ಶಿಕ್ಷಣ ಕ್ಷೇತ್ರಕ್ಕೆ ಮುರುಘರಾಜೇಂದ್ರ ಶ್ರೀ ಕೊಡುಗೆ ಅಪಾರ

| Published : Aug 29 2024, 12:54 AM IST

ಸಾರಾಂಶ

19ನೇ ಶತಮಾನದ ಉತ್ತರಾರ್ಧದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಜಯದೇವ ಜಗದ್ಗುರುಗಳು 1903ರಲ್ಲಿ ಚಿತ್ರದುರ್ಗ ಬೃಹನ್ಮಠದ ಅಧ್ಯಕ್ಷರಾಗಿ ಹಲವಾರು ರಾಜಮನೆತನಗಳಿಂದ ಗೌರವಕ್ಕೆ ಪಾತ್ರರಾಗಿದ್ದರು ಎಂದು ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ ಹೇಳಿದರು.

ತುಮಕೂರು: 19ನೇ ಶತಮಾನದ ಉತ್ತರಾರ್ಧದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಜಯದೇವ ಜಗದ್ಗುರುಗಳು 1903ರಲ್ಲಿ ಚಿತ್ರದುರ್ಗ ಬೃಹನ್ಮಠದ ಅಧ್ಯಕ್ಷರಾಗಿ ಹಲವಾರು ರಾಜಮನೆತನಗಳಿಂದ ಗೌರವಕ್ಕೆ ಪಾತ್ರರಾಗಿದ್ದರು ಎಂದು ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ ಹೇಳಿದರು.

ನಗರದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಬಸವಕೇಂದ್ರ ಮತ್ತು ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ಏರ್ಪಡಿಸಿದ್ದ ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮಿಗಳ 150ನೇ ಜಯಂತ್ಯತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಶ್ರೀಗಳು ದೇಶದಾದ್ಯಂತ ಸ್ಥಳೀಯರ ಸಹಕಾರದಿಂದ ಉಚಿತ ಹಾಸ್ಟಲ್‌ ಸ್ಥಾಪಿಸಿ, ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ. ರಾಷ್ಟ್ರನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿ ಯುಗ ಪ್ರವರ್ತಕರೆನಿಸಿಕೊಂಡಿದ್ದಾರೆ ಎಂದರು.

ಸುತ್ತುಕಟ್ಟು ಸಂಸ್ಕೃತಿಯ ನೇತಾರರಾಗಿದ್ದ ಜಯದೇವ ಜಗದ್ಗುರುಗಳು ನಾಲ್ವಡಿ ಕೃಷ್ಣರಾಜ ಒಡೆಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಮಾನವನ ಕಾಯವು ನಶ್ವರ ಆತನ ಕಾರ್ಯಗಳು ಅನಂತ ಎಂದು ಹೇಳುತ್ತಿದ್ದ ಶ್ರೀಗಳೂ ಅವರು ಮಾಡಿದ ಸತ್ಕಾರ್ಯಗಳು ಅವರನ್ನು ಅಮರರನ್ನಾಗಿಸಿವೆ. ಈ ಮೂಲಕ ಇವರು ಇಂದಿನ ಮಠಾಧಿಪತಿಗಳಿಗೆ ಮಾದರಿಯಾಗಿದ್ದಾರೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಜಯದೇವ ಶ್ರೀಗಳು ತಮ್ಮ ಪಾಲಿನ ಕರ್ತವ್ಯ ಹೊಣೆಗಾರಿಕೆ ಜವಾಬ್ದಾರಿ ಕಾಯಕವನ್ನು ಮಾಡುವ ಮೂಲಕ ಜಗತ್ತಿಗೆ ಗುರುಗಳಾದರು. ಅವರ ಬದುಕು ಚಿಂತನೆ ಅಧ್ಯಯನ ಮಾಡಬೇಕು. ಆಗ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ತಮ್ಮ ಬಳಿಗೆ ಬರುವ ಭಕ್ತ ಸಮುದಾಯಕ್ಕೆ ಉತ್ತಮ ಸಂದೇಶಗಳನ್ನು ಮಾರ್ಗದರ್ಶನವನ್ನು ನೀಡುತ್ತಿದ್ದರು. ಚಿತ್ರದುರ್ಗದ ಬೃಹನ್ಮಠವನ್ನು ತ್ರಿವಿಧ ದಾಸೋಹದ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.ಆಯುರ್ವೇದ ವೈದ್ಯ ಡಾ. ಬಿ. ನಂಜುಂಡಸ್ವಾಮಿ ಮಾತನಾಡಿ, 1874ರಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಗದಗಿನಲ್ಲಿ ಜನಿಸಿದ ಇವರು ಚಿತ್ರದುರ್ಗದ ಶೂನ್ಯ ಸಿಂಹಾಸನದ ಪೀಠಾಧಿಪತಿಗಾಳಗಿ ನಿರ್ವಹಿಸಿದ ಕರ್ತವ್ಯಗಳನ್ನು ಮರೆಯುವಂತಿಲ್ಲ. 1917ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಭಾಗವಹಿಸಿ ಅದಕ್ಕೆ ಚಿರಸ್ಥಾಯಿ ಫಂಡ್ ಎಂದು ಸ್ಥಾಪಿಸಿ ಅವರೇ ಅಂದು 61,000 ರು. ನೀಡಿ ನಾಡಿನಲ್ಲಿ ವೀರಶೈವ ಮಹಾಸಭೆ ಬೆಳೆಯಲು ಕಾರಣೀಬೂತರಾಗಿದ್ದಾರೆ ಎಂದರು.ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಪಂಚಣ್ಣ ಬಸವ ಕೇಂದ್ರದ ಅಧ್ಯಕ್ಷ ಸಿದ್ಧಗಂಗಮ್ಮ, ಟ್ರಸ್ಟಿಗಳಾದ ಈ ಲೋಕೇಶ್ವರಪ್ಪ, ಈಶ್ವರಯ್ಯ, ಡಿ.ವಿ. ಶಿವಾನಂದ್, ನಾಗಭೂಷಣ್, ಪ್ರದೀಪ್, ತಿಪ್ಪೇಸ್ವಾಮಿ, ತುಮಕೂರು ತಾ. ಕ.ಸಾ.ಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಜಯದೇವ ವಿದ್ಯಾರ್ಥಿ ನಿಲಯ ಕಾರ್ಯದರ್ಶಿ ರಾಮಕೃಷ್ಣಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ನಾಗಭೂಷಣ್ ಇತರರಿದ್ದರು.