ಸಂಗೀತ ಎಲ್ಲರಿಗೂ ಒಲಿಯುವಂತದ್ದಲ್ಲ ಅದಕ್ಕೆ ವಿಶೇಷ ಸಿದ್ದಿ ಬೇಕು, ತಪಸ್ಸಿನಂತೆ ಆಳವಾಗಿ ಅಭ್ಯಾಸ ಕೈಗೊಂಡಾಗ ಮಾತ್ರ ಸಂಗೀತದ ಸಿದ್ಧಿ ಸಾಧ್ಯ,
ಕೊಪ್ಪಳ: ಸಂಗೀತದಿಂದ ಬದುಕು ಪರಿಪೂರ್ಣತೆ ಪಡೆಯುತ್ತದೆ ಎಂದು ಪ್ರಹ್ಲಾದ ಅಗಳಿ ಹೇಳಿದರು.
ಸಮೀಪದ ಭಾಗ್ಯನಗರದ ಮಾರ್ಕಂಡೇಶ್ವರ ವೃತ್ತದ ಬಯಲು ವೇದಿಕೆಯಲ್ಲಿ ಭಾಗ್ಯನಗರ-ಗುರುಕುಲ ಸಂಗೀತ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಸ್ವರಾಮೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂಗೀತ ಎಲ್ಲರಿಗೂ ಒಲಿಯುವಂತದ್ದಲ್ಲ ಅದಕ್ಕೆ ವಿಶೇಷ ಸಿದ್ದಿ ಬೇಕು, ತಪಸ್ಸಿನಂತೆ ಆಳವಾಗಿ ಅಭ್ಯಾಸ ಕೈಗೊಂಡಾಗ ಮಾತ್ರ ಸಂಗೀತದ ಸಿದ್ಧಿ ಸಾಧ್ಯ, ಸಂಗೀತದಿಂದ ಮಾನಸಿಕ ಸದೃಢತೆ ಏಕಾಗ್ರತೆ ಹೆಚ್ಚುತ್ತದೆ. ಸಂಗೀತದಿಂದ ಮಾನಸಿಕ ನೆಮ್ಮದಿ ಬದುಕಿಗೊಂದು ಪರಿಪೂರ್ಣತೆ ಲಭಿಸುತ್ತದೆ ಎಂದರು.
ಮುಖ್ಯ ಅತಿಥಿ ಪರಶುರಾಮ ನಾಯಕ ಮಾತನಾಡಿ, ಪ್ರಯತ್ನದಿಂದ ಮನುಷ್ಯ ಏನನ್ನಾದರೂ ಸಾಧನೆ ಮಾಡಬಹುದು. ಸಾಧಿಸುವ ಛಲ ಒಂದಿದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಕೂಡ ಜಯ ಸಾಧಿಸಬಹುದು.ಅದರಲ್ಲೂ ಕಲೆ, ಸಂಸ್ಕೃತಿ ಅಧ್ಯಯನದಲ್ಲಿ ವಿಶೇಷ ಮುತುವರ್ಜಿಯಿಂದ ಅಭ್ಯಾಸಸಿದರೆ ಯಶಸ್ಸು ಲಭಿಸುತ್ತದೆ ಎಂದರು.ಅಧ್ಯಕ್ಷತೆಯನ್ನು ಕೀರ್ತಿ ಮೇಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ.ಎ.ವಂದಾಲ,ಮಂಜುಳಾ ಶ್ಯಾವಿ, ರೇವಣಸಿದ್ದೇಶ ಇತರರಿದ್ದರು.
ಸಂಗೀತ ಕಾರ್ಯಕ್ರಮ ವಿನಾಯಕ ಕುಲಕರ್ಣಿ, ಕಿಶನ ಪೂಜಾರ, ವಿಕಾಸರವರ ಬಾನ್ಸೂರಿ ವಾದನದೊಂದಿಗೆ ಆರಂಭವಾಯಿತು. ಗಣೇಶ ರಾಯಭಾಗಿ ಹಿಂದುಸ್ತಾನಿ ಸಂಗೀತ, ತಿಪ್ಪೇಶ ಹಿರೇಮಠ ದಾಸವಾಣಿ, ವಿಜಯಲಕ್ಷ್ಮೀ ನಾಗರಾಜರವರ ಸುಗಮ ಸಂಗೀತ, ಅಲ್ಲಾಭಕ್ಷಿ ವಾಲೀಕರ ಜನಪದ ಸಂಗೀತ, ಕೀರ್ತಿ ಮೇಟಿ ಹಾಗೂ ಸನ್ನಿಧಿ ಕುಲಕರ್ಣಿ ಭಕ್ತಿ ಸಂಗೀತ, ಅಪರ್ಣ ಹೆಗಡೆ ತಂಡದವರಿಂದ ಭರತನಾಟ್ಯ ಜರುಗಿದವು.ವಾದ್ಯವೃಂದದ ಕೀಬೋರ್ಡ್ ನಲ್ಲಿ ರಾಮಚಂದ್ರಪ್ಪ ಉಪ್ಪಾರ,ಕೊಳಲಿನಲ್ಲಿ ನಾಗರಾಜ ಶ್ಯಾವಿ, ಗಿಟಾರ್ ನಲ್ಲಿ ತಿಪ್ಪೇಶ ಜೆ.ಎಚ್.ಎಂ, ತಬಲಾದಲ್ಲಿ ರಾಘವೇಂದ್ರ ಗಂಗಾವತಿ ಹಾಗೂ ಮಾರುತಿ ದೊಡ್ಡಮನಿ, ಡೋಲಕ್‌ನಲ್ಲಿ ನಂದೀಶ ಹಿರೇಮಠ, ರಿದಮ ಪ್ಯಾಡನಲ್ಲಿ ಸಂಜನ ಬೆಲ್ಲದ ಸಾಥ್ ನೀಡಿದರು.