ಹಾವೇರಿ ನಗರದ ಬಸವಕೇಂದ್ರ ಶ್ರೀ ಹೊಸಮಠದಲ್ಲಿ ಲಿಂ. ಜಗದ್ಗುರು ಶ್ರೀ ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗೂ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಜಯಂತಿ ನಡೆಯಿತು.

ಹಾವೇರಿ: ಯೋಗಿಗಳ ಪರಂಪರೆಯಲ್ಲಿ ಮುಂಚೂಣಿಯಲ್ಲಿದ್ದ ಮುರುಘೇಂದ್ರ ಶ್ರೀಗಳು ಶಿವಪಥದಲ್ಲಿದ್ದು, ಲೋಕಪಥದತ್ತ ಸಾಗಿದ ಮಹನೀಯರಾಗಿದ್ದರು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಬಸವಕೇಂದ್ರ ಶ್ರೀ ಹೊಸಮಠದಲ್ಲಿ ಆಯೋಜಿಸಿದ್ದ ಲಿಂ. ಜಗದ್ಗುರು ಶ್ರೀ ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗೂ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಜಯಂತಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶರಣರ ಚಳವಳಿಯ ಮುಂದುವರಿಕೆಯಾಗಿ ಈ ಪುಣ್ಯಭೂಮಿಯಲ್ಲಿ ಅನೇಕ ಮಹಾಂತರು ಅವತರಿಸಿ ಜಗದೋದ್ಧಾರ ಕಾರ್ಯ ಮಾಡಿದ್ದಾರೆ. ಅವರಲ್ಲಿ ಎಡೆಯೂರು ಸಿದ್ದಲಿಂಗೇಶ್ವರರು, ಷಣ್ಮುಖ ಶಿವಯೋಗಿಗಳು ಹಾಗೂ ಮುರುಘೇಂದ್ರ ಶಿವಯೋಗಿಗಳು ಪ್ರಮುಖರಾಗಿದ್ದಾರೆ ಎಂದರು.

ಉತ್ತರ ಕರ್ನಾಟಕದ ಪ್ರಸಿದ್ಧ ಸಿದ್ಧಪುರುಷರಾಗಿದ್ದ ಮುರುಘೇಂದ್ರ ಶಿವಯೋಗಿಗಳು ಜ್ಞಾನ, ಯೋಗ ಹಾಗೂ ಅದ್ಭುತ ವಾಕ್ಸಿದ್ಧಿಯ ಮೂಲಕ ಲಕ್ಷಾಂತರ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿದ ಮಹಾನ್ ದಾರ್ಶನಿಕರಾಗಿದ್ದರು. ಶಿವಯೋಗಿಗಳಾಗಿ, ಮಹಾತಪಸ್ವಿಗಳಾಗಿ, ಅಂತರಜ್ಞಾನಿಗಳಾಗಿ ಹಾಗೂ ತ್ರಿಕಾಲಜ್ಞಾನಿಗಳಾಗಿ ಆದರ್ಶ ಜೀವನ ನಡೆಸಿ ತಮ್ಮ ಶಿವಪೂಜಾನುಷ್ಠಾನದ ಪ್ರಭಾವಮಯ ಜ್ಯೋತಿಯನ್ನು ಸಮಾಜಕ್ಕೆ ದಯಪಾಲಿಸಿ ಜೀವನ್ಮುಕ್ತರಾಗಿದ್ದರು ಎಂದು ಹೇಳಿದರು.

ಲೋಕಮಾನ್ಯ ತಿಲಕರು ೧೯೧೫ರಲ್ಲಿ ಅಥಣಿಗೆ ಭೇಟಿ ನೀಡಿದ ವೇಳೆ ಮುರುಘೇಂದ್ರ ಶಿವಯೋಗಿಗಳ ದರ್ಶನ ಪಡೆದು ಭಾರತದ ಸ್ವಾತಂತ್ರ್ಯದ ಕುರಿತು ಪ್ರಶ್ನಿಸಿದಾಗ, ''''''''ಸ್ವಾತಂತ್ರ್ಯ ಸಿಗುತ್ತದೆ, ಆದರೆ ಅದನ್ನು ನೀವು ನೋಡುವುದಿಲ್ಲ'''''''' ಎಂದು ಶಿವಯೋಗಿಗಳು ಭವಿಷ್ಯ ನುಡಿದಿದ್ದರೆಂದು ಅವರು ಸ್ಮರಿಸಿದರು. ಆನಂತರ ಸ್ವಾತಂತ್ರ್ಯ ದೊರಕುವ ಮುನ್ನವೇ ತಿಲಕರು ನಿಧನರಾಗಿದ್ದು, ಶಿವಯೋಗಿಗಳ ವಾಕ್ಸಿದ್ಧಿಗೆ ಸಾಕ್ಷಿಯಾಗಿದೆ ಎಂದರು.

ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಹಾಗೂ ಮುರುಘೇಂದ್ರ ಶಿವಯೋಗಿಗಳವರು ಶ್ರೀಮಠಕ್ಕೆ ಎರಡು ಕಣ್ಣುಗಳಿದ್ದಂತೆ. ಇಬ್ಬರೂ ಮಹಾನ್ ಯೋಗಿಗಳಾಗಿದ್ದು, ಅವರ ಸ್ಮರಣೆಯಿಂದ ಸಮಾಜಕ್ಕೆ ಒಳಿತು ಉಂಟಾಗುತ್ತದೆ ಎಂಬ ಕಾರಣದಿಂದಲೇ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಹಿರೇಮಠ ಮಾತನಾಡಿ, ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅಥಣಿಯ ಮುರುಘೇಂದ್ರ ಶಿವಯೋಗಿಗಳ ಪವಾಡಗಳ ಕುರಿತು ತಿಳಿದಿದ್ದೇನೆ. ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ. ದಾರ್ಶನಿಕರನ್ನು ಸ್ಮರಿಸುವ ಕಾರ್ಯವನ್ನು ಇಲಾಖೆ ನಡೆಸುತ್ತಿದ್ದು, ಶ್ರೀಮಠವೂ ಅದೇ ಕಾರ್ಯದಲ್ಲಿ ತೊಡಗಿರುವುದು ಅಭಿನಂದನೀಯ ಎಂದರು.

ನಿವೃತ್ತ ಶಿಕ್ಷಕಿ ರುದ್ರಮ್ಮ ನೆಲವಿಗಿ ಮಾತನಾಡಿ, ಮಹಾನ್ ಸಾಧಕರ ಜೀವನ ಸಾಧನೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಉಭಯ ಶ್ರೀಗಳ ಭಾವಚಿತ್ರ ಹೊತ್ತ ಪಲ್ಲಕ್ಕಿ ಉತ್ಸವ ಜರುಗಿತು. ಶಿವಲೀಲಾ ಮರಗಾಲ, ವೀರಯ್ಯ ಹಿರೇಮಠ, ಎ.ಸಿ. ಹಿರೇಮಠ ಹಾಗೂ ರುದ್ರಮ್ಮ ನೆಲವಿಗಿ ಅವರನ್ನು ಮಠದಿಂದ ಗೌರವಿಸಲಾಯಿತು. ಮುರುಗೆಪ್ಪ ಕಡೆಕೊಪ್ಪ, ದಯಾನಂದ ಯಡ್ರಾವಿ, ರುದ್ರೇಶ ಚನ್ನಣ್ಣನವರ ಉಪಸ್ಥಿತರಿದ್ದರು.

ಲಕ್ಕಣ್ಣವರ ಸೋದರಿಯರು ವಚನ ಗಾಯನ ನಡೆಸಿದರು. ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿ.ಜಿ. ಯಳಗೇರಿ ಸ್ವಾಗತಿಸಿದರು. ನಿಂಗಪ್ಪ ಆರೇರ ವಂದಿಸಿದರು.