ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಹರನ್ನು ಗುರುತಿಸಿ, ವಸತಿ ರಹಿತರಿಗೆ ನೆರವು ನೀಡಲು ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅನುಷ್ಠಾನ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವಾರ್ಡ್‌ಗಳಿಗೆ ಪುರಸಭಾ ಸಿಬ್ಬಂದಿ ತೆರಳಿ ನಿವೇಶನ, ವಸತಿ ರಹಿತರು, ಜೋಪಡಿ ಮನೆಗಳ ನಿವಾಸಿಗರನ್ನು ಗುರುತಿಸಿ ಮೊಬೈಲ್ ಆ್ಯಪ್‌ನಲ್ಲಿ ವಿವರವನ್ನು ನೋಂದಾಯಿಸಬೇಕು ಎಂದು ಸೂಚಿಸಿದರು.
ಈಗಾಗಲೇ ಗ್ರಾಮೀಣ ಭಾಗದಲ್ಲಿ ಆಯಾ ಗ್ರಾಪಂಗಳಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತಿ ತಾಲೂಕಿನಲ್ಲೂ ವಸತಿ ರಹಿತರನ್ನು ಗುರುತಿಸುವ ಕಾರ್ಯ ಮೊದಲಿಗೆ ಆಗಬೇಕು ಎಂದರು.ನಮ್ಮ ಜಿಲ್ಲೆಯಲ್ಲಿ ಎಷ್ಟು ವಸತಿ ರಹಿತರು ಇದ್ದಾರೆ ಎಂಬ ಮಾಹಿತಿ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಇದಾಗಿದೆ. ನಂತರದಲ್ಲಿ ಸಹಾಯಧನ ನೀಡುವ ಮೂಲಕ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಪ್ರಸ್ತುತ ಯೋಜನೆಯಡಿ ನಿವೇಶನ ರಹಿತರಿಗೆ 1.5 ಲಕ್ಷ ರು. ಪ್ರೋತ್ಸಾಹ ಧನ ನೀಡಲಾಗುತ್ತದೆ. 9 ಲಕ್ಷ ರು. ವರೆಗಿನ ಸಾಲ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಪುರಸಭಾ ಸಿಬ್ಬಂದಿ ಮನೆ ಮನೆಗೆ ತೆರಳಿ ಈ ಯೋಜನೆಯ ಸಂಪೂರ್ಣ ವಿವರ ಇರುವ ಕರ ಪತ್ರವನ್ನು ವಿತರಿಸಬೇಕು. ಖುದ್ದಾಗಿ ವಸತಿ ರಹಿತರ ಮಾಹಿತಿಯನ್ನು ನೋಂದಾಯಿಸಿಕೊಳ್ಳಬೇಕು. ಕಸದ ಗಾಡಿಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರಗೊಳಿಸಿ. ಇನ್ನೊಂದು ವಾರದೊಳಗೆ ಪುರಸಭೆ ವ್ಯಾಪ್ತಿಯ ಎಲ್ಲಾ ವಸತಿ ರಹಿತ ಮತ್ತು ನಿವೇಶನ ರಹಿತರ ಪಟ್ಟಿ ನೀಡಬೇಕು ಎಂದು ಸೂಚಿಸಿದರು.ಪ್ರತಿ ವಾರ್ಡ್ ಸದಸ್ಯರ ಮಾಹಿತಿಯನ್ನು ಶೀಘ್ರದಲ್ಲೇ ಖುದ್ದಾಗಿ ನೀಡಬೇಕು. ಪುರಸಭಾ ಅಧಿಕಾರಿಗಳು ಅಥವಾ ಸಿಬ್ಬಂದಿ ತಪ್ಪು ಮಾಹಿತಿ ಸಂಗ್ರಹಿಸಿ, ದಾಖಲಿಸಿರುವ ವಿಷಯ ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು.
ಪುರಸಭಾ ಪ್ರಭಾರ ಅಧ್ಯಕ್ಷೆ ಉಷಾ ಸತೀಶ್, ಯೋಜನೆ ನಿರ್ದೇಶಕ ತ್ಯಾಗರಾಜ್, ಸಿಎಲ್‌ಟಿಸಿ ಅಧಿಕಾರಿ ಸೌಮ್ಯ, ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಶಿಗ್ಗಾವಿ, ಕಂದಾಯ ಅಧಿಕಾರಿ ಗೋಪಿ, ಕಂದಾಯ ನಿರೀಕ್ಷಕ ಗಣೇಶ್, ಆಶ್ರಯ ಅಧಿಕಾರಿ ಪೃಥ್ವಿ, ಆರೋಗ್ಯಾಧಿಕಾರಿಗಳಾದ ಲೋಹಿತ್, ಜ್ಯೋತಿ, ಕಿರಿಯ ಅಭಿಯಂತರರಾದ ಮೋಹನ್, ಪುರಸಭಾ ಸಿಬ್ಬಂದಿ ಹಾಜರಿದ್ದರು.