ಪರಿಸರ ಸಂರಕ್ಷಣೆ ಹಾಡಿಗೆ ಪುರಸಭೆ ಜನಪ್ರತಿನಿಧಿಗಳ ಹೆಜ್ಜೆ

| Published : Aug 29 2025, 01:00 AM IST

ಪರಿಸರ ಸಂರಕ್ಷಣೆ ಹಾಡಿಗೆ ಪುರಸಭೆ ಜನಪ್ರತಿನಿಧಿಗಳ ಹೆಜ್ಜೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ಸರಳವಾಗಿ ಕಿರು ಚಿತ್ರದ ವಿಡಿಯೋವನ್ನು ಬಿಡುಗಡೆಗೊಳಿಸಲಾಯಿತು.

ಅಂಕೋಲಾ: ಇಲ್ಲಿಯ ಪುರಸಭೆಯ ಆಡಳಿತ ಮಂಡಳಿಯ ಜನಪ್ರತಿನಿಧಿಗಳು ನೃತ್ಯ ಮತ್ತು ಅಭಿನಯದ ಮೂಲಕ ನಿರ್ಮಿಸಿದ ಕಿರುಚಿತ್ರ ಗುರುವಾರ ಪುರಸಭೆಯ ಪೌರಕಾರ್ಮಿಕರಿಂದ ವಿಭಿನ್ನವಾಗಿ ಲೋಕಾರ್ಪಣೆಗೊಂಡಿತು.

ಪುರಸಭೆ ಪೌರಕಾರ್ಮಿಕರಾದ ಹರಿಶ್ಚಂದ್ರ ನಾಯ್ಕ ಮತ್ತು ಮಂಗಲಾ ಶೆಡಗೇರಿ ಅವರಿಂದ ಪುರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ಸರಳವಾಗಿ ಕಿರು ಚಿತ್ರದ ವಿಡಿಯೋವನ್ನು ಬಿಡುಗಡೆಗೊಳಿಸಲಾಯಿತು.

ಕಿರುಚಿತ್ರ ಬಿಡುಗಡೆಯ ನಂತರ ಮಾತನಾಡಿದ ಪುರಸಭೆ ಅಧ್ಯಕ್ಷ ಸೂರಜ್ ಮನೋಹರ ನಾಯ್ಕ, ಪ್ರತಿನಿತ್ಯ ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆಗೆ ಅವಿರತವಾಗಿ ಶ್ರಮಿಸುತ್ತಾರೆ. ಮಳೆ ಗಾಳಿ ಚಳಿ ಎನ್ನದೆ ನಮ್ಮೆಲ್ಲರ ಸ್ವಾಸ್ಥ್ಯ ಬದುಕನ್ನು ಕಾಪಾಡಲು ದುಡಿಯುತ್ತಾರೆ. ಅವರಿಗೆ ನೆರವಾಗುವ ಹಿನ್ನೆಲೆ ಈ ಜಾಗೃತಿ ವಿಡಿಯೋವನ್ನು ಪುರಸಭೆಯ ಅನುದಾನ ಬಳಸದೇ ಚಿತ್ರೀಕರಿಸಲಾಗಿದೆ. ವ್ಯಕ್ತಿ ತಾನು ಬದಲಾದಂತೆ ಸಮಾಜ ಬದಲಾಗುತ್ತದೆ ಎನ್ನುವ ಕಲ್ಪನೆಯೊಂದಿಗೆ ಪುರಸಭೆಯ ಸದಸ್ಯರೆಲ್ಲರ ಸಮಾನ ಅಭಿಪ್ರಾಯದಂತೆ ನಾವೆಲ್ಲರೂ ನೃತ್ಯ ಮತ್ತು ಸಂದೇಶ ನೀಡುವ ಮೂಲಕ ಅಭಿನಯಿಸಿದ್ದೇವೆ. ಸಾರ್ವಜನಿಕರು ಇದಕ್ಕೆ ಪ್ರೋತ್ಸಾಹಿಸಬೇಕು ಎಂದರು. ಪುರಸಭೆ ಸದಸ್ಯರಾದ ತಾರಾ ನಾಯ್ಕ, ರೇಖಾ ಗಾಂವಕರ, ಜಯಾ ನಾಯ್ಕ, ಹೇಮಾ ಆಗೇರ, ಜಯಪ್ರಕಾಶ ನಾಯ್ಕ, ಮಂಗೇಶ ಆಗೇರ, ಶಬ್ಬೀರ ಶೇಕ್ ಪುರಸಭೆಯ ಸಿಬ್ಬಂದಿ ಪರಶುರಾಮ ಬಳ್ಳಾರಿ, ದರ್ಶನ್ ನಾಯ್ಕ ಮತ್ತು ಪುರಸಭೆಯ ಅಧಿಕಾರಿ, ಸಿಬ್ಬಂದಿ ವರ್ಗ ಇದ್ದರು.

ನೃತ್ಯಪಟು ಮನೋಜ್ ಆಚಾರಿ, ವಿಡಿಯೋಗ್ರಾಫರ್ ರಜಿತ್ ಗಾಂವಕರ ಮತ್ತು ಸಂಯೋಜಕ ವಿಶ್ವನಾಥ ಇಳಿಗೇರ ತಂಡದವರು ಸೇರಿ ಚಿತ್ರೀಕರಣ ಮಾಡಿದ್ದು ಆಕರ್ಷಕ ಕಿರುಚಿತ್ರ ನಿರ್ಮಿಸುವಲ್ಲಿ ಸಹಕರಿಸಿದರು.