ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಂಗೀತ ನಮ್ಮಲ್ಲಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ತಾಳ್ಮೆ, ಸಹನೆಯ ಜೊತೆಗೆ ಹೇಗೆ ನಡೆದುಕೊಳ್ಳಬೇಕೆಂಬ ಸಂಸ್ಕಾರವನ್ನು ಕಲಿಸುತ್ತದೆ ಎಂದು ಸುಯೋಗ್ ಆಸ್ಪತ್ರೆ ಸಂಸ್ಥಾಪಕ ಡಾ.ಎಸ್.ಪಿ. ಯೋಗಣ್ಣ ಹೇಳಿದರು.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ‘ಶ್ರೀಪಲ್ಲವಿ ಪ್ರತಿಷ್ಠಾನ’ವು ಭಾನುವಾರ ಆಯೋಜಿಸಿದ್ದ ‘ಕಲಾ ಸಂಭ್ರಮ– 2025’ ಉದ್ಘಾಟಿಸಿ ಮಾತನಾಡಿ, ಯಾವುದು ವಿವೇಕವನ್ನು ಕೊಡುವುದೋ ಅದು ಆರೋಗ್ಯವನ್ನು ಕೊಡುತ್ತದೆ. ನಿತ್ಯ ಅರ್ಧ ಗಂಟೆ ಏಕಾಂತದಲ್ಲಿ ಸಂಗೀತ ಕೇಳಬೇಕು. ಆಗ ಬಹಳ ಆನಂದವಾಗುತ್ತದೆ. ಜನಪದರು ಹಾಡಿನಲ್ಲಿ ನಮ್ಮ ಸಂಸ್ಕೃತಿಯನ್ನು ಸೇರಿಸಿ ಹಾಡಿದ್ದರಿಂದ ಇಂದಿಗೂ ನಮ್ಮ ಸಂಸ್ಕೃತಿ ಉಳಿದಿದೆ ಎಂದರು.ನಮ್ಮ ಸಂಸ್ಕೃತಿ ಉಳಿಯುವಲ್ಲಿ ಸಂಗೀತ, ಜಾನಪದದ ಪಾತ್ರ ಹಿರಿದು ಎಂಬುದನ್ನು ಮರೆಯಬಾರದು. ಕರ್ನಾಟಕ ಸಂಗೀತ ಸೇರಿದಂತೆ ಭಾರತೀಯ ಸಂಗೀತ ಪರಂಪರೆಯು ಇದೇ ಹಾದಿಯಲ್ಲಿ ಬಂದಿದೆ. ಸಂಗೀತಕ್ಕೆ ಅಗತ್ಯ ಪ್ರೋತ್ಸಾಹ ಸಿಗಬೇಕು ಎಂದು ಅವರು ಹೇಳಿದರು.ವಾಸಿ ಮಾಡಲು ಸಾಧ್ಯವಾಗದ ಕಾಯಿಲೆ ಇರುವವರಿಗೆ ಸಂಗೀತ ಕೇಳಿಸುವುದರಿಂದ ನಿಯಂತ್ರಣಕ್ಕೆ ಬಂದಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಮೆದುಳಿನ ಭಾಗವೊಂದರಿಂದ ಸಂಗೀತ ಕಲಿಯಲು ಪ್ರಚೋದನೆ ಸಿಗುತ್ತದೆ. ಆ ರೀತಿಯ ವ್ಯವಸ್ಥೆಯಿಂದಲೇ ಒಳ್ಳೆಯ ಸಂಗೀತಕ್ಕೆ ಎಲ್ಲರೂ ಮಾರು ಹೋಗುತ್ತಾರೆ’ ಎಂದರು.ಸಮರ್ಪಣ ಸೇವಾ ಟ್ರಸ್ಟ್ ನ ಕುಮಾರ್, ಪ್ರತಿಷ್ಠಾನದ ಅಧ್ಯಕ್ಷೆ ಪಲ್ಲವಿ ಶ್ರೀಕಾಂತ್, ವಿದ್ವಾನ್ ದತ್ತಾತ್ರಿ, ಸಿಇಒ ರಾಜೇಶ್ ನಾಯಕ್ ಇದ್ದರು.