ಸಾರಾಂಶ
ಹಾವೇರಿ: ಮಾದಕ ವಸ್ತುಗಳ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕುವಂತೆ ಮನವಿ ಮಾಡುವ ಮೂಲಕ ವ್ಯಸನ ಮುಕ್ತ ಸಮಾಜದ ಕನಸುಕಂಡ ಅಪರೂಪದ ಮಹಾನ್ ವ್ಯಕ್ತಿ ಡಾ.ಮಹಾಂತ ಶಿವಯೋಗಿಗಳು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಹೇಳಿದರು.ನಗರದ ಜಿಲ್ಲಾ ಗುರುಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜರುಗಿದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನ-ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಹಣ, ದವಸಧಾನ್ಯಗಳನ್ನು ಜೋಳಿಗೆಗೆ ಹಾಕಿ ಎಂದು ಕೇಳುವ ಇತರರಿಗಿಂತ ಭಿನ್ನವಾದ ನಡೆಯಿಂದ ಧಾರ್ಮಿಕ, ಆಧ್ಯಾತ್ಮಿಕ ಶ್ರೇಯಸ್ಸಿನೊಂದಿಗೆ ಸ್ವಚ್ಛ ಸಮಾಜದ ಏಳಿಗೆಗಾಗಿ ಯುವಜನರಲ್ಲಿರುವ ದುಶ್ಚಟಗಳನ್ನು ಕೈಬಿಡುವಂತೆ ಜಾಗೃತಿಮೂಡಿಸಿ, ಜೋಳಿಗೆಯಲ್ಲಿ ದುಶ್ಚಟಗಳನ್ನು ದಾನಮಾಡಿ ಎಂದು ಮಹಾಂತ ಜೋಳಿಗೆ ಹಿಡಿದು ಮನೆ ಮನೆಗೆ ತೆರಳಿ ಆಂದೋಲನದ ರೀತಿಯಲ್ಲಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದು ಬಣ್ಣಿಸಿದರು.ವಿದ್ಯಾರ್ಥಿಗಳಲ್ಲಿ ವಿನಯ, ವಿಧೇಯತೆ ಇರಬೇಕು, ತಮ್ಮ ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಗುರಿ ಹೊಂದಬೇಕು. ಮಹಾನ್ ವ್ಯಕ್ತಿಗಳ ಜೀವನ ಆದರ್ಶಗಳನ್ನು ತಿಳಿದುಕೊಂಡು ಉತ್ತಮ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ವ್ಯಸನ ಮುಕ್ತಗೊಳಿಸುವ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಬೆಳೆಯುವ ಮಕ್ಕಳು ದುಶ್ಚಟಗಳಿಂದ ದೂರವಿರಬೇಕು. ಮಾದಕ ವಸ್ತುಗಳ ದುಶ್ಚಟಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಇತರರಿಗೂ ತಿಳಿಸಬೇಕು. ಡಾ.ಮಹಾಂತ ಶಿವಯೋಗಿಗಳು ಯುವ ಸಮೂಹದಲ್ಲಿರುವ ದುಶ್ಚಗಳನ್ನು ಬಿಡಿಸಲು ಮನೆಗೆ ತೆರಳಿ ಮಹಾಂತ ಜೋಳಿಗೆಗೆ ಹಾಕುವಂತೆ ಸತತ ಪ್ರಯತ್ನ ಮಾಡುವ ಮೂಲಕ ಸದೃಢ ರಾಜ್ಯ ಹಾಗೂ ದೇಶಕಟ್ಟಲು ಶ್ರಮಿಸಿದರು. ಮಹಾಂತ ಶಿವಯೋಗಿಗಳ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾದವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಅವರನ್ನು ವ್ಯಸನದಿಂದ ಮುಕ್ತಗೊಳಿಸಬಹುದು. ಸದೃಡ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.ಜಿಲ್ಲಾ ಆಸ್ಪತ್ರೆಯ ಮನೋವೈದ್ಯೆ ಡಾ.ಲೀಲಾ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ ಅವರು ಡಾ.ಮಹಾಂತ ಶಿವಯೋಗಿಗಳ ಜೀವನದ ಬಗ್ಗೆ ಉಪನ್ಯಾಸ ನೀಡಿದರು. ಉಪ ವಿಭಾಗಾಧಿಕಾರಿ ಚೆನ್ನಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ ಇತರರು ಇದ್ದರು. ಕ್ಷೇತ್ರಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಜಾಗೃತಿ ಜಾಥಾ:ಕಾರ್ಯಕ್ರಮಕ್ಕೂ ಮೊದಲು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ೨ ರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಆಯೋಜಿಸಲಾದ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ ಅವರು ಚಾಲನೆ ನೀಡಿದರು.ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ವಿ., ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ, ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ, ಉಪ ವಿಭಾಗಾಧಿಕಾರಿ ಚೆನ್ನಪ್ಪ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಎನ್.ಎಸ್.ಕಾಳೆ, ಶಿಕ್ಷಕ ಎನ್.ಜೆ.ಹಿರೇಮಠ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳತ ಸಹಾಯಕ ನಾಗರಾಜ ಇಚ್ಚಂಗಿ ಇತರರು ಉಪಸ್ಥಿತರಿದ್ದರು.