ಬಹು ನಿರೀಕ್ಷೆಯ ಮುರ್ಡೇಶ್ವರ-ತಿರುಪತಿ ರೈಲು ಆರಂಭ

| Published : Oct 13 2024, 01:07 AM IST

ಸಾರಾಂಶ

ಹೊಸದಾಗಿ ಆರಂಭವಾದ ಮುರ್ಡೇಶ್ವರ ತಿರುಪತಿ ರೈಲಿಗೆ ಮುರ್ಡೇಶ್ವರದಲ್ಲಿ ಶನಿವಾರ ಹೂ ಮಾಲೆ ಹಾಕಿ, ಬಾಳೆಗಿಡ ಕಟ್ಟಿ ಪೂಜೆ ನೆರವೇರಿಸಲಾಯಿತು. ಭಟ್ಕಳದಲ್ಲಿ ರೈಲಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ಭಟ್ಕಳ: ಮುರ್ಡೇಶ್ವರ-ತಿರುಪತಿ ರೈಲಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ಮೂಲಕ ಪ್ರವಾಸಿಗರು ಮತ್ತು ಸ್ಥಳೀಯರಿಗೆ ತಿರುಪತಿಗೆ ಹೋಗಲು ಅನುಕೂಲವಾಗಿದೆ. ಹೊಸ ರೈಲು ಸಂಚಾರ ಆರಂಭಿಸುವ ಮೂಲಕ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಮುರ್ಡೇಶ್ವರ ನಾಗರಿಕ ಸೇವಾ ಮತ್ತು ರೈಲ್ವೆ ಹಿತರಕ್ಷಣಾ ಸಮಿತಿಯ ಎಸ್.ಎಸ್. ಕಾಮತ್ ಹೇಳಿದರು.

ಮುರ್ಡೇಶ್ವರದಲ್ಲಿ ಶನಿವಾರ ಸಂಜೆ ೩.೩೦ಕ್ಕೆ ಆರಂಭವಾದ ತಿರುಪತಿ ರೈಲಿನ ಇಂಜಿನ್‌ಗೆ ಹೂ ಮಾಲೆ ಹಾಕಿ, ಬಾಳೆಗಿಡ ಕಟ್ಟಿ ಪೂಜೆ ನೆರವೇರಿಸಿದ ಆನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕರಾವಳಿಯಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವ ಈ ರೈಲು ಆರಂಭಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರ ಪರಿಶ್ರಮವೇ ಸಾಕ್ಷಿಯಾಗಿದೆ. ಈ ಭಾಗದಿಂದ ಅತಿ ಹೆಚ್ಚು ಜನರು ತಿರುಪತಿ ಯಾತ್ರೆಯನ್ನು ಮಾಡುತ್ತಿದ್ದು, ಅವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ರೈಲು ಆರಂಭಕ್ಕೆ ಸಹಕರಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ರೈಲ್ವೆ ಅಧಿಕಾರಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು. ಭಾರೀ ಮಳೆಯ ನಡುವೆಯೂ ನೂರಾರು ಜನರು ರೈಲನ್ನು ಸ್ವಾಗತಿಸಿದರು.

ಉಕ ಜಿಲ್ಲಾ ರೈಲ್ವೆ ಹಿತರಕ್ಷಣಾ ಸಮಿತಿಯ ರಾಜೀವ ಗಾಂವಕರ್, ಮುರ್ಡೇಶ್ವರದ ನಾಗರಾಜ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಆರ್.ಎನ್.ಎಸ್. ಆಸ್ಪತ್ರೆಯ ವ್ಯವಸ್ಥಾಪಕ ಶಿವಾನಂದ, ಪ್ರಮುಖರಾದ ಫಿಲಿಫ ಅಲ್ಮೇಡಾ, ಸುಬ್ರಾಯ ನಾಯ್ಕ ಕಾಯ್ಕಿಣಿ, ಹೋಟೆಲ್ ಉಧ್ಯಮಿ ಗಜಾನನ ನಾಯ್ಕ, ಸುಂದರ ಕಾಮತ್, ಕೃಷ್ಣ ನಾಯ್ಕ, ಜಟ್ಟಪ್ಪ ನಾಯ್ಕ, ಸತೀಶ ಶೇಟ್, ರೈಲ್ವೆ ಸ್ಟೇಶನ್ ಮಾಸ್ಟರ್ ಗಣಪತಿ ದೇವಾಡಿಗ, ವಾಣಿಜ್ಯ ಅಧಿಕಾರಿ ರವಿ ದೇವಾಡಿಗ ಸೇರಿದಂತೆ ನೂರಾರು ಜನರಿದ್ದರು.

ಭಟ್ಕಳದಲ್ಲೂ ತಿರುಪತಿ ರೈಲಿಗೆ ಅದ್ಧೂರಿ ಸ್ವಾಗತ, ಪೂಜೆ: ಹೊಸದಾಗಿ ಆರಂಭಗೊಂಡಿರುವ ಮುರ್ಡೇಶ್ವರದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುವ ವಿಶೇಷ ರೈಲಿಗೆ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ಮಂಡಲ ಮತ್ತು ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಶನಿವಾರ ಮಧ್ಯಾಹ್ನ ಮುರ್ಡೇಶ್ವರದಿಂದ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ರೈಲಿಗೆ ಪೂಜೆ ಸಲ್ಲಿಸಲಾಯಿತು.ನಿವೃತ್ತ ಸೈನಿಕ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪಾಂಡುರಂಗ ನಾಯ್ಕ, ಶೇಷಗಿರಿ ನಾಯ್ಕ, ಬಾಬಣ್ಣ, ವಿನಾಯಕ ಪೈ ಮುಂತಾದವರಿದ್ದರು.ರೈಲಿನ ವೇಳಾಪಟ್ಟಿ: ಮುರ್ಡೇಶ್ವರದಿಂದ ಪ್ರತಿ ಬುಧವಾರ ಹಾಗೂ ಶನಿವಾರ, ತಿರುಪತಿಯಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ರೈಲು ಹೊರಡಲಿದೆ. ಮುರ್ಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡುವ ರೈಲು ಮಂಗಳೂರಿಗೆ 7.55ಕ್ಕೆ ತಲುಪಲಿದೆ. ಮಂಗಳೂರಿಂದ ರಾತ್ರಿ 8.05ಕ್ಕೆ ಹೊರಟು ತಿರುಪತಿಗೆ ಮರುದಿನ ಬೆಳಗ್ಗೆ 11.30ಕ್ಕೆ ತಲುಪಲಿದೆ.