ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಹಿಂದೂ ಮಹಾಗಣಪತಿ ವಿಸರ್ಜನೆ ಶನಿವಾರ ರಾತ್ರಿ 11-30ಕ್ಕೆ ನೆರವೇರಿದ್ದು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಕ್ತರು ತಮ್ಮೂರಿಗೆ ತಲುಪಿದ್ದಾರೆ. ಶೋಭಾಯಾತ್ರೆಯ ಸಂಭ್ರಮಕ್ಕೆ ಸಾಕ್ಷಿಯೆಂಬಂತೆ ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ಬಿದ್ದ ತ್ಯಾಜ್ಯ ವಿಲೇವಾರಿ ಮಾಡಲು ಪೌರ ಕಾರ್ಮಿಕರು ಭಾನುವಾರ ಮುಂಜಾನೆ ಹೈರಾಣರಾಗಿ ಹೋದರು.ಚಳ್ಳಕೆರೆ ಟೋಲ್‌ಗೇಟ್ ನಿಂದ ಗಾಂಧಿ ವೃತ್ತ, ಕನಕ ವೃತ್ತದವರೆಗೆ ಎಲ್ಲಿ ನೋಡಿದರೂ ಹರಿದ ಚಪ್ಪಲಿ, ಕೇಸರಿ ಧ್ವಜ, ಟವೆಲ್, ನೀರಿನ ಬಾಟಲ್, ಉಪಹಾರ ತಿಂದು ಬಿಸಾಕಿದ ಪೇಪರ್ ಪ್ಲೇಟ್, ಐಸ್ ಕ್ರೀಂ ಕಪ್ ಗಳು ರಸ್ತೆಯುದ್ದಕ್ಕೂ ರಾಶಿ ಬಿದ್ದಿದ್ದವು. ಮುಂಜಾನೆ ತ್ಯಾಜ್ಯದ ದೃಶ್ಯಗಳು ಭಯಾನಕವಾಗಿ ಕಂಡವು. ಪ್ರತಿ ವರ್ಷವು ಕೂಡ ತ್ಯಾಜ್ಯ ವಿಲೇವಾರಿ ಕೆಲಸ ಪೌರ ಕಾರ್ಮಿಕರಿಗೆ ಸಾಹಸವೆ. ಈ ಬಾರಿ ಮುಂಜಾನೆ ನಾಲ್ಕು ಗಂಟೆಗೆ ರಸ್ತೆಗಿಳಿದ ಪೌರ ಕಾರ್ಮಿಕರು ಬೆಳಗ್ಗೆ 10 ಗಂಟೆ ವೇಳೆಗೆ ರಸ್ತೆಯನ್ನು ಶುಭ್ರಗೊಳಿಸಿದರು. 14 ಲೋಡಿನಷ್ಟು ತ್ಯಾಜ್ಯ ಸಂಗ್ರಹವಾಗಿದ್ದು, ಅದರಲ್ಲಿ ಹರಿದ ಚಪ್ಪಲಿಗಳೇ ಎರಡು ಲೋಡ್‌ಗಳಾಗಿವೆ.
110 ಮಂದಿ ಪೌರ ಕಾರ್ಮಿಕರೊಂದಿಗೆ ರಸ್ತೆಗಿಳಿದ ಪೌರಾಯುಕ್ತೆ ರೇಣುಕಾ ಖುದ್ದು ಮುಂದೆ ನಿಂತು ತ್ಯಾಜ್ಯ ವಿಲೇವಾರಿಗೆ ನಿರ್ದೇಶನ ನೀಡಿದರು. ಟ್ರ್ಯಾಕ್ಟರ್‌ಗಳಲ್ಲಿ ತ್ಯಾಜ್ಯ ತುಂಬಿದಂತೆಲ್ಲ 10ಕಿಮೀ ದೂರದ ಹಂಪಯ್ಯನಮಾಳಿಗೆ ವಿಲೇವಾರಿ ಕೇಂದ್ರಕ್ಕೆ ಒಯ್ದು ಸುರಿಯಲಾಯಿತು. ಪೌರ ಕಾರ್ಮಿಕರು ಶೋಭಾಯಾತ್ರೆ ಕಸ ಮಾತ್ರ ವಿಲೇವಾರಿ ಮಾಡಿದ್ದರಿಂದ ನಗರದ ಬಡಾವಣೆ ಸ್ವಚ್ಚತೆ ಕಾರ್ಯ ಮೂಲೆ ಗುಂಪಾಗಿತ್ತು.ಮಹಾಗಣಪತಿ ಸೇವಾ ಸಮಿತಿ ಉದಾಸೀನ:
ಚಿತ್ರದುರ್ಗದಲ್ಲಿ ನಡೆಯುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಡಿಜೆ ಸೇರಿದಂತೆ ಹಲವು ಬಾಬತ್ತುಗಳಿಗೆ ಕೋಟಿಗಟ್ಟಲೆ ಹಣ ವ್ಯಯ ಮಾಡಲಾಗುತ್ತದೆ. ಶೋಭಾಯಾತ್ರೆ ನಂತರ ಸ್ವಚ್ಛತೆ ಕಾರ್ಯದ ಜವಾಬ್ದಾರಿಯನ್ನು ಮಹಾಗಣಪತಿ ಸೇವಾ ಸಮಿತಿ ನಿರ್ವಹಣೆ ಮಾಡಬಹುದು. ಪ್ರತಿ ವರ್ಷವೂ ಮಾಧ್ಯಮದವರು ಈ ಬಗ್ಗೆ ಸಮಿತಿ ಗಮನಕ್ಕೆ ತಂದರು ಸಹಿತ ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತೇವೆ ಎಂದಷ್ಟೇ ಉತ್ತರಗಳು ಲಭ್ಯವಾಗುತ್ತವೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ.
ಗಣೇಶಮೂರ್ತಿ ಶೋಭಾಯಾತ್ರೆಗೆ ಚಿತ್ರದುರ್ಗದ ಹಲವು ಸಂಘಟನೆಗಳು ಕೈ ಜೋಡಿಸಿವೆ. ಈ ಸಂಘಟನೆಗಳು ಮುಂಜಾನೆ ಒಂದೆರೆಡು ತಾಸು ಕೈಯಲ್ಲಿ ಪೊರಕೆ ಹಿಡಿದರೆ ಇಡೀ ತ್ಯಾಜ್ಯವ ಹೊರ ಸಾಗಿಸಬಹುದು. ಯಾರಿಗಾದರೂ ಗುತ್ತಿಗೆ ಕೊಟ್ಟರೂ ನಗರ ಸ್ವಚ್ಚವಾಗುತ್ತದೆ. ಆದರೆ ಇದನ್ನೂ ಕೂಡಾ ಪೌರ ಕಾರ್ಮಿಕರೇ ಮಾಡಬೇಕೆಂಬ ಹಠ ಯಾಕೆ ಎಂಬ ಪ್ರಶ್ನೆ ನಾಗರಿಕರದ್ದು.*ಕರುನಾಡ ವಿಜಯ ಸೇನೆ ಅಸಮಧಾನ
ಶೋಭಾಯಾತ್ರೆಯ ತ್ಯಾಜ್ಯ ವಿಲೇವಾರಿಯನ್ನು ನಗರಸಭೆ ಪೌರ ಕಾರ್ಮಿಕರ ಹೆಗಲಿಗೆ ಹೊರಿಸುತ್ತಿರುವುದಕ್ಕೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಪ್ರತಿ ವರ್ಷವೂ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿ ವಿಸರ್ಜಿಸುವುದು ಕಳೆದ 18 ವರ್ಷಗಳಿಂದಲು ಹಬ್ಬದ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ನಾಡಿನಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವುದರ ಜೊತೆಗೆ ದೇಶ ವಿದೇಶಗಳಿಂದಲೂ ಆಗಮಿಸುವ ಭಕ್ತರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಆದರೆ ತ್ಯಾಜ್ಯ ವಿಲೇವಾರಿಯಲ್ಲಿ ಸಮಿತಿ ಉದಾಸೀನ ತೋರುವುದು ತರವಲ್ಲ ಎಂದು ಹೇಳಿದ್ದಾರೆ.ನಗರಸಭೆ ಪೌರ ಕಾರ್ಮಿಕರು ತ್ಯಾಜ್ಯ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಹಾಗಾಗಿ ಅಂತಹ ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ₹20 ಸಾವಿರ ಹಾಗೂ ಖಾಯಂ ಪೌರ ಕಾರ್ಮಿಕರಿಗೆ ತಲಾ 10 ಸಾವಿರ ರು. ಸಂಭಾವನೆಯನ್ನಾದರೂ ವಿಶ್ವ ಹಿಂದೂ ಪರಿಷತ್ ನೀಡಲಿ ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಶೋಭಾಯಾತ್ರೆಯ ಮಾರ್ಗದರ್ಶಕ ಬದ್ರಿನಾಥ್, ಉತ್ಸವ ಸಮಿತಿ ಅಧ್ಯಕ್ಷ ನವೀನ್, ಉಮೇಶ್ ಕಾರಜೋಳ, ರವಿ ಅವರಿಗೆ ಶಿವಕುಮಾರ್ ಮನವಿ ಸಲ್ಲಿಸಿದರು.