ಚು ಮಾಡಲಾಗುತ್ತದೆ ಎಂದು ಹೇಳಿದರು.