ಜಿಲ್ಲೆಯಲ್ಲಿ ನಡೆದಿರುವ ಹತ್ಯೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ನೊಂದ ಕುಟುಂಬಗಳಿಗೆ ನೆರವು ನೀಡಲು ನಮ್ಮ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯಲ್ಲಿ ನಡೆದಿರುವ ಹತ್ಯೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ನೊಂದ ಕುಟುಂಬಗಳಿಗೆ ನೆರವು ನೀಡಲು ನಮ್ಮ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಜಿಲ್ಲೆ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ಸುಮಾರು 37 ವರ್ಷದ ಭೂಮಾನಂದ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡ ಲಾಗಿದೆ. ಈ ಪ್ರಕರಣದಲ್ಲಿ ಭೂಮಾನಂದ ಅವರ ಕುಟುಂಬಕ್ಕೆ ನೆರವು ನೀಡುವ ಉದ್ದೇಶದಿಂದ ಅವರ ಧರ್ಮಪತ್ನಿ ಗೌರಮ್ಮ ಅವರಿಗೆ ಎರಡು ಎಕರೆ ಜಮೀನು ಹಾಗೂ ಬೋರ್‌ವೆಲ್ ಒದಗಿಸಲು ನಿಗಮದಿಂದ ತೀರ್ಮಾನಿಸಲಾಗಿದೆ ಎಂದರು.
ಇವರ ಕುಟುಂಬಕ್ಕೆ ಕಳೆದ ವಾರ ಸಮಾಜ ಕಲ್ಯಾಣ ಇಲಾಖೆ ಸಚಿವರು ಭೇಟಿ ನೀಡಿರುವ ಕುರಿತು ತಮ್ಮ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿಗಳಿಗೆ ಎರಡು ಎಕರೆ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಜಮೀನು ಮಂಜೂರಾದ ತಕ್ಷಣ ಬೋರ್ವೆಲ್‌ಗಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಲು ನಿಗಮದಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.ಭೂಮಾನಂದ ಅವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ ಪರಿಹಾರಧನ ನೀಡಲಾಗಿದ್ದು, ಹೆಚ್ಚುವರಿ ಪರಿಹಾರ ಧನವನ್ನು ಅವರ ಮೂವರು ಮಕ್ಕಳ ಹೆಸರಿನಲ್ಲಿ ಎಫ್‌ಡಿ (ಸ್ಥಿರ ಠೇವಣಿ) ರೂಪದಲ್ಲಿ ಇರಿಸುವಂತೆ ತಾಯಿಗೆ ಸಲಹೆ ನೀಡಲಾಗಿದೆ. ಇದರಿಂದ ಅವರ ಮಕ್ಕಳ ಭವಿಷ್ಯದ ಶಿಕ್ಷಣ ಹಾಗೂ ಜೀವನ ನಿರ್ವಹಣೆಗೆ ಆರ್ಥಿಕ ಭದ್ರತೆ ದೊರೆಯಲಿದೆ ಎಂದು ತಿಳಿಸಿದರು.
ಇದೇ ವೇಳೆ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದಲ್ಲಿ ರಾಣಿಮ್ಮ ಎಂಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಪ್ರಕರಣದಲ್ಲಿಯೂ ನೊಂದ ಕುಟುಂಬಕ್ಕೆ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ರಾಣೆಮ್ಮ ಅವರ ಪತಿ ತಿಪ್ಪಣ್ಣ ಅವರಿಗೆ ಎರಡು ಎಕರೆ ಜಮೀನು ಹಾಗೂ ಬೋರ್‌ವೆಲ್ ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ರಾಣಿಮ್ಮ ಅವರ ಮಕ್ಕಳಾದ ಸುಜಾತಾ ಮತ್ತು ಪ್ರಸನ್ನ ಅವರು ಹೆಚ್ಚಿನ ಶಿಕ್ಷಣ ಪಡೆದಿಲ್ಲ. ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ನೊಂದ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಅವಕಾಶವಿದ್ದು, ಈ ಕುರಿತು ಸಮಾಜ ಕಲ್ಯಾಣ ಸಚಿವರು ಅಗತ್ಯ ಕ್ರಮ ಕೈಗೊಳ್ಳು ತ್ತಿದ್ದಾರೆ. ಆದರೆ ಸರ್ಕಾರಿ ಉದ್ಯೋಗಕ್ಕೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಇಲ್ಲದಿರುವುದರಿಂದ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಭೂಮಾನಂದ ಅವರ ಸಹೋದರರಿಗೂ ನಿಗಮದ ನಿಯಮಾನುಸಾರ ನೆರವು ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅವರ ಮೂವರು ಸಹೋದರರಿಗೆ ತಲಾ ಒಂದು ವಾಹನ ನೀಡಲು ನಿರ್ಧರಿಸಲಾಗಿದ್ದು, ಚಾಲನಾ ಪರವಾನಗಿ ಹೊಂದಿರುವವರಿಗೆ ವಾಹನ ಒದಗಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಈ ವೇಳೆ ಮತ್ತೊಂದು ಪ್ರಕರಣದಲ್ಲಿ ಅಶ್ವಿನಿ ಅವರ ಕುಟುಂಬಕ್ಕೂ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣವು ಚಲುವಾದಿ ಸಮುದಾಯಕ್ಕೆ ಸಂಬಂಧಿಸಿದ್ದಾಗಿದ್ದು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ತಮ್ಮನ್ನು ಸಂಪರ್ಕಿಸಿ ಕುಟುಂಬಕ್ಕೆ ಎರಡು ಎಕರೆ ಜಮೀನು ಒದಗಿಸುವ ಕುರಿತು ಚರ್ಚಿಸಿ ದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಭೂಮಾನಂದ ಅವರ ಹತ್ಯೆ, ರಾಣಿಮ್ಮ ಅವರ ಅತ್ಯಾಚಾರ ಮತ್ತು ಹತ್ಯೆ ಹಾಗೂ ಅಶ್ವಿನಿ ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಗಳಂತಹ ಘಟನೆಗಳಿಂದ ನೊಂದ ಕುಟುಂಬಗಳಿಗೆ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಅಭಿವೃದ್ಧಿ ನಿಗಮಗಳ ಮೂಲಕ ಸಾಧ್ಯವಾದಷ್ಟು ಎಲ್ಲ ರೀತಿಯಲ್ಲಿ ನೆರವು ಒದಗಿಸಲಾಗುತ್ತಿದೆ ಎಂದರು.ಹದ್ದಿನಾಳ, ಕರಡಕಲ್, ಹೊಕ್ರಾಣಿಗೆ ಭೇಟಿ, ಸಾಂತ್ವನ
ರಾಯಚೂರು: ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ ಅವರು ಜಿಲ್ಲೆ ದೇವದುರ್ಗ ತಾಲೂಕಿನ ಹದ್ದಿನಾಳದ ಭೂಮಾನಂದ, ಲಿಂಗಸುಗೂರು ತಾಲೂಕಿನ ರಾಣೆಮ್ಮ ಹಾಗೂ ಸಿರವಾರ ತಾಲೂಕಿನ ಹೊಕ್ರಾಣಿಯ ಅಶ್ವಿನಿ ಅವರ ಮನೆಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರ ಹಾಗೂ ನಿಗಮದಿಂದ ದೊರೆಯುವ ಸವಲತ್ತುಗಳನ್ನು ಕಲ್ಪಿಸಿಕೊಡುವುದು ಹಾಗೂ ಆರೋಪಿತರಿಗೆ ಶಿಕ್ಷೆ ವಿಚಾರವಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ತಿಳಿಸಿದರು.ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ, ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಜಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕುಟುಂಬದ ಸದಸ್ಯರು ಹಾಗೂ ಸಂಘಟನೆಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಭೂಮಾನಂದ ಕುಟುಂಬಕ್ಕೆ ನಿಗಮದಿಂದ ಸೂಕ್ತ ಪರಿಹಾರ: ಜಿ.ಎಸ್.ಮಂಜುನಾಥದೇವದುರ್ಗ: ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದನ ಕುಟುಂಬಕ್ಕೆ ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವದು ಎಂದು ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ ತಿಳಿಸಿದರು.
ಹದ್ದಿನಾಳ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ,ಕುಟುಂಬಸ್ತರಿಗೆ ಸಾಂತ್ವನ ತಿಳಿಸಿದರು. ಬಳಿಕ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆ ಕುರಿತು ಕಳವಳ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಮುನಿಯಪ್ಪರವರ ಸೂಚನೆ ಮೇರೆಗೆ 2 ಎಕರೆ ಜಮೀನು ನೀಡುವುದು ಪ್ರಗತಿ ಯಲ್ಲಿದೆ. ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ ಭೂಮಾನಂದನ ಮಕ್ಕಳಿಗೆ ಪಿಯು ಹಂತದವರೆಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಣ ಕೊಡಿಸುವುದು, ಭೂಮಾನಂದನ ಸಹೋದರನಿಗೆ ಬ್ರಿಗ್ಸ್ ತಯಾರು ಘಟಕ್ಕೆ ₹4 ಲಕ್ಷ ಸಹಾಯ ಧನ,ಮತ್ತೊಮ್ಮ ಸಹೋದರನಿಗೆ ಕಾರು ಕೊಡಿಸಲಾಗುವುದು. ಭೂಮಾನಂದನ ಪತ್ನಿಗೆ ಈಗಾಲೇ ಸರ್ಕಾರಿ ನೌಕರಿ ಕೊಡಿಸುವ ಪ್ರಯತ್ನಗಳು ಸಾಗಿವೆ. ಶಾಸಕಿ ಕರೆಮ್ಮ ಜಿ.ನಾಯಕರ ಮನವಿ ಮೇರೆಗೆ ಇತ್ತೀಚಿಗೆ ಮೇಲ್ಛಾವಣಿ ಕುಸಿದು 3 ವಿದ್ಯಾರ್ಥಿಗಳ ಕುಟುಂಬಕ್ಕೂ ಪರಿಹಾರ ನೀಡಲಾಗುವುದು. ಕುಟುಂಬಗಳ ವಯಕ್ತಿಕ ಮಾಹಿತಿ ಪಡೆದು ನಿಗಮದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ, ಕಾಂಗ್ರೆಸ್ ಪಕ್ಷದ ಮುಖಂಡ ಗಂಗಪ್ಪಯ್ಯ ಪೂಜಾರಿ, ಜೆಡಿಎಸ್‌ನ ರಂಗಮ್ಮ ಇರಬಗೇರಾ ಇದ್ದರು.