ಜೀವನ ಪ್ರೀತಿ ಬೆಳೆಸುವಲ್ಲಿ ಸಂಗೀತ ಮುಖ್ಯ: ಡಾ. ಡಿ.ವಿ. ಪರಮಶಿವಮೂರ್ತಿ

| Published : Aug 04 2024, 01:20 AM IST

ಜೀವನ ಪ್ರೀತಿ ಬೆಳೆಸುವಲ್ಲಿ ಸಂಗೀತ ಮುಖ್ಯ: ಡಾ. ಡಿ.ವಿ. ಪರಮಶಿವಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮಲ್ಲಿ ಸ್ನೇಹ-ಸಂಬಂಧ ಬೆಸೆಯುವಲ್ಲಿ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ ಎಂದು ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.

ಹೊಸಪೇಟೆ: ಜೀವನ ಪ್ರೀತಿ ಬೆಳೆಸುವಲ್ಲಿ ಸಂಗೀತದ ಪಾತ್ರ ಅಪಾರವಾಗಿದ್ದು, ಸಂಗೀತ ಒತ್ತಡವನ್ನು ದೂರ ಮಾಡಲಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿನ ವಿಶೇಷ ಉಪನ್ಯಾಸ ಮಾಲೆ-1 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಒತ್ತಡದ ಬದುಕಿನಲ್ಲಿ ಜನರು ತಮ್ಮ ಒತ್ತಡ ನಿವಾರಣೆಗೆ ಸಂಗೀತಕ್ಕೆ ಮೊರೆ ಹೋಗುತ್ತಿರುವುದು ಕಂಡು ಬರುತ್ತಿದೆ. ಜನರಲ್ಲಿ ಜೀವನ ಪ್ರೀತಿ ಬಹಳ ಮುಖ್ಯ. ನಮ್ಮಲ್ಲಿ ಸ್ನೇಹ-ಸಂಬಂಧ ಬೆಸೆಯುವಲ್ಲಿ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ. ನಿಜವಾದ ಕಲೆಯನ್ನು ಪ್ರೀತಿಸುವವರು ಇತರರಿಗೆ ಒಳಿತನ್ನೇ ಬಯಸುವರು. ಸಂಗೀತ ಎಲ್ಲರಿಗೂ ಒಲಿಯುವಂತದ್ದಲ್ಲ. ಸಂಗೀತ ಕ್ಷೇತ್ರಕ್ಕೆ ಕಾಲಿಡುತ್ತಿರುವ ಯುವ ಪ್ರತಿಭೆಗಳು ತಮ್ಮ ಆತ್ಮ ತೃಪ್ತಿಯ ಜೊತೆಗೆ ಇತರರಿಗೆ ಸಂತೋಷ ಹಂಚಿ ಸಾಧಕರಾಗಬೇಕು ಎಂದು ಹೇಳಿದರು.

ಹುಬ್ಬಳ್ಳಿಯ ನಿವೃತ್ತ ಸಂಗೀತ ಪ್ರಾಧ್ಯಾಪಕ ಡಾ. ಅಶೋಕ ಹುಗ್ಗಣ್ಣವರ ಮಾತನಾಡಿ, ಸಂಗೀತಕ್ಕೆ ಭಾಷೆಯ ಅಗತ್ಯವಿಲ್ಲ. ಅದು ಎಲ್ಲ ಕಡೆಯೂ ತನ್ನ ಛಾಪು ಮೂಡಿಸಿದೆ. ಸಂಗೀತದ ಮೂಲ ಜನಪದವೇ ಆಗಿದೆ. ಜನಪದ ಸಂಗೀತವೇ ಇರಲಿ, ಶಾಸ್ತ್ರೀಯ ಸಂಗೀತವೇ ಇರಲಿ ಎರಡಕ್ಕೂ ಅದರದೇ ಆದ ಪೂರ್ವಸಿದ್ಧತೆಗಳು ಬೇಕು. ರಂಗಭೂಮಿ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.

ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.