ಸಾರಾಂಶ
ರಾಣಿಬೆನ್ನೂರು: ಕಳ್ಳತನ ಮಾಡಿದಾಗ ಬೇರೆಯವರಿಗೆ ಮಾಹಿತಿ ನೀಡುತ್ತಿದ್ದ ಎನ್ನುವ ಕಾರಣಕ್ಕೆ ಸ್ನೇಹಿತನ ಜತೆ ಸೇರಿ ಸ್ವಂತ ಅಣ್ಣನನ್ನೇ ಕೊಲೆ ಮಾಡಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಹೊರವಲಯದ ಹುಣಸಿಕಟ್ಟೆ ರಸ್ತೆಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಮೃತನ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು.ಹಿರಿಯೂರಿನ ಹಾಗೂ ಸ್ಥಳೀಯ ಮೃತ್ಯುಂಜಯ ನಗರದಲ್ಲಿ ವಾಸವಾಗಿದ್ದ ರಾಮು ಗುರುಪ್ರಸಾದ ನಾಗರಾಜ (35) ಕೊಲೆಯಾಗಿದ್ದ ಅಣ್ಣ.ಈತನ ಸಹೋದರ ಪ್ರಸಾದ ಗುರುಪ್ರಸಾದ ನಾಗರಾಜ (32) ಹಾಗೂ ಸ್ನೇಹಿತ ರಾಣಿಬೆನ್ನೂರ ನಿವಾಸಿ ಶ್ರೀಕಾಂತ ಮಾಲತೇಶ ಗುಡಗೂರ (30) ಸೇರಿ 2023 ಮೇ ತಿಂಗಳಿನಲ್ಲಿ ರಾಮುನನ್ನು ಕೊಲೆ ಮಾಡಿ ನಗರದ ಹೊರವಲಯದ ಹುಣಸಿಕಟ್ಟೆ ರಸ್ತೆಯ ಅರಣ್ಯ ಪ್ರದೇಶದಲ್ಲಿ ಶವ ಹೂತು ಹಾಕಿದ್ದರು.ಈ ಕುರಿತು ಕೊಲೆ ಆರೋಪಿಗಳು ಸೆ. 11ರಂದು ಲಕ್ಷ್ಮೇಶ್ವರ ಪೊಲೀಸರ ಬಳಿ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಾಗ ಸತ್ಯಾಂಶ ಬಾಯಿಬಿಟ್ಟಿದ್ದರು. ಪೊಲೀಸರು ಮೃತನ ತಾಯಿ ಬಳಿಯಿಂದ ರಾಮು ಕೊಲೆ ಪ್ರಕರಣದ ಕುರಿತು ಇಲ್ಲಿಯ ಗ್ರಾಮೀಣ ಠಾಣೆಯಲ್ಲಿ ದೂರು ಪಡೆದುಕೊಂಡು ತನಿಖೆ ಕೈಗೊಂಡಿದ್ದರು.ಈ ಹಿನ್ನೆಲೆಯಲ್ಲಿ ಸೋಮವಾರ ಉಪ ವಿಭಾಗಾಧಿಕಾರಿ ಚನ್ನಪ್ಪ ಹಾಗೂ ತಹಸೀಲ್ದಾರ್ ಆರ್.ಎಚ್. ಭಾಗವಾನ್ ನೇತೃತ್ವದಲ್ಲಿ ಪೊಲೀಸರು, ವೈದ್ಯರು ಹಾಗೂ ಎಫ್‌ಎಸ್‌ಎಲ್ ತಂಡದವರು ಆರೋಪಿಗಳನ್ನು ಕರೆತಂದು ಶವ ಹೂತ್ತಿಟ್ಟ ಜಾಗ ಪತ್ತೆ ಹಚ್ಚಿಸಿದರು. ನಂತರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ಶವದ ಅಸ್ತಿ ಪಂಜರ ಶೇಖರಿಸಿ ಎಫ್‌ಎಸ್‌ಎಲ್ ತಂಡದವರಿಗೆ ಮುಂದಿನ ತನಿಖೆಗಾಗಿ ನೀಡಲಾಯಿತು.