ಸಾರಾಂಶ
ಕನಕಗಿರಿ, ಹುಲಿಹೈದರ್ ಮತ್ತು ನವಲಿ ಹೋಬಳಿಗಳ ರೈತರಲ್ಲಿ ಆತಂಕ
ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಪಕ್ಕದಲ್ಲೇ ತುಂಗಭದ್ರಾ ಅಣೆಕಟ್ಟೆ ತುಂಬಿ, ಹೊಳೆಗೆ ನೀರು ಹರಿಸಲಾಗುತ್ತಿದೆ. ಆದರೆ ಕನಕಗಿರಿ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ರೈತರು ಬೆಳೆದ ಬೆಳೆ ಈಗ ಬಾಡುತ್ತಿವೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ವರ್ಷ ಮಳೆ ಇಲ್ಲದೇ ಭೀಕರ ಬರಗಾಲ ಅನುಭವಿಸಿದ್ದ ರೈತರು ಈಗ ಮುಗಿಲು ಕಡೆ ನೋಡುವ ಪರಿಸ್ಥಿತಿ ಒದಗಿದೆ.ಅಖಂಡ ಗಂಗಾವತಿ ತಾಲೂಕಿನಲ್ಲಿ ಬರುವ ಕನಕಗಿರಿ, ಹುಲಿಹೈದರ್ ಮತ್ತು ನವಲಿ ಹೋಬಳಿಗಳಲ್ಲಿ ಸರಿಯಾದ ಮಳೆಯಾಗಿಲ್ಲ, ಇದರಿಂದ ಬೆಳೆದ ಬೆಳೆಗಳು ದಿನದಿಂದ ದಿನಕ್ಕೆ ಬಾಡುತ್ತಿವೆ.
20 ದಿನಗಳಿಂದ ಮಳೆ ಇಲ್ಲ:ಕನಕಗಿರಿ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಮೂರು ಹೋಬಳಿಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಮಳೆಯ ಅಭಾವ ಉಂಟಾಗಿದೆ. ಬಿತ್ತನೆಗೆ ಮೊದಲು ಸಮರ್ಪಕ ಮಳೆಯಾಗಿತ್ತು. ನಂತರ ಮಳೆ ಇಲ್ಲದೆ ಇರುವುದರಿಂದ ರೈತರು ಸಾಕಷ್ಟು ಪ್ರಮಾಣದಲ್ಲಿ ಬೀಜ ಮತ್ತು ಗೊಬ್ಬರ ಖರೀದಿಸಿ ವೆಚ್ಚ ಮಾಡಿರುವುದು ನಷ್ಟ ಅನುಭವಿಸಿದಂತಾಗುತ್ತಿದೆ ಎಂಬುದು ರೈತರು ಅಳಲಾಗಿದೆ. ಕಳೆದ 20 ದಿನಗಳಿಂದ ಮಳೆಯಾಗದೆ ಇರುವುದಕ್ಕೆ ತೊಗರಿ, ಸೂರ್ಯಕಾಂತಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ.
ಕನಕಗಿರಿ ತಾಲೂಕಿನ ಕನಕಗಿರಿ, ಹುಲಿಹೈದರ್ ಮತ್ತು ನವಲಿ ಹೋಬಳಿಗಳಲ್ಲಿ ಮುಂಗಾರು ಮಳೆಯನ್ನು ಅವಲಂಬಿತರಾಗಿರುವ ರೈತರು 10675 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆದಿದ್ದಾರೆ. 810 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, 5425 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 1868 ಹೆಕ್ಟೇರ್ ಪ್ರದೇಶದಲ್ಲಿ ನವಣಿ,1508 ಹೆಕ್ಟರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆದಿದ್ದಾರೆ.ರಾಜ್ಯದಲ್ಲಿ ಭಾರಿ ಮಳೆಯಾಗಿ ಹಳ್ಳ, ಕೊಳ್ಳ ಸೇರಿದಂತೆ ಜಲಾಶಯಗಳು ಭರ್ತಿಯಾಗಿವರ. ಆದರೆ ಕನಕಗಿರಿ ವ್ಯಾಪ್ತಿಯಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆಗಳು ನಷ್ಟವಾಗುವ ಹಂತದಲ್ಲಿವೆ.
ಕಳೆದ 20 ದಿನಗಳಿಂದ ಮಳೆಯಾಗಿಲ್ಲ. ಇದರಿಂದ ಬೆಳೆದ ತೊಗರಿ, ಸೂರ್ಯಕಾಂತಿ, ಸೆಜ್ಜೆ ಬೆಳೆಗಳು ಒಣಗುತ್ತಿವೆ. ಇನ್ನು ಒಂದು ವಾರದಲ್ಲಿ ಮಳೆಯಾಗದಿದ್ದರೆ ಮತ್ತೆ ಸಂಕಷ್ಟಕ್ಕೆ ಸಿಲುಕುತ್ತೇವೆ ಎನ್ನುತ್ತಾರೆ ನವಲಿ ತಾಂಡಾ ರೈತ ಕೃಷ್ಣಪ್ಪ ನಾಯಕ.ವಾಡಿಕೆಗಿಂತ ಹೆಚ್ಚು ಮಳೆ:ಅಖಂಡ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮೂರು ಹೋಬಳಿಗಳಾದ ಕನಕಗಿರಿ, ಹುಲಿಹೈದರ್ ಮತ್ತು ನವಲಿ ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ತಿಳಿಸಿದ್ದಾರೆ.
ಕನಕಗಿರಿ ಹೋಬಳಿಯಲ್ಲಿ ವಾಡಿಕೆ ಪ್ರಕಾರ ಜೂನ್ ಮತ್ತು ಜುಲೈ ತಿಂಗಳಲ್ಲಿ 128 ಎಂಎಂ ಮಳೆ ಸುರಿಯಬೇಕಾಗಿತ್ತು, ಆದರೆ 153 ಎಂಎಂ ಮಳೆ ಸುರಿದಿದೆ. ಹುಲಿಹೈದರ್ ಹೋಬಳಿಯಲ್ಲಿ 136 ಎಂಎಂ ಮಳೆ ಪ್ರಮಾಣ ಇತ್ತು, ಈಗ 158 ಎಂಎಂ ಮಳೆಯಾಗಿದೆ. ನವಲಿ ಹೋಬಳಿಯಲ್ಲಿ 154 ಎಂಎಂ ಮಳೆ ಸುರಿಯುವ ವಾಡಿಕೆ ಇತ್ತು. ಪ್ರಸ್ತುತ 189 ಎಂಎಂ ಮಳೆ ಸುರಿದಿದೆ ಎಂದು ತಿಳಿಸಿದ್ದಾರೆ.ಈ ಮೂರು ಹೋಬಳಿಗಳಲ್ಲಿ ಬೆಳೆಗಳು ಮಳೆ ಕೊರತೆಯಿಂದ ಹಾನಿಯಾಗುತ್ತಿಲ್ಲ. ಗಾಳಿ ಬೀಸಿದ ಪರಿಣಾಮವಾಗಿ ಬಾಗುತ್ತಿವೆ. ಇದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಇನ್ನು ಮಳೆ ಬರುವ ಅವಕಾಶ ಇದ್ದು, ರೈತರು ಯಾವುದೇ ಕಾರಣಕ್ಕೆ ಭಯಪಡಬೇಕಾಗಿಲ್ಲ ಎಂದು ಪಟ್ಟದಕಲ್ಲು ತಿಳಿಸಿದ್ದಾರೆ.