ಸಾರಾಂಶ
ಬೆಂಗಳೂರು : ‘ನಿಮ್ಮ ಸಮುದಾಯ ಹಾಗೂ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹೀನವಾಗಿ ಮಾತನಾಡುವ ವ್ಯಕ್ತಿಯನ್ನು ನೀವು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ’ ಎಂದು ಕಾಂಗ್ರೆಸ್ಸಿನ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಶಾಸಕ ಮುನಿರತ್ನ ವಿಚಾರ ಸಂಬಂಧ ಬಿಜೆಪಿ, ಜೆಡಿಎಸ್ ಒಕ್ಕಲಿಗ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುನಿರತ್ನ ಮಾಡಿರುವ ಕೃತ್ಯವನ್ನು ಕಾಂಗ್ರೆಸ್ ಪಕ್ಷದ ನಾಯಕರೇನಾದರೂ ಮಾಡಿದ್ದರೆ ನಿಮ್ಮ ಮಾತುಗಳು ಯಾವ ರೀತಿ ಇರುತ್ತಿದ್ದವು? ಇದಕ್ಕೆ ರಾಜಕೀಯವನ್ನು ಬೆರೆಸಬೇಡಿ, ಸರಿಯಾಗಿ ಮಾತನಾಡಿ. ನಿಮ್ಮ ಪಕ್ಷ ಇದಕ್ಕೆ ಬೆಂಬಲವಾಗಿ ನಿಂತಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಆಗ್ರಹಿಸಿದರು.
ಕೆಲವು ಮುಖಂಡರು, ವಿರೋಧ ಪಕ್ಷದ ನಾಯಕರು ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಘಟನೆಯ ಎಲ್ಲಾ ವಿವರಗಳು ತೆರೆದ ಪುಸ್ತಕದಂತೆ ಇರುವಾಗ ಸಮರ್ಥನೆ ಮಾಡಿಕೊಳ್ಳುವುದು ಸರಿಯೇ ಎಂದು ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ನಾವು ಯಾರೂ ಮುನಿರತ್ನ ಅವರಿಗೆ ಕೆಟ್ಟ ಮಾತು ಮಾತನಾಡಿ ಹಾಗೂ ಕಮಿಷನ್ ತೆಗೆದುಕೊಳ್ಳಿ ಎಂದು ಹೇಳಿರಲಿಲ್ಲ. ಮಹಿಳೆಯರ ಬಗ್ಗೆ ಆಡಿರುವ ಕೀಳು ಮಾತುಗಳನ್ನು ಯಾರೂ ಕೂಡ ಸಹಿಸಲು ಆಗುವುದಿಲ್ಲ. ಜಾತಿ, ಜಾತಿಗಳ ಮಧ್ಯೆ ಸಂಘರ್ಷ ತರುವಂತಹ ಮಾತುಗಳು, ಜಾತಿ ಧರ್ಮಗಳನ್ನು ಬಹಳ ಕೀಳಾಗಿ ನೋಡುವಂತಹದ್ದು ಸಹಿಸಲು ಆಗುವುದಿಲ್ಲ ಎಂದರು.
ಬಂಧನದ ಹಿಂದೆ ರಾಜಕೀಯ ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಯಾವ ವಿಚಾರದಲ್ಲೂ ನಾನು ಭಾಗಿಯಾಗುತ್ತಿಲ್ಲ. ದಿನ ಬೆಳಗಾದರೆ, ಕೂತರೂ ನಿಂತರೂ ರಾಜಕೀಯ ಮಾಡಲು ಆಗುತ್ತದೆಯೇ? ಸಿನಿಮಾ ನಿರ್ಮಾಣ ಮತ್ತು ನಿರ್ದೇಶನವನ್ನು ಬಿಜೆಪಿ ಮತ್ತು ಜೆಡಿಎಸ್ ಅವರಿಗೆ ಬಿಟ್ಟಿದ್ದೇವೆ. ಸಮಯ ಬಂದಾಗ ಅದಕ್ಕೆ ಉತ್ತರವನ್ನೂ ಕೊಡುತ್ತೇವೆ ಎಂದು ಹೇಳಿದರು.
;Resize=(690,390))
;Resize=(128,128))
;Resize=(128,128))
;Resize=(128,128))