ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಮೈಸೂರು- ಊಟಿ ಹೆದ್ದಾರಿ ಬಳಿಯ ಸಾರ್ವಜನಿಕ ಗ್ರಂಥಾಲಯದ ಬಗ್ಗೆ ಕನ್ನಡಪ್ರಭ ವರದಿ ಆಧರಿಸಿ ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಪಣೀಂದ್ರ ಅವರು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಎಸ್.ಸರವಣ, ಪೊಲೀಸ್‌ ಇನ್ಸ್‌ಪೆಕ್ಟರ್‌ ಎನ್.ಜಯಕುಮಾರ್‌, ಗ್ರಂಥಪಾಲಕ ಜಯಸ್ವಾಮಿ ಮೇಲೆ ಸ್ವಯಂ ಪ್ರೇರಿತ(ಸುಮೋಟೋ) ಪ್ರಕರಣ ದಾಖಲಿಸಿದ ಬೆನ್ನಲ್ಲೆ ಎಚ್ಚೆತ್ತು ಲೋಕಾಯುಕ್ತರ ಛಾಟಿ ತಪ್ಪಿಸಿಕೊಳ್ಳಲು ಗ್ರಂಥಾಲಯದ ಮುಂದಿದ್ದ ಮಾಂಸಾಹಾರ ಹಾಗೂ ಪಾಸ್ಟ್‌ ಫುಡ್‌ ಅಂಗಡಿಗಳನ್ನು ಸೋಮವಾರ ಪುರಸಭೆ ಮುಖ್ಯಾಧಿಕಾರಿ ಎಸ್.ಸರವಣ ತೆರವುಗೊಳಿಸಿದ್ದಾರೆ.

ಕಳೆದ ಮೇ 20ರಂದು ಕನ್ನಡಪ್ರಭದಲ್ಲಿ ‘ಇರುವುದು ಗ್ರಂಥಾಲಯ ಬರುವುದು ದುರ್ನಾತʼ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಪಣೀಂದ್ರ ಅವರು ಜೂ.9 ರಂದು ಮೇಲ್ಕಂಡ ಮೂವರು ಅಧಿಕಾರಿಗಳ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು,ಪ್ರಕರಣದ ಪ್ರತಿವಾದಿಗಳಾಗಿ ಪರಿಗಣಿಸಿ ನೋಟಿಸ್‌ ಜಾರಿ ಮಾಡಿದ್ದಾರೆ.

ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಿದ್ದು, ಅಲ್ಲದೆ ಬರುವ ಜು.13ಕ್ಕೆ ವಿಚಾರಣೆ ನಿಗದಿಪಡಿಸಿ ಆದೇಶ ಹೊರಡಿಸಿದ್ದರು. ಉಪ ಲೋಕಾಯುಕ್ತರ ಆದೇಶದ ಪ್ರಕಾರ ಕನ್ನಡಪ್ರಭ ಪತ್ರಿಕೆ ಜೂ.10ರಂದು ‘ಗುಂಡ್ಲುಪೇಟೆ ಲೈಬ್ರರಿ ಸುತ್ತ ಅಶುಚಿ: ಲೋಕಾಯುಕ್ತ ಸುಮೋಟೊ ಕೇಸುʼ ಎಂದು ವರದಿ ಪ್ರಕಟಿಸಿ ಅಧಿಕಾರಿಗಳಿಗೆ ಎಚ್ಚರಿಸುವ ಕೆಲಸ ಮಾಡಿತ್ತು. ಎಚ್ಚೆತ್ತ ಪುರಸಭೆ ಮುಖ್ಯಾಧಿಕಾರಿ ಎಸ್.ಸರವಣ ಇಲ್ಲಿನ ಗ್ರಂಥಾಲಯದ ಮುಂದಿದ್ದ ಪಾಸ್ಟ್‌ ಫುಡ್‌ ಹಾಗೂ ಮಾಂಸಾಹಾರ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದವರ ಮನವೊಲಿಸಿ ಪೆಟ್ಟಿಗೆ ಅಂಗಡಿಗಳನ್ನು ಸ್ಥಳಾಂತರ ಗೊಳಿಸುವ ಮೂಲಕ ಮೈಸೂರು- ಊಟಿ ಹೆದ್ದಾರಿಯ ಫುಟ್‌ ಪಾತ್‌ ನಲ್ಲಿ ಸಾರ್ವಜನಿಕರು ಹಾಗೂ ಪಾದಚಾರಿಗಳು ಸರಾಗವಾಗಿ ನಡೆದುಕೊಂಡು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

-----


ಲೋಕಾಯುಕ್ತರು ಬರಬೇಕಾಯ್ತು!

ಗುಂಡ್ಲುಪೇಟೆ: ಸಾರ್ವಜನಿಕ ಗ್ರಂಥಾಲಯದ ಮುಂದಿನ ಗೂಡಂಗಡಿಗಳು ಲೋಕಾಯುಕ್ತರು ಮಧ್ಯ ಪ್ರವೇಶಿಸಿದ ಬಳಿಕ ತೆರವಾದದ್ದು ನಿಜಕ್ಕೂ ದುರಂತ ವಿಷಯವೇ ಸರಿ. ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕೆಲಸ ಮಾಡಿದರೆ ಲೋಕಾಯುಕ್ತರ ಎಂಟ್ರಿ ಕೊಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ರಾಜಕಾರಣಿಗಳ ಹಿಂಬಾಲಕರ ಮಾತಿಗೆ ಅಧಿಕಾರಿಗಳು ಮರುಳಾಗದೆ ಗೂಡಂಗಡಿಗಳ ತೆರವುಗೊಳಿಸಿದ್ದರೆ ಲೋಕಾಯುಕ್ತರು ಮಧ್ಯ ಪ್ರವೇಶಿಸುವ ಅಗತ್ಯವೇ ಇರಲಿಲ್ಲ. ಪಟ್ಟಣದ ಕೆಆರ್‌ಸಿ ರಸ್ತೆ, ಕಾಂಗ್ರೆಸ್‌ ಕಚೇರಿ ರಸ್ತೆ, ಟಿ.ಬಿ.ರಾಜರತ್ನಮ್ಮ ರಸ್ತೆ, ಹಳೆ ಆಸ್ಪತ್ರೆ ರಸ್ತೆಗಳಲ್ಲೂ ವಾಹನಗಳು ಸರಾಗ ಹೋಗಲು ಪುರಸಭೆ ಹಾಗೂ ಪೊಲೀಸರು ಇನ್ನಾದರೂ ಅವಕಾಶ ಮಾಡಿ ಕೊಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-- --

ಉಪ ಲೋಕಾಯುಕ್ತರ ಸೂಚನೆ ಹಾಗೂ ಅವಧಿಯೊಳಗೆ ಗ್ರಂಥಾಲಯದ ಮುಂದಿದ್ದ ಮಾಂಸಾಹಾರದಂಗಡಿ ಹಾಗೂ ಪಾಸ್ಟ್‌ ಫುಡ್‌ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಕೈಗೊಂಡ ಕ್ರಮದ ವರದಿಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಲಾಗುವುದು. ಸಾರ್ವಜನಿಕರ ಆರೋಗ್ಯ ಹಾಗೂ ಓದುವರಿಗೆ ಪ್ರಶಾಂತ ವಾತಾವರಣ ನಿರ್ಮಿಸಿ ಕೊಡುವುದು ಪುರಸಭೆಯ ಕರ್ತವ್ಯ.

ಎಸ್.ಸರವಣ, ಮುಖ್ಯಾಧಿಕಾರಿ, ಪುರಸಭೆ

-----

ಪಟ್ಟಣದಲ್ಲಿ ಕಿಷ್ಕಿಂಧೆಯಂತಿದ್ದ ಕಟ್ಟಡದಿಂದ ಹಳೆ ಬಿಇಇಒ ಕಚೇರಿಗೆ ಗ್ರಂಥಾಲಯ ಬರಲು ಕನ್ನಡಪ್ರಭದ ನಿರಂತರ ವರದಿಗಳು ಕಾರಣ. ಗ್ರಂಥಾಲಯದ ಮುಂದೆ ಹಾಕಿದ್ದ ಫಾಸ್ಟ್‌ ಫುಡ್‌ ಹಾಗೂ ಇತರೆ ಅಂಗಡಿಗಳ ತೆರವಿಗೆ ಲೋಕಾಯುಕ್ತರು ಕನ್ನಡಪ್ರಭ ವರದಿ ಗಮನಿಸಿ ಅಧಿಕಾರಿಗಳಿಗೆ ನೋಟಿಸ್‌ ನೀಡಿದ ಬಳಿಕ ತೆರವಾಗಿವೆ. ಇದು ಸಂತಸ ಪಡುವುದಲ್ಲ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿಗೆ ಹಿಡಿದ ಕೈ ಗನ್ನಡಿ.

-ಎಂ.ಶೈಲಕುಮಾರ್‌, ಜಿಲ್ಲಾ ಕಸಾಪ ಅಧ್ಯಕ್ಷ