ಎಸ್ಸಿ ಎಸ್ಟಿ ಒಳ ಮೀಸಲಾತಿ ಉಪ ವರ್ಗೀಕರಣಕ್ಕೆ ಸುಪ್ರೀಂಕೋರ್ಟ್ ಅಸ್ತು

| Published : Aug 04 2024, 01:20 AM IST

ಎಸ್ಸಿ ಎಸ್ಟಿ ಒಳ ಮೀಸಲಾತಿ ಉಪ ವರ್ಗೀಕರಣಕ್ಕೆ ಸುಪ್ರೀಂಕೋರ್ಟ್ ಅಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿ ಉಪ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪುನ್ನು ನೀಡಿದ್ದು, ಈ ನಿಟ್ಟಿನಲ್ಲಿ ಒಳ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿರುವುದು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಡಗೈ ಸಮುದಾಯ ಸುಮಾರು 30 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಾಲೂಕು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ. ಪಿ. ಚಂದ್ರಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಸೌಲಭ್ಯಗಳನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅರ್ಹ ಸಮುದಾಯಗಳಿಗೆ ವಿಸ್ತರಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಅವುಗಳ ಹಿಂದುಳಿದಿರುವಿಕೆ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ಉಪ ವರ್ಗೀಕರಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿರುವ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಎಡಗೈ ಮತ್ತು ಬಲಗೈ ಸಮುದಾಯಗಳಿಂದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಪಟಾಕಿ ಸಿಡಿಸಿ ಶುಕ್ರವಾರ ಸಂಭ್ರಮಾಚರಣೆ ನಡೆಸಲಾಯಿತು. ಬಳಿಕ ತಾಲೂಕು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ. ಪಿ. ಚಂದ್ರಯ್ಯ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿ ಉಪ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪುನ್ನು ನೀಡಿದ್ದು, ಈ ನಿಟ್ಟಿನಲ್ಲಿ ಒಳ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿರುವುದು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಡಗೈ ಸಮುದಾಯ ಸುಮಾರು 30 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು. ರಾಜ್ಯದಲ್ಲಿ ಮಾದಿಗ ಸಮುದಾಯದ ಒಳ ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿಸಿ 30 ವರ್ಷಗಳಿಂದ ಹೋರಾಟಗಾರರು ರಸ್ತೆ ತಡೆ, ರೈಲು ತಡೆ, ರಕ್ತದಲ್ಲಿ ಮನವಿ ಸಲ್ಲಿಕೆ ಸೇರಿದಂತೆ ವಿವಿಧ ರೀತಿಯ ಚಳವಳಿಗಳನ್ನು ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟಗಳಲ್ಲಿ ನಡೆಸಿಕೊಂಡು ಬರಲಾಗಿದೆ, ಈ ನಿಟ್ಟಿನಲ್ಲಿ ಎಸ್. ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಾದಿಗ ದಂಡೋರ ಸಮಿತಿಯ ಮುಖಂಡ ಎಂ. ಶಂಕರಪ್ಪ ಹಾಗೂ ಜಯರಾಂ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಎನ್. ವೈ. ಹನುಮಂತಪ್ಪ ಸಮಿತಿ ರಚನೆ ಮಾಡಿದ್ದರು, ಅದೇ ಸದಾಶಿವ ಆಯೋಗದ ವರದಿ ಸೇರಿದಂತೆ ವಿವಿಧ ಆಯೋಗಗಳು ಸಮೀಕ್ಷೆ ನಡೆಸಿ ಮಾದಿಗ ಸಮುದಾಯಕ್ಕೆ ಶೇ. 6, ಛಲವಾದಿ ಸಮುದಾಯಕ್ಕೆ ಶೇ 5.5, ಉಳಿದಂತೆ ಭೋವಿ, ಲಂಬಾಣಿ ಮತ್ತು ಕೊರಚ ಸಮುದಾಯಗಳಿಗೆ ಶೇ 3, ಇತರೆ ಸಮುದಾಯಗಳಿಗೆ ಶೇ. 1ರಂತೆ ಒಳ ಮೀಸಲಾತಿ ನಿಗದಿ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು, ಆದರೆ ಪರಿಶಿಷ್ಟ ಜಾತಿಯ ಕೆಲವು ಸಮುದಾಯಗಳವರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಪರಿಣಾಮ ಒಳ ಮೀಸಲಾತಿ ಸೌಲಭ್ಯ ಜಾರಿ ಸ್ಥಗಿತಗೊಂಡಿತ್ತು ಹಾಗೂ ಹಿಂದಿನ ರಾಜ್ಯ ಸರ್ಕಾರಗಳು ಒಳ ಮೀಸಲಾತಿ ನಿಗದಿಪಡಿಸಲು ಹಿಂದೇಟು ಹಾಕಿದ್ದವು, ಆದರೆ ಈ ಒಳ ಮೀಸಲಾತಿ ಉಪ ವರ್ಗೀಕರಣ ವಿಷಯ ಸುಪ್ರೀಂಕೋರ್ಟ್ ಅಂಗಳಕ್ಕೆ ಸೇರಿತು, ವಾಸ್ತವವನ್ನು ಅರಿತ ಸುಪ್ರೀಂಕೋರ್ಟ್ ಗುರುವಾರ ಪರಿಶಿಷ್ಟ ಜಾತಿ ಎಡಗೈ ಮತ್ತು ಬಲಗೈ ಸಮುದಾಯಗಳ ಒಳ ಮೀಸಲಾತಿ ಉಪ ವರ್ಗೀಕರಣರ ಪರವಾಗಿ ಅಸ್ತು ಎಂದು ತೀರ್ಪು ನೀಡಿದೆ, ಸುಪ್ರೀಂ ಕೋರ್ಟ್ ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ ಎಂದರು. ಸುಪ್ರೀಂಕೋರ್ಟಿನ ಈ ಮಹತ್ವದ ತೀರ್ಪಿಗೆ ಕಾರಣ: ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆ 2006ರ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ತೀರ್ಪು ನೀಡಿದೆ, ಈ ಹಿಂದೆ ಪಂಜಾಬ್ ಹರಿಯಾಣ ರಾಜ್ಯದ ಉಚ್ಚ ನ್ಯಾಯಾಲಯ ಒಳ ಮೀಸಲಾತಿ ಉಪ ವರ್ಗೀಕರಣ ಜಾರಿಯನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು, ಈ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು ಜತೆಗೆ ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ ಸಂವಿಧಾನದ 341 ನೇ ವಿಧಿಗೆ ವಿರುದ್ಧವಾಗಿದೆ ಎಂದು ಇ. ವಿ. ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶದ ಪ್ರಕರಣದಲ್ಲಿ 2005ರಲ್ಲಿ ಸಾಂವಿಧಾನಿಕ ಪೀಠದ ತೀರ್ಪಿನ ಆಧಾರದ ಮೇಲೆ ಪಂಜಾಬ್‌ನ ಕಾನೂನುಗಳನ್ನು ಪ್ರಶ್ನಿಸಲಾಗಿತ್ತು ಹಾಗೂ ಇ.ವಿ. ಚಿನ್ನಯ್ಯ ಪ್ರಕರಣದ ತೀರ್ಪಿನಲ್ಲಿ ಎಲ್ಲ ಪರಿಶಿಷ್ಟ ಜಾತಿಗಳು ಏಕರೂಪದ ವರ್ಗವನ್ನೇ ರೂಪಿಸುತ್ತವೆ ಮತ್ತು ಅವುಗಳ ಉಪ ವರ್ಗೀಕರಣ ಸಾಧ್ಯವಿಲ್ಲ ಎಂದು ತಿಳಿಸಲಾಗಿದ್ದರ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರದ ಅಡಿಯಲ್ಲಿ ಬರುವ ಜಾತಿಗಳನ್ನು ಗುರ್ತಿಸಿ ಅವುಗಳನ್ನು ಮೀಸಲಾತಿ ಸೌಲಭ್ಯದಿಂದ ದೂರವಿಡಬೇಕು ಎಂಬ ಅತ್ಯಂತ ಮಹತ್ವದ ತೀರ್ಪುನ್ನು ಸುಪ್ರೀಂಕೋರ್ಟ್ ನೀಡಿದೆ.

ಸಂಭ್ರಮಾಚರಣೆಯಲ್ಲಿ ಶೇಖರಪ್ಪ ನಾಗವೇದಿ, ಶಿವಮೂರ್ತಿ ಗುತ್ತಿನಕೆರೆ, ಕೆಂಚಪ್ಪ, ವೆಂಕಟೇಶ್ ಚಿಕ್ಕ ಬಾಣಾವರ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಹೇಶ್ ಬಾಣಾವರ, ಹಟ್ಟಿಗಯ್ಯ, ಛಲವಾದಿ ಸಮುದಾಯದ ಮುಖಂಡ ವೆಂಕಟೇಶ್ ಸುಭಾಷ್ ನಗರ, ನಗರಸಭೆ ಸದಸ್ಯ ಭಾಸ್ಕರ್, ಜಯಕುಮಾರ್, ರುದ್ರಮುನಿ, ದಾಸಪ್ಪ ಮಾಡಾಳು, ಚಂದ್ರಪ್ಪ ಮಾಡಾಳು, ರಂಗನಾಥ ಮಾಡಾಳು, ಗೋವಿಂದರಾಜು, ಗುರುಮೂರ್ತಿ ಮೈಲನಹಳ್ಳಿ, ಮಂಜುನಾಥ್ ಸಂಕೋಡನಹಳ್ಳಿ, ಭಾಸ್ಕರ್ ಜಾಜೂರು, ಹನುಮಂತಪ್ಪ ಜಾಜೂರು, ರೇಣುಕಪ್ಪ, ಹೊಂಗಯ್ಯ, ನರಸಿಂಹ ಮೂರ್ತಿ, ಬಸವರಾಜು ಜಾಜೂರು. ಕುಮಾರ್ ದುಮ್ಮೇನಹಳ್ಳಿ, ಪರಿಶಿಷ್ಟ ಜಾತಿ ಎಡಗೈ ಮತ್ತು ಬಲಗೈ ಸಮುದಾಯಗಳ ವಿವಿಧ ಮುಖಂಡರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.