ಮುರುಡೇಶ್ವರ: ₹೩೬೦ ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ: ಸಚಿವ ಮಂಕಾಳು ವೈದ್ಯ

| Published : Oct 20 2024, 01:57 AM IST

ಮುರುಡೇಶ್ವರ: ₹೩೬೦ ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ: ಸಚಿವ ಮಂಕಾಳು ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮುರುಡೇಶ್ವರದಲ್ಲಿ ₹೩೬೦ ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಇದು ನಿರ್ಮಾಣವಾದರೆ ೫೦೦ ಬೋಟ್‌ಹೌಸ್‌ಗಳನ್ನು ಲಂಗರು ಹಾಕಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದರು.

ಕಾರವಾರ: ಮುರುಡೇಶ್ವರದಲ್ಲಿ ₹೩೬೦ ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಇದು ನಿರ್ಮಾಣವಾದರೆ ೫೦೦ ಬೋಟ್‌ಹೌಸ್‌ಗಳನ್ನು ಲಂಗರು ಹಾಕಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಈ ವಿಷಯ ಹಂಚಿಕೊಂಡ ಅವರು, ಈ ಯೋಜನೆಯಿಂದ ಬೋಟ್‌ಹೌಸ್ ಪ್ರವಾಸೋದ್ಯಮ ಪ್ರಾರಂಭವಾಗಲಿದೆ. ಪ್ರವಾಸಿಗರು ಬಂದರೆ ಬೋಟ್‌ಹೌಸ್‌ನಲ್ಲೇ ಸಮುದ್ರದಲ್ಲಿ ತಂಗಬಹುದಾಗಿದೆ. ಮಂಗಳೂರಿನಲ್ಲಿ ₹೧೫೦೦ ಕೋಟಿ ವೆಚ್ಚದಲ್ಲಿ ಕ್ರೂಸ್ ಹಡಗು ಬರುವಂತೆ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಪ್ರವಾಸಿತಾಣಗಳ ಬಗ್ಗೆ ಆನ್‌ಲೈನ್‌ನಲ್ಲಿ ಎಲ್ಲ ಮಾಹಿತಿ ಸಿಗುವಂತೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಯಾರೋ ಹೇಳುತ್ತಾರೆ ಎಂದು ಕೇಳಲು ಹೋಗಬೇಡಿ. ಬಡವರಿಗೆ ಬದುಕಲು ಅವಕಾಶವಾಗುವಂತೆ ಪ್ರವಾಸೋದ್ಯಮ ಬೆಳೆಸುತ್ತೇವೆ ಎಂದು ಹೇಳಿದರು.

ಈ ಹಿಂದೆ ೨೦೧೮ರಲ್ಲಿ ತಾವು ಶಾಸಕರಿದ್ದಾಗ ಮುರುಡೇಶ್ವರದಲ್ಲಿ ಪ್ರವಾಸೋದ್ಯಮ ಬೆಳೆಯಲು ಅವಕಾಶ ಮಾಡಿಕೊಡಲಾಗಿದೆ. ನಾವು ಪ್ರವಾಸೋದ್ಯಮದ ಪರವಾಗಿದ್ದೇವೆ. ಟೂರಿಸ್ಟ್ ಬರಬೇಕು. ಖುಷಿಯಾಗಿ ಹೋಗಬೇಕು ಎನ್ನುವ ಮನೋಭಾವವಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಆದರೆ ಕೆಲವರು ಮಂಕಾಳು ವೈದ್ಯ ಪ್ರವಾಸೋದ್ಯಮದ ವಿರೋಧಿ, ಪ್ರವಾಸೋದ್ಯಮ ಬೆಳೆಯಲು ಕೊಡುತ್ತಿಲ್ಲ ಎನ್ನುವಂತೆ ಹೇಳಿಕೆ ನೀಡಿದ್ದಾರೆ. ಏಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಪ್ರವಾಸೋದ್ಯಮ ಬೆಳೆದರೆ ನಿರುದ್ಯೋಗ ಸಮಸ್ಯೆಯೂ ಪರಿಹಾರವಾಗುತ್ತದೆ. ತಿಂಗಳಿಗೊಮ್ಮೆಯಾದರೂ ಸಭೆ ನಡೆಸಿ ಆಗಬೇಕಾದ ಕೆಲಸಗಳ ಬಗ್ಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಅಗತ್ಯ ಸಹಕಾರ ನೀಡುವುದಾಗಿ ತಿಳಿಸಲಾಗಿದೆ ಎಂದರು.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಸಮಸ್ಯೆ ಜಿಲ್ಲೆಯಲ್ಲಿದೆ. ಕರಾವಳಿ ನಿರ್ವಹಣಾ ಯೋಜನೆ (ಎಸ್‌ಎಂಪಿ) ಮಾಡಿಲ್ಲವೆಂದು ಎನ್‌ಜಿಟಿಯಿಂದ ಆಕ್ಷೇಪವಿತ್ತು. ೩೨೦ ಕಿಮೀ ಎಸ್‌ಎಂಪಿ ಮಾಡಿ ಕ್ಲಿಯರೆನ್ಸ್ ಸಿಕ್ಕಿದೆ ಎಂದ ಅವರು, ಮರಳುಗಾರಿಕೆ ಮೂರು ವರ್ಷದಿಂದ ನಡೆದಿರಲಿಲ್ಲ. ನಾವು ಬಂದಾಗ ಕಾನೂನಾತ್ಮಕವಾಗಿ ಅನುಮತಿಸಲಾಗಿತ್ತು. ಕೆಲವರು ಎನ್‌ಜಿಟಿ ಮೊರೆ ಹೋಗಿದ್ದಾರೆ. ಈ ಸಮಸ್ಯೆಯೂ ಬಗೆಹರಿಯುತ್ತದೆ. ಎಲ್ಲರ ಸಹಕಾರ ಇದ್ದರೆ ಎಲ್ಲವೂ ಸರಿಹೋಗುತ್ತದೆ ಎಂದು ತಿಳಿಸಿದರು.

ಬಿಜೆಪಿಯವರಿಗೆ ಎಲ್ಲಿ ರಾಜಕೀಯ ಮಾಡಲು ಸಾಧ್ಯವಿಲ್ಲವೋ ಅಲ್ಲಿ ಈ ರೀತಿ ಮಾಡುತ್ತಾರೆ. ನಮ್ಮ ಮುಖ್ಯಮಂತ್ರಿ ಅವರದ್ದು ತಪ್ಪಿಲ್ಲ. ಪರೇಶ ಮೇಸ್ತ ಕೊಲೆ ಪ್ರಕರಣದಲ್ಲಿ ಏನೆಲ್ಲ ನಡೆಯಿತು. ಸಿಬಿಐಗೆ ನೀಡಲಾಯಿತು. ಏನು ವರದಿ ಬಂತು? ಈಗ ಕೂಡಾ ಮೂಡಾ ಪ್ರಕರಣದಲ್ಲಿ ಇಡಿ ಏನೂ ಇಲ್ಲ ಎಂದೇ ಹೇಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಸತೀಶ ಸೈಲ್ ಇದ್ದರು.ಶಾಲೆ, ಅಂಗನವಾಡಿ ಅಭಿವೃದ್ಧಿಗೆ ಆದ್ಯತೆ ನೀಡಿ: ಸಚಿವ ವೈದ್ಯ

ಕಾರವಾರ: ಜಿಲ್ಲೆಯ ಖನಿಜ ಪ್ರತಿಷ್ಠಾನ ನಿಧಿಯಲ್ಲಿನ ಮೊತ್ತದಲ್ಲಿ ಜಿಲ್ಲಾದ್ಯಂತ ಎಲ್ಲ ತಾಲೂಕುಗಳಲ್ಲಿ ಅಂಗನವಾಡಿ ಮತ್ತು ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನದ ಸಭೆಯ ಅಧ್ಯಕ್ಷತೆ

ವಹಿಸಿ ಮಾತನಾಡಿ, ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಪ್ರಸ್ತುತ ಸಾಲಿಗೆ ಲಭ್ಯವಿರುವ ₹859.40 ಲಕ್ಷ ಅನುದಾನದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವಂತಹ ಕ್ರಿಯಾ ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಬೇಕು. ಜಿಲ್ಲೆಯಲ್ಲಿ ಗಣಿಗಾರಿಕೆಗೆ ಒಳಪಡುವ ತಾಲೂಕುಗಳಲ್ಲಿ ಈ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಶಾಸಕರಾದ ಸತೀಶ ಸೈಲ್, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್‌ ವರಿಷ್ಠ ಎಂ.ನಾರಾಯಣ, ಡಿಎಫ್ಒ ರವಿಶಂಕರ್ ಮೊದಲಾದವರು ಇದ್ದರು.