ಸಾರಾಂಶ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದವರೆ ವರ್ಷ ಆಗಿದೆ. ಅಂದಿನಿಂದ ಇಂದಿನವರೆಗೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ದ್ವೇಷ ರಾಜಕಾರಣ ಇನ್ನೂ ಹೆಚ್ಚಾಗಿದೆ ಎಂದು ಮಾಜಿ ಸ್ವೀಕರ್ ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬಿಜೆಪಿ ಶಾಸಕ ಮುನಿರತ್ನ ಬಂಧನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದವರೆ ವರ್ಷ ಆಗಿದೆ. ಅಂದಿನಿಂದ ಇಂದಿನವರೆಗೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ದ್ವೇಷ ರಾಜಕಾರಣ ಇನ್ನೂ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಪಿಗಳನ್ನು ಕಾನೂನಾತ್ಮಕವಾಗಿ ಬಂಧಿಸುವುದಕ್ಕೆ ನಾವು ಏನು ಹೇಳುವುದಿಲ್ಲ. ಮುನಿರತ್ನ ವಿರುದ್ಧ ಎರಡು ಮೊಕದ್ದಮೆ ದಾಖಲಿಸಿದ್ದಾರೆ. ನೋಟಿಸ್ ನೀಡದೆ ಬಂಧನ ಮಾಡುವುದು ಎಷ್ಟು ಸರಿ, ವೈಯಕ್ತಿಕ ಸೇಡಿನಿಂದ ರಾಜಕೀಯ ಮಾಡುವುದು ಸರಿಯಲ್ಲ ಎಂದರು.ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಆ ಕಾನೂನನ್ನೇ ಕಾಂಗ್ರೆಸ್ ಪಾಲಿಸಬೇಕು.
ಕಾನೂನಿನಂತೆ ಪೊಲೀಸರು ಕೆಲಸ ಮಾಡಲಿ ಎಂದು ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.ಮುನಿರತ್ನ ಆಡಿಯೋ ಬಿಡುಗಡೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾತ್ರ ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರು, ಪರಾಜಿತ ಅಭ್ಯರ್ಥಿಗಳು ಹೇಳುತ್ತಾರೆ ಅಂದರೆ ಅವರಿಗೆ ಮಾಹಿತಿ ಇರಬಹುದು. ಅದರ ಬಗ್ಗೆ ಕೂಡ ಪೊಲೀಸರು ತನಿಖೆ ಮಾಡಲಿ ಎಂದು ಹೇಳಿದರು.
ಆರೋಪಿಗಳನ್ನು ಎಷ್ಟು ದಿನ ಪೊಲೀಸ್ ಕಸ್ಟಡಿಯಲ್ಲಿ ಇಡುತ್ತಾರೆ, ಒಳಗಿಟ್ಟು ಬೆದರಿಕೆ ಹಾಕುವುದು ಸರಿಯೇ, ಬಿಜೆಪಿಗರು ಕಾಂಗ್ರೆಸಿನ ಅಕ್ರಮಗಳನ್ನ ಬಯಲಿಗೆಳೆದಿದ್ದಾರೆ.ಅದಕ್ಕೆ ಈ ರೀತಿ ಬೆದರಿಕೆ ಹಾಕುವುದನ್ನು ಖಂಡಿಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.