ಸಾರಾಂಶ
ಬೆಂಗಳೂರು : ಕೋರಮಂಗಲದ ಪೇಯಿಂಗ್ ಗೆಸ್ಟ್‌ನಲ್ಲಿ (ಪಿಜಿ) ನಡೆದಿದ್ದ ಬಿಹಾರ ಮೂಲದ ಯುವತಿ ಹತ್ಯೆ ಕೃತ್ಯದ ತನಿಖೆಯನ್ನು ಒಂದೇ ತಿಂಗಳಲ್ಲಿ ಮುಕ್ತಾಯಗೊಳಿಸಿ ಆರೋಪಿ (ಮೃತಳ ಸ್ನೇಹಿತೆಯ ಪ್ರಿಯತಮ) ವಿರುದ್ಧ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಶನಿವಾರ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಕೋರಮಂಗಲದ ವಿ.ಆರ್. ಲೇಔಟ್‌ನ ಭಾರ್ಗವಿ ಸ್ಟೇಯಿಂಗ್ ಹೋಂ ಫಾರ್ ವುಮನ್ಸ್‌ನಲ್ಲಿ ಜು.23 ರಂದು ಖಾಸಗಿ ಕಂಪನಿ ಉದ್ಯೋಗಿ ಕೃತಿಕುಮಾರಿ (26) ಹತ್ಯೆ ನಡೆದಿತ್ತು. ಈ ಕೃತ್ಯದ ಸಂಬಂಧ ಮೃತಳ ಸ್ನೇಹಿತೆ ಪ್ರಿಯಕರ ಅಭಿಷೇಕ್ ಘೋಷಿ ಎಂಬಾತನನ್ನು ಕೋರಮಂಗಲ ಠಾಣೆ ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿ ಕರೆತಂದಿದ್ದರು. ಪ್ರಕರಣದ ತನಿಖೆಯನ್ನು ಕ್ಷಿಪ್ರವಾಗಿ ಮುಗಿಸಿ ಆರೋಪಿ ವಿರುದ್ಧ 1200 ಪುಟಗಳ ಆರೋಪಪಟ್ಟಿಯನ್ನು ಇನ್ಸ್‌ಪೆಕ್ಟರ್ ನಟರಾಜ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಹತ್ಯೆಗೆ ಪ್ರೇಮ ಪ್ರಕರಣ ಕಾರಣ:
ಎಲೆಕ್ಟ್ರಾನಿಕ್ ಸಿಟಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಎಂಬಿಎ ಓದಿದ್ದ ಬಿಹಾರ ಮೂಲದ ಕೃತಿ, ಕಳೆದ ಮಾರ್ಚ್‌ನಲ್ಲಿ ಕೋರಮಂಗಲ ಹತ್ತಿರದ ಖಾಸಗಿ ಕಂಪನಿಯಲ್ಲಿ ನೌಕರಿಗೆ ಸೇರಿದ್ದಳು. ಮೃತ ಕೃತಿ ಹಾಗೂ ಆರೋಪಿ ಅಭಿಷೇಕ್‌ನ ಪ್ರಿಯತಮೆ ಸ್ನೇಹಿತೆಯರಾಗಿದ್ದು, ಒಂದೇ ಕಂಪನಿಯಲ್ಲಿ ಈ ಗೆಳತಿಯರು ಕೆಲಸ ಮಾಡುತ್ತಿದ್ದರು. ಹೀಗಾಗಿ ಪಿಜಿಗೆ ಆಗಾಗ ತನ್ನ ಪ್ರಿಯತಮೆ ಭೇಟಿಗೆ ಹೋದಾಗ ಆತನಿಗೆ ಕೃತಿ ಪರಿಚಯವಾಗಿದ್ದಳು.
ಮಧ್ಯಪ್ರದೇಶದ ಭೋಪಾಲ್‌ನಲ್ಲೇ ನೆಲೆಸಿದ್ದ ಅಭಿಷೇಕ್, ಕೆಲಸವಿಲ್ಲದೆ ಅಲೆಯುತ್ತಿದ್ದ. ಇದೇ ವಿಚಾರವಾಗಿ ಪ್ರೇಮಿಗಳ ಮಧ್ಯೆ ಮನಸ್ತಾಪವಾಗಿತ್ತು. ಕಳೆದ ತಿಂಗಳು ನಗರಕ್ಕೆ ಬಂದಿದ್ದ ಆತ, ತನಗೆ ಭೋಪಾಲ್‌ನಲ್ಲೇ ಕೆಲಸಕ್ಕೆ ಸಿಕ್ಕಿದೆ. ಅಲ್ಲಿಯೇ ಮದುವೆಯಾಗಿ ನೆಲೆಸೋಣ ಎಂದು ಹೇಳಿ ಪ್ರಿಯತಮೆಯನ್ನು ಕರೆದೊಯ್ಯಲು ಮುಂದಾಗಿದ್ದ. ಆದರೆ ಈ ಪ್ರಸ್ತಾಪ ಒಪ್ಪದ ಆಕೆ, ಅಭಿಷೇಕ್‌ನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಳು. ಈ ಬೆಳವಣಿಗೆಯಿಂದ ಆತ ಕೆರಳಿದ. ತನಗೆ ಅಭಿಷೇಕ್ ಕಾಟ ಕೊಡುತ್ತಿರುವ ಸಂಗತಿಯನ್ನು ಕೃತಿ ಬಳಿ ಆಕೆಯ ಸ್ನೇಹಿತೆ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಆಗ ಗೆಳತಿಗೆ ನೆರವಿಗೆ ಬಂದ ಕೃತಿ, ತನ್ನ ಗೆಳತಿಗೆ ಅಭಿಷೇಕ್‌ನ ಸಂಪರ್ಕಕ್ಕೆ ಸಿಗದಂತೆ ಬೇರೆಡೆ ಇಟ್ಟಿದ್ದಳು.
70 ರು. ಕೊಟ್ಟು ಚಾಕು ಖರೀದಿಸಿದ
ತನ್ನ ಪ್ರೀತಿಗೆ ಕೃತಿ ಅಡ್ಡಿಯಾಗಿದ್ದಾಳೆ ಎಂದು ಸಿಟ್ಟಾದ ಅಭಿಷೇಕ್, ಕೃತಿಯನ್ನು ಹತ್ಯೆ ಮಾಡಲು ವಿಜಿಪುರದ ಅಂಗಡಿಯಲ್ಲಿ 70 ರು. ಕೊಟ್ಟು ಚಾಕು ಖರೀದಿಸಿದನು, ಜು.23 ರಂದು ಮಂಗಳವಾರ ರಾತ್ರಿ ಕೋರಮಂಗಲದ ಕೃತಿ ನೆಲೆಸಿದ್ದ ಪಿಜಿಯ ಕೋಣೆಗೆ ತೆರಳಿ ಭೀಕರವಾಗಿ ಮನಬಂದಂತೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಹತ್ಯೆ ಕೃತ್ಯದ ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿತ್ತು. ಹತ್ಯೆ ನಡೆದ 2 ದಿನಗಳಲ್ಲೇ ಆತನನ್ನು ಪೊಲೀಸರು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಒಂದೇ ತಿಂಗಳಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸಾರಥ್ಯದಲ್ಲಿ ಮುಕ್ತಾಯಗೊಳಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ.
1205 ಪುಟಗಳು, 85 ಸಾಕ್ಷಿಗಳು
ಕೊಲೆ ಪ್ರಕರಣ ಸಂಬಂಧ ಆರೋಪಿ ಅಭಿಷೇಕ್ ವಿರುದ್ಧ ನ್ಯಾಯಾಲಯಕ್ಕೆ 1205 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಇದರಲ್ಲಿ ಆರೋಪಿಯ ಪ್ರಿಯತಮೆ, ಪಿಜಿಯ ಸಹಪಾಠಿಗಳು, ಪಿಜಿ ಮಾಲಿಕ ಹಾಗೂ ಕಾವಲುಗಾರರು ಹಾಗೂ ಚಾಕು ಖರೀದಿಸಿದ್ದ ಅಂಗಡಿ ಮಾಲಿಕ ಸೇರಿದಂತೆ 85 ಜನರ ಸಾಕ್ಷಿಗಳು ಹೇಳಿಕೆಗಳಿವೆ. ಅಲ್ಲದೆ ವಿಧಿ ವಿಜ್ಞಾನ ಪ್ರಯೋಗಾಲದ (ಎಫ್‌ಎಸ್‌ಎಲ್) ಹಾಗೂ ವೈದ್ಯಕೀಯ ವರದಿಗಳನ್ನು ಪೊಲೀಸರು ಲಗತ್ತಿಸಿದ್ದಾರೆ.