ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಮುರ್ಡೇಶ್ವರ

| Published : Jan 19 2025, 02:17 AM IST

ಸಾರಾಂಶ

ಇಲ್ಲಿ ಪ್ರವಾಸೋದ್ಯಮ ಬೆಳೆಯಲು ಮತ್ತಷ್ಟು ವಿಪುಲ ಅವಕಾಶ ಇದೆ. ಸರ್ಕಾರ ಮುರ್ಡೇಶ್ವರದಲ್ಲಿ ಪ್ರವಾಸೋದ್ಯಮದ ಮತ್ತಷ್ಟು ಅಭಿವೃದ್ಧಿಗೆ ಮುಂದಾದಲ್ಲಿ ಸ್ಥಳೀಯರಿಗೆ ಸಾಕಷ್ಟು ಉದ್ಯೋಗಾವಕಾಶ ಲಭ್ವವಾಗಲಿದೆ.

ರಾಘವೇಂದ್ರ ಹೆಬ್ಬಾರ್

ಭಟ್ಕಳ: ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಮುರ್ಡೇಶ್ವರ ಎಲ್ಲರ ಆಕರ್ಷಣೀಯ ಸ್ಥಳವಾಗಿದೆ. ಮುರ್ಡೇಶ್ವರದ ಸೊಬಗನ್ನು ಒಮ್ಮೆ ವೀಕ್ಷಿಸಿದರೆ ಪುನಃ ಇಲ್ಲಿಗೆ ಬರಬೇಕು. ಇಲ್ಲಿನ ಸೊಬಗನ್ನು ಮಗದೊಮ್ಮೆ ವೀಕ್ಷಿಸಬೇಕು ಎನಿಸದೇ ಇರದು.

ಇತ್ತೀಚಿನ ವರ್ಷಗಳಲ್ಲಿ ಮುರ್ಡೇಶ್ವರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ. ದಿನದಿಂದ ದಿನಕ್ಕೆ ಕ್ಷೇತ್ರ ಬೆಳೆಯುತ್ತಿದೆ. ಇಲ್ಲಿ ಶ್ರೀ ಮುರುಡೇಶ್ವರ ದೇವಸ್ಥಾನ, ಬೃಹದಾಕಾರದ ಈಶ್ವರನ ಮೂರ್ತಿ, ಸುಂದರ ರಾಮೇಶ್ವರ ದೇವಸ್ಥಾನ. ಶನೈಶ್ಚರ ದೇವಸ್ಥಾನ, ರಾಜಗೋಪುರ, ಸುಂದರ ಕಡಲತೀರ, ಪ್ರಕೃತಿ ಸೌಂದರ್ಯ ಹೀಗೆ ಎಲ್ಲವೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮುರ್ಡೇಶ್ವರ ಕಡಲತೀರದ ಪ್ರವಾಸಿ ಚಟುವಟಿಕೆ ಆಕರ್ಷಣೀಯವಾಗಿದೆ. ರಾಜಗೋಪುರದ ತುತ್ತತುದಿಯಲ್ಲಿ ನಿಂತು ಸೌಂದರ್ಯ ವೀಕ್ಷಿಸುವುದೇ ಒಂದು ಸುಂದರ ಅನುಭವ. ಬೃಹಾದಾಕಾರದ ಈಶ್ವರನ ಮೂರ್ತಿ, ಈ ಮೂರ್ತಿ ಒಳಗಡೆ ಪಂಚಶಿವಕ್ಷೇತ್ರಗಳು ಹೇಗಾಯಿತೆಂಬ ಭೂ ಕೈಲಾಸದ ಚಿತ್ರಣವನ್ನು ಸುಂದರವಾಗಿ ನಿರ್ಮಿಸಲಾಗಿದ್ದು, ಇದು ಪ್ರವಾಸಿಗರ ಅತ್ಯಾಕರ್ಷಣೆಗೊಳಗಾಗಿದೆ. ಇದನ್ನು ವೀಕ್ಷಿಸಿದರೆ ಮತ್ತೊಮ್ಮೆ ವೀಕ್ಷಿಸಬೇಕೆನಿಸುತ್ತದೆ. ಮುರ್ಡೇಶ್ವರದ ಕೋಟೆಗುಡ್ಡವೂ ಆಕರ್ಷಣೀಯ ಸ್ಥಳವಾಗಿದ್ದು, ಸಂಜೆ ವೇಳೆ ಸೂರ್ಯಾಸ್ತದ ಕ್ಷಣ ವೀಕ್ಷಿಸಲು ಪ್ರವಾಸಿಗರು ಇಲ್ಲಿ ಮುಗಿ ಬೀಳುತ್ತಾರೆ.

ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿಯ ಸಮುದ್ರದಿಂದ ಸ್ವಲ್ಪ ದೂರದಲ್ಲೇ ನೇತ್ರಾಣಿ ದ್ವೀಪ ಇದ್ದು, ಇದು ಪ್ರವಾಸಿಗರದ ಅಚ್ಚುಮೆಚ್ಚಿನ ಸ್ಥಳವಾಗಿದೆ. ನೇತ್ರಾಣಿ ಗುಡ್ಡದ ಸನಿಹದ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ನಡೆಸಲಾಗುತ್ತಿದ್ದು, ಈಗಾಗಲೇ ಚಿತ್ರನಟರು, ಐಪಿಎಸ್, ಐಎಎಸ್ ಅಧಿಕಾರಿಗಳು, ಸೆಲಬ್ರಿಟಿಗಳು ಹೀಗೆ ಸ್ಕೂಬಾ ಡೈವಿಂಗ್ ನಡೆಸಿ ಗಮನ ಸೆಳೆದಿದ್ದಾರೆ. ಆರ್.ಎನ್. ಶೆಟ್ಟಿ ಅವರ ಇಚ್ಛಾಶಕ್ತಿಯಿಂದ ಮುರ್ಡೇಶ್ವರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕಾರಣವಾಗಿದ್ದು, ಇದೀಗ ಅವರ ಮಕ್ಕಳೂ ಮುರ್ಡೇಶ್ವರದ ಅಭಿವೃದ್ಧಿ ಬಗ್ಗೆ ತಂದೆಯವರಂತೆ ಇಚ್ಛಾಶಕ್ತಿ ಹೊಂದಿದ್ದಾರೆ.

ಇಲ್ಲಿ ಪ್ರವಾಸೋದ್ಯಮ ಬೆಳೆಯಲು ಮತ್ತಷ್ಟು ವಿಪುಲ ಅವಕಾಶ ಇದೆ. ಸರ್ಕಾರ ಮುರ್ಡೇಶ್ವರದಲ್ಲಿ ಪ್ರವಾಸೋದ್ಯಮದ ಮತ್ತಷ್ಟು ಅಭಿವೃದ್ಧಿಗೆ ಮುಂದಾದಲ್ಲಿ ಸ್ಥಳೀಯರಿಗೆ ಸಾಕಷ್ಟು ಉದ್ಯೋಗಾವಕಾಶ ಲಭ್ವವಾಗಲಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು. ಬೆಳೆಯುತ್ತಿರುವ ಮುರ್ಡೇಶ್ವರದಲ್ಲಿ ಒಳಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಸರ್ಕಾರದಿಂದ ಆಗಬೇಕು. ಪ್ರವಾಸೋದ್ಯಮ ಇಲಾಖೆಯೂ ಇಲ್ಲಿನ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿಸಲು ಮುಂದಾಗಬೇಕು ಎನ್ನುವ ಆಗ್ರಹ ಸ್ಥಳೀಯರಿಂದ ಕೇಳಿ ಬಂದಿದೆ.