ಪುರಸಭೆ ವಾಣಿಜ್ಯ ಮಳಿಗೆಗಳ ಅವಧಿ ಮುಗಿದಿದ್ದು ಟೆಂಡರ್ ಕರೆಯಬೇಕು, ಹೊಸದಾಗಿ ಹರಾಜು ಮಾಡಬೇಕು, ಎಗ್ಗ್ ರೈಸ್, ಚಿಕನ್ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಮಂಗಳವಾರ ಹೋರಾಟ ಮಾಡಿದ್ದ ವಿವಿಧ ಕನ್ನಡಪರ ಸಂಘಟನೆಗಳಿಗೆ ಮಣಿದು ಪುರಸಭೆ ಅಧಿಕಾರಿಗಳು ಎಗ್‌ರೈಸ್ ಚಿಕನ್ ಅಂಗಡಿಗಳನ್ನು ಜಪ್ತಿ ಮಾಡಿದ್ದರು.
ಲಕ್ಷ್ಮೇಶ್ವರ: ಪುರಸಭೆಯ ವಾಣಿಜ್ಯ ಮಳಿಗೆಗಳಿಗೆ ಮಂಗಳವಾರ ಬೀಗ ಜಡಿದಿದ್ದ ಪುರಸಭೆಯ ಅಧಿಕಾರಿಗಳು ಬುಧವಾರ ಅಂಗಡಿಗಳ ಬೀಗ ತೆರೆದಿದ್ದು, ವ್ಯಾಪಾರಸ್ಥಱು ಕೋರ್ಟ್‌ನಿಂದ ತಡೆಯಾಜ್ಞೆ ತಂದ ಹಿನ್ನೆಲೆ ಬೀಗ ತೆರವು ಮಾಡಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಎದುರಿಗಿನ ಪುರಸಭೆಯ ವಾಣಿಜ್ಯ ಮಳಿಗೆಗಳ ಅವಧಿ ಮುಗಿದಿದೆ ಎನ್ನುವ ಕಾರಣ ಮುಂದಿಟ್ಟು ವಿವಿಧ ಸಂಘಟನೆಗಳು ಅಂಗಡಿ ತೆರವುಗೊಳಿಸಬೇಕು ಎಂದು ಹೋರಾಟ ಮಾಡಿದ್ದವು. ಇದೇ ಕಾರಣ ಮುಂದಿಟ್ಟು ಪುರಸಭೆಯ ಅಧಿಕಾರಿಗಳು ಮಂಗಳವಾರ ವಾಣಿಜ್ಯ ಮಳಿಗೆಗೆ ಬೀಗ ಹಾಕಿ ಅಂಗಡಿಗಳಿಗೆ ಬೀಗ ಜಡಿದಿದ್ದರು.ಪುರಸಭೆ ವಾಣಿಜ್ಯ ಮಳಿಗೆಗಳ ಅವಧಿ ಮುಗಿದಿದ್ದು ಟೆಂಡರ್ ಕರೆಯಬೇಕು, ಹೊಸದಾಗಿ ಹರಾಜು ಮಾಡಬೇಕು, ಎಗ್ಗ್ ರೈಸ್, ಚಿಕನ್ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಮಂಗಳವಾರ ಹೋರಾಟ ಮಾಡಿದ್ದ ವಿವಿಧ ಕನ್ನಡಪರ ಸಂಘಟನೆಗಳಿಗೆ ಮಣಿದು ಪುರಸಭೆ ಅಧಿಕಾರಿಗಳು ಎಗ್‌ರೈಸ್ ಚಿಕನ್ ಅಂಗಡಿಗಳನ್ನು ಜಪ್ತಿ ಮಾಡಿದ್ದರು.ಆದರೆ ಬುಧವಾರ ಏಕಾಏಕಿ ಪುರಸಭೆಯ ಅಧಿಕಾರಿಗಳು, ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರು, ಈ ಬಗ್ಗೆ ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದು. ಅದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ, ಆದರೂ ನಮ್ಮ ಅಂಗಡಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಕರವೇ ಪ್ರವೀಣಶೆಟ್ಟಿ ಬಣದ ಮಹೇಶ ಕಲಘಟಗಿ ಹಾಗೂ ಡಿಎಸ್ಎಸ್ ಮುಖಂಡ ಸುರೇಶ ನಂದೆಣ್ಣವರ ಅವರಿಗೆ ತಿಳಿಸಿದರು.ಈ ವೇಳೆ ವ್ಯಾಪಾರಸ್ಥರು ಮಾತನಾಡಿ, ಉಚ್ಚ ನ್ಯಾಯಾಲಯದ ಆದೇಶ ಇದ್ದರೂ ಅಂಗಡಿಗಳನ್ನು ಯಾಕೆ ಜಪ್ತಿ ಮಾಡಿದ್ದಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅಂಗಡಿಗಳನ್ನು ತೆರೆಯಿರಿ, ಇಲ್ಲವಾದರೆ ಮುಂದೆ ಕಾನೂನು ಮೊರೆ ಹೋಗುವುದು ಅನಿವಾರ್ಯ ಎಂದ ತಕ್ಷಣ ಅಧಿಕಾರಿಗಳು ತಬ್ಬಿಬ್ಬಾಗಿ ಪೊಲೀಸರ ಬಂದೋಬಸ್ತನಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ದೌಡಾಯಿಸಿ ಪುರಸಭೆ ಕಂದಾಯ ಅಧಿಕಾರಿ ಸುರೇಶ ಪೂಜಾರ ಹಾಗೂ ವ್ಯವಸ್ಥಾಪಕರಾದ ಮಂಜುಳಾ ಹೂಗಾರ, ಹನುಮಂತಪ್ಪ ನಂದೆಣ್ಣವರ ನೇತೃತ್ವದಲ್ಲಿ ಅಂಗಡಿಗಳನ್ನು ತೆರೆಯಲಾಯಿತು.
ಈ ವೇಳೆ ಮಾತನಾಡಿದ ಕರವೇ ಪ್ರವೀಣ ಶೆಟ್ಟಿ ಬಣದ ಮುಖಂಡ ಮಹೇಶ ಕಲಘಟಗಿ, ಈ ಬೆಳವಣಿಗೆಯಲ್ಲಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ನ್ಯಾಯಾಲಯದ ಆದೇಶ ಪ್ರತಿಯನ್ನು ವ್ಯಾಪಾರಸ್ಥರು ತೋರಿಸಿದರೂ ಅಂಗಡಿಗಳನ್ನು ಜಪ್ತಿ ಮಾಡಿದ್ದು ಯಾಕೆ?ಅಧಿಕಾರಿಗಳು ಏನೇ ಕೆಲಸ ಮಾಡಿದರೂ ಕಾನೂನುಬದ್ಧವಾಗಿ ಮಾಡಬೇಕು. ಚಿಕನ್ ಮಟನ್ ಮಾರಾಟ ಬಗ್ಗೆ ನಮಗೂ ಆಕ್ಷೇಪಣೆಯಿದೆ. ಆದರೆ ಅವರಿಗೆ ಕಾಲವಕಾಶ ಕೊಡಬೇಕಿತ್ತು. ಏಕಾಏಕಿ ಜಪ್ತಿ ಮಾಡುವುದು ಸರಿಯಲ್ಲ ಎಂದರು.ಮುಖಂಡ ಸುರೇಶ ನಂದೆಣ್ಣವರ ಮಾತನಾಡಿ, ನ್ಯಾಯಾಲಯದಲ್ಲಿ ಸ್ಟೇ ಇದ್ದರೂ ವ್ಯಾಪಾರಸ್ಥರ ಮೇಲೆ ಆದ ದೌರ್ಜನ್ಯವನ್ನು ಖಂಡಿಸುತ್ತೇವೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಡೆಯಾಜ್ಞೆ ರದ್ದು ಮಾಡಿಸಿ, ಮುಂದಿನ ಕ್ರಮ ಕೈಗೊಳ್ಳಿ. ಅಲ್ಲಿಯವರೆಗೆ ವ್ಯಾಪಾರಸ್ಥರಿಗೆ ಅವಕಾಶ ನೀಡಿ ಎಂದರು.
ಪುರಸಭೆ ಕಂದಾಯ ಅಧಿಕಾರಿ ಸುರೇಶ ಪೂಜಾರ ಪ್ರತಿಕ್ರಿಯಿಸಿ, ಮೇ 15ರಂದು ಪುರಸಭೆ ಮಳಿಗೆಗಳ ತೆರವಿಗೆ ವ್ಯಾಪಾರಸ್ಥರು ತಡೆಯಾಜ್ಞೆ ತಂದಿದ್ದಾರೆ. ಈ ಹಿನ್ನೆಲೆ ಅಂಗಡಿಗಳಿಗೆ ಹಾಕಿದ್ದ ಬೀಗ ತೆರವು ಮಾಡಲಾಗಿದೆ ಎಂದರು.ಕ್ರೈಮ್ ವಿಭಾಗದ ಪಿಎಸ್ಐ, ಟಿ.ಕೆ. ರಾಠೋಡ ಹಾಗೂ ಪೊಲೀಸ್ ಸಿಬ್ಬಂದಿ ಯಾವುದೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು. ಬಸವರಾಜ ಹೊಗೆಸೊಪ್ಪಿನ, ಅನೀಲ ಮುಳಗುಂದ, ಬಸವಣೆಪ್ಪ ನಂದೆಣ್ಣವರ, ಶಿವು ಕರಡಿ ಹಾಗೂ ವ್ಯಾಪಾರಸ್ಥರು ಇದ್ದರು.