ಪುರಸಭೆ ನಿರ್ಲಕ್ಷ್ಯ: ಕಬಿನಿ ಕುಡಿವ ನೀರು ಪೋಲು

| Published : Jan 11 2024, 01:31 AM IST

ಸಾರಾಂಶ

ಗುಂಡ್ಲುಪೇಟೆಗೆ ಕಬಿನಿ ನೀರು ಸರಬರಾಜಾಗುವ ಪೈಪ್‌ಲೈನ್ ತಾಲೂಕಿನ ಮಳವಳ್ಳಿ ಗೇಟ್‌ ಬಳಿ ಒಡೆದು ಕುಡಿವ ನೀರು ಪುರಸಭೆಯ ನಿರ್ಲಕ್ಷ್ಯಕ್ಕೆ ಪೋಲಾಗುತ್ತಿದೆ ಜೊತೆಗೆ ಪೋಲಾಗುವ ನೀರು ಕಿಮೀಗಟ್ಟಲೇ ಹರಿಯುತ್ತಿದೆ. ಕುಡಿವ ನೀರು ಒಂದೆಡೆ ಪೋಲಾಗುತ್ತಿದೆ ಮತ್ತೊಂದೆಡೆ ಪೋಲಾಗುವ ನೀರು ಪೈಪ್‌ಲೈನ್‌ನಿಂದ ಪೂರ್ವಕ್ಕೆ ಕಿಲೋ ಮೀಟರ್‌ ದೂರ ಹರಿದು ಈರುಳ್ಳಿ ಬೆಳೆ ಕೊಳೆಯುವ ಆತಂಕ ರೈತರೊಬ್ಬರಿಗೆ ಎದುರಾಗಿದೆ.

ಕಿ.ಮೀ ಗಟ್ಟಲೇ ಹರಿದು ಪೋಲಾಗುತ್ತಿರುವ ನೀರು । ದುರಸ್ಥಿಗೆ ಮುಂದಾಗದ ಪುರಸಭೆ । ಸೋರಿಕೆ ನೀರಿನಿಂದ ಈರುಳ್ಳಿ ಬೆಳೆಗೆ ಸಂಕಷ್ಟ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗುಂಡ್ಲುಪೇಟೆಗೆ ಕಬಿನಿ ನೀರು ಸರಬರಾಜಾಗುವ ಪೈಪ್‌ಲೈನ್ ತಾಲೂಕಿನ ಮಳವಳ್ಳಿ ಗೇಟ್‌ ಬಳಿ ಒಡೆದು ಕುಡಿವ ನೀರು ಪುರಸಭೆಯ ನಿರ್ಲಕ್ಷ್ಯಕ್ಕೆ ಪೋಲಾಗುತ್ತಿದೆ ಜೊತೆಗೆ ಪೋಲಾಗುವ ನೀರು ಕಿಮೀಗಟ್ಟಲೇ ಹರಿಯುತ್ತಿದೆ. ಕುಡಿವ ನೀರು ಒಂದೆಡೆ ಪೋಲಾಗುತ್ತಿದೆ ಮತ್ತೊಂದೆಡೆ ಪೋಲಾಗುವ ನೀರು ಪೈಪ್‌ಲೈನ್‌ನಿಂದ ಪೂರ್ವಕ್ಕೆ ಕಿಲೋ ಮೀಟರ್‌ ದೂರ ಹರಿದು ಈರುಳ್ಳಿ ಬೆಳೆ ಕೊಳೆಯುವ ಆತಂಕ ರೈತರೊಬ್ಬರಿಗೆ ಎದುರಾಗಿದೆ.ಕಳೆದ ಐದು ದಿನಗಳ ಹಿಂದೆ ಕಬಿನಿ ನೀರು ಸರಬರಾಜಾಗುವ ಪೈಪ್‌ ಒಡೆದು ಹಗಲು ರಾತ್ರಿಯನ್ನದೆ ಪೋಲಾಗುವ ಮಾಹಿತಿ ಪುರಸಭೆಗೆ ಇದ್ದರೂ ಒಡೆದ ಪೈಪ್‌ ದುರಸ್ಥಿ ಪಡಿಸುವ ಗೋಜಿಗೆ ಹೋಗಿಲ್ಲ. ನೀರು ಪೋಲು ಮಾಡದಿರಿ ಎಂದು ಪುರಸಭೆ ಸಾರ್ವಜನಿಕರಿಗೆ ಹೇಳುತ್ತಿದೆ ಆದರಿಲ್ಲಿ ಪುರಸಭೆಯೇ ಕಳೆದೊಂದು ವಾರದಿಂದ ನೀರು ಪೋಲಾಗುತ್ತಿದ್ದರೂ ಪೋಲಾಗುವ ನೀರು ರಕ್ಷಿಸಲು ಮೀನಾಮೇಷ ಎಣಿಸುತ್ತಿದೆ ಎಂದು ರೈತರು ದೂರಿದ್ದಾರೆ. ಪಟ್ಟಣದಲ್ಲಿ ಕಬಿನಿ ಕುಡಿವ ನೀರಿಗಾಗಿ ನಾಗರೀಕರು ಪರದಾಡುತ್ತಿದ್ದಾರೆ ಇಂಥ ಸಮಯದಲ್ಲಿ ಒಡೆದ ಪೈಪ್‌ ದುರಸ್ಥಿಗೆ ಪುರಸಭೆ ಮುಂದಾಗಿಲ್ಲ. ಅಧಿಕಾರಿಗಳ ನಿರ್ಲಕ್ಷಕ್ಕೆ ಕುಡಿವ ನೀರು ಪೋಲಾಗುತ್ತಿದೆ.ಹೇಳಿದ್ರು ಕೇಳ್ತಿಲ್ಲ:

ಮಳವಳ್ಳಿ ಗೇಟ್‌ ಬಳಿ ಗುಂಡ್ಲುಪೇಟೆಗೆ ಸರಬರಾಜಾಗುವ ಕಬಿನಿ ನೀರಿನ ಪೈಪ್‌ ಒಡೆದು ನೀರು ಕಿಮೀ ಗಟ್ಟಲೇ ಹರಿದು ಹೋಗುತ್ತಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗೆ ಮೊಬೈಲ್‌ ಮೂಲಕ ತಿಳಿಸಿದ್ದರೂ ಗಮನಹರಿಸಿಲ್ಲ ಎಂದು ಬೆಂಡಗಳ್ಳಿ ಗ್ರಾಮದ ರೈತ ಶಿವಕುಮಾರ್‌ ದೂರಿದ್ದಾರೆ. ಕಬಿನಿ ನೀರು ಸರಬರಾಜಾಗುವ ಪೈಪ್‌ ಒಡೆದಿದೆ ದುರಸ್ಥಿ ಪಡಿಸಿ ಎಂದು ಹೇಳಿದ ಬಳಿಕ ಪುರಸಭೆ ಮುಖ್ಯಾಧಿಕಾರಿಗಳಿಗೆ ಮೊಬೈಲ್‌ ಮೂಲಕ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳೆ ಹಾಳಾಗುತ್ತೆ:

ಮಳವಳ್ಳಿ ಗೇಟ್‌ ಬಳಿ ಕುಡಿವ ನೀರಿನ ಕಬಿನಿ ಪೈಪ್‌ ಲೈನ್‌ ಒಡೆದು ಸೋರುವ ನೀರು ನಮ್ಮ ಜಮೀನಿನ ಬಳಿ ಹರಿದು ಹೋಗುವಾಗ ಜಮೀನು ವಸ್ತಿ ಹಿಡಿದರೆ ಈರುಳ್ಳಿ ಬೆಳೆ ಹಾಳಾಗಲಿದೆ. ಹಾಗಾಗಿ ಬೇಗ ಒಡೆದ ಪೈಪ್‌ ದುರಸ್ಥಿ ಪಡಿಸಿ ಜಮೀನಿನ ಬಳಿ ನೀರು ನಿಲ್ಲದಂತೆ ಮಾಡಿಸಿಕೊಡಿ ಎಂದು ರೈತ ಬೆಂಡಗಳ್ಳಿ ಶಿವಕುಮಾರ್‌ ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಕಬಿನಿ ನೀರು ಸಿಗುತ್ತಿಲ್ಲ. ಸಮರ್ಪಕವಾಗಿ ಬರುತ್ತಿಲ್ಲ ಎಂಬ ಆರೋಪ ಇದೆ ಹೀಗಿದ್ದರೂ ಪುರಸಭೆ ಒಡೆದ ಪೈಪ್‌ ದುರಸ್ಥಿ ಪಡಿಸಿ ಪಟ್ಟಣದ ಜನತೆಗೆ ನೀರು ಕೊಡುವ ಕೆಲಸ ಕೊಡಲು ಜತೆಗೆ ರೈತನ ಜಮೀನಿನ ಬಳಿ ಸೋರಿಕೆ ನೀರು ನಿಂತು ಬೆಳೆ ಹಾಳಾಗುವುದನ್ನು ತಪ್ಪಿಸುವ ಕೆಲಸ ಪುರಸಭೆ ಮಾಡಲಿ ಎಂಬುದು ಕನ್ನಡಪ್ರಭದ ಕಳಕಳಿ.

ಮಳವಳ್ಳಿ ಗೇಟ್‌ ಬಳಿ ಕಬಿನಿ ನೀರಿನ ಪೈಪ್ ಒಡೆದು ನೀರು ಹಗಲು ರಾತ್ರಿ ನನ್ನ ಜಮೀನಿನ ಬಳಿ ಹರಿಯುವ ಕಾರಣ ಈರುಳ್ಳಿ ಫಸಲು ಹಾಳಾಗುವ ಮುನ್ನ ನೀರು ನಿಲ್ಲಿಸಲಿ, ಇಲ್ಲ ಈರುಳ್ಳಿ ಬೆಳೆ ಹಾಳಾದರೆ ಪುರಸಭೆ ನಷ್ಟ ತುಂಬಿ ಕೊಡಬೇಕಾಗುತ್ತದೆ.ಶಿವಕುಮಾರ್‌ ರೈತ,ಬೆಂಡಗಳ್ಳಿ

ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗೇಟ್‌ ಬಳಿ ಕಬಿನಿ ನೀರಿನ ಪೈಪ್‌ ಒಡೆದಿದೆ ಎಂದು ಕನ್ನಡಪ್ರಭ ನನ್ನ ಗಮನಕ್ಕೆ ತಂದಿದೆ. ಈ ಬಗ್ಗೆ ಕೂಡಲೇ ಪುರಸಭೆ ಮುಖ್ಯಾಧಿಕಾರಿ ಈಗಲೇ ಗಮನಕ್ಕೆ ತಂದು ಒಡೆದ ಪೈಪ್‌ ದುರಸ್ಥಿಗೆ ಸೂಚನೆ ನೀಡಲಾಗುವುದು.

ಬಿ.ಆರ್.ಮಹೇಶ್‌,ಪುರಸಭೆ ಆಡಳಿತಾಧಿಕಾರಿ