ನಾನು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದೇನೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಬೆಳೆದು ಇಂದು ಅತಿಥಿಯಾಗಿ ಆಹ್ವಾನಿತನಾಗಿದ್ದೇನೆ. ಸ್ವಾಮೀಜಿಯವರು ಅನುಮತಿ ನೀಡಿದರೆ ವಿಶ್ವವಿದ್ಯಾಲಯದ ಆಸಕ್ತ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ಇದೇ ಸಭಾಂಗಣದಲ್ಲಿ ಬೃಹತ್ ಕಾರ್ಯಕ್ರಮ ನೀಡುವ ಉತ್ಸಾಹವನ್ನು ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಕೃತಕ ಬುದ್ಧಿಮತ್ತೆಯಂತಹ ಯಾವುದೇ ಯುಗದಲ್ಲೂ ಸಂಗೀತ- ಸಾಹಿತ್ಯಕ್ಕೆ ಅಳಿವಿಲ್ಲ. ವ್ಯಾಸಂಗದ ಅವಧಿಯಲ್ಲಿ ಪರಿಶ್ರಮವೂ ಬೆರೆತರೆ ಗ್ರಾಫೈಟ್ ವಜ್ರವಾಗುವಂತೆ ವಿದ್ಯಾರ್ಥಿಗಳ ಬದುಕು ಸಾರ್ಥಕವಾಗುತ್ತದೆ. ಮಾತೃಭಾಷೆಯ ಪಾಂಡಿತ್ಯವುಳ್ಳವನು ಸಾಧಕನಾಗುತ್ತಾನೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಬಿ.ಜಿ. ನಗರದ ಬಿಜಿಎಸ್ ಸಭಾಂಗಣದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಶತಮಾನೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಾಷೆಯು ಭಾವಾಭಿವ್ಯಕ್ತಿಯ ಸಾಧನವಾಗಿದ್ದು, ಸಂಗೀತದ ಸಾಂಗತ್ಯವೇ ಸಾಹಿತ್ಯದ ಜೀವಂತಿಕೆಗೆ ಸಾಕ್ಷಿ ಹಾಗೂ ಮುಂದಿನ ಪೀಳಿಗೆಗೂ ತಲುಪಿಸುವ ಮಾಧ್ಯಮವಾಗಿದೆ ಎಂದರು.
ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಕೃಪೆಯಿಂದಾಗಿ ಇಂದು ಇಷ್ಟು ವೈಭವಯುತವಾಗಿ ಕನ್ನಡ ರಾಜ್ಯೋತ್ಸವ ಸಾಕಾರಗೊಳ್ಳುತ್ತಿದೆ. ಇಂದಿನ ಈ ಕಾರ್ಯಕ್ರಮದ ಯಶಸ್ಸಿಗೆ ಕನ್ನಡದ ಮೇಲಿನ ಅಭಿಮಾನದ ಜೊತೆಗೆ ನಿಮ್ಮ ಶಿಸ್ತು ಸಂಯಮವೇ ಕಾರಣ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ವಿದ್ಯಾರ್ಥಿಗಳ ಪೋಷಕರು ಬಡವರಿದ್ದಾರೆ. ಅವರಲ್ಲಿ ನಿಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಭರವಸೆಯನ್ನು ಹೊತ್ತ ಶ್ರಮವಿದೆ ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಹಾಗೂ ಗಾಯಕ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಯಾವ ಜನ್ಮದ ಪುಣ್ಯವೋ ಏನೋ ಈ ಜನ್ಮದಲ್ಲಿ ಶ್ರೀಕ್ಷೇತ್ರದ ಒಡನಾಟ ಹೊಂದಿದ್ದೇನೆ. ಭೈರವೈಕ್ಯ ಶ್ರೀ ಬಾಲಗಂಗಾಧರನಾಥಶ್ರೀಗಳು 1982 ರಲ್ಲಿ ನನ್ನ ಪ್ರಥಮ ಧ್ವನಿಸುರುಳಿಯನ್ನು ಅಮೆರಿಕಾದ ಮಿಚಿಗನ್ ನಗರದಲ್ಲಿ ಬಿಡುಗಡೆ ಮಾಡಿಸಿದರು. ಅಖಂಡ 70 ದಿನಗಳ ಅಮೆರಿಕ ಪ್ರವಾಸಾನುಭವ ಜೀವನ ಪೂರ್ತಿ ಸ್ಮರಣೀಯ ಎಂದರು.
ಇಂದು ಶಿಕ್ಷಣ ಕಾಶಿಯಂತೆ ಕಂಗೊಳಿಸುವ ಬಿ.ಜಿ.ನಗರವು ಅಂದು ಕೇವಲ ಪಾಳು ಮೈದಾನವಾಗಿತ್ತು ಎಂಬುದನ್ನು ನೆನಪಿಸಿಕೊಂಡ ಅವರು, ಶ್ರೀಗಳ ಉತ್ತರಾಧಿಕಾರಿಯಾಗಿ ಶ್ರೀಮಠದ ಶ್ರೇಯಸ್ಸು ಉತ್ತುಂಗಕ್ಕೆ ಕಾರಣರಾದ ಜ್ಞಾನಿ, ವಿಜ್ಞಾನಿ, ತಂತ್ರಜ್ಞಾನಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಕಾರ್ಯ ತತ್ಪರತೆಯನ್ನು ಕೊಂಡಾಡಿದರು. ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆಗೆ ಶತಮಾನ ತುಂಬಿದ್ದು, ಮುಂದಿನ ತಿಂಗಳು ಬೆಂಗಳೂರಿನಲ್ಲಿ ಸುಗಮ ಸಂಗೀತ ಶತಮಾನೋತ್ಸವ ಆಚರಿಸಲಾಗುತ್ತಿದೆ. ಶ್ರೀಗಳ ಸಂಕಲ್ಪದಲ್ಲಿ ಈ ಕ್ಷೇತ್ರ ಇನ್ನಷ್ಟು ಉಜ್ವಲವಾಗಿ ಪ್ರಜ್ವಲಗೊಳ್ಳಲಿ ಎಂದು ಹರಸಿದರು.ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ನಾನು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದೇನೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಬೆಳೆದು ಇಂದು ಅತಿಥಿಯಾಗಿ ಆಹ್ವಾನಿತನಾಗಿದ್ದೇನೆ. ಸ್ವಾಮೀಜಿಯವರು ಅನುಮತಿ ನೀಡಿದರೆ ವಿಶ್ವವಿದ್ಯಾಲಯದ ಆಸಕ್ತ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ಇದೇ ಸಭಾಂಗಣದಲ್ಲಿ ಬೃಹತ್ ಕಾರ್ಯಕ್ರಮ ನೀಡುವ ಉತ್ಸಾಹವನ್ನು ವ್ಯಕ್ತಪಡಿಸಿದರು.
ಸಮಾರಂಭದ ವೇದಿಕೆಯಲ್ಲಿ ಕನ್ನಡ ಪ್ರಾಧ್ಯಾಪಕ ಡಾ.ಟಿ.ಎನ್.ವಾಸುದೇವಮೂರ್ತಿ ಅನುವಾದಿಸಿರುವ ಝರತುಷ್ಟ್ರನ ವಚನಗಳು ಮತ್ತು ಡಾಕ್ಟ್ರು ಕನ್ನಡ ಎಂಬ ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿ ಕುರಿತಾದ ನೃತ್ಯ ಪ್ರದರ್ಶನಗೊಂಡವು.ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ, ಕುಲಸಚಿವ ಎಲ್.ಶ್ರೀಹರ್ಷ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಿವಕುಮಾರ್, ವಿಶ್ವವಿದ್ಯಾಲಯದ ಡೀನ್ಗಳು, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಇತರರಿದ್ದರು.
--------