ನೆರೆ ಪ್ರವಾಹಕ್ಕೆ ಶಾಶ್ವತ ಪರಿಹಾರ ನೀಡಿ: ಮಹೇಶ್‌ಪ್ರಭು

| Published : Aug 04 2024, 01:20 AM IST

ಸಾರಾಂಶ

ಪ್ರತಿ ವರ್ಷ ಕೊಳ್ಳೇಗಾಲ ಭಾಗದಲ್ಲಿ ಉಂಟಾಗುವ ನೆರೆ ಪ್ರವಾಹಕ್ಕೆ ಶಾಶ್ವತ ಪರಿಹಾರ ಕೊಡಿ, ಪ್ರವಾಹ ಮತ್ತು ಅತಿ ಮಳೆ ಗಾಳಿಯಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಹೇಶ್‌ಪ್ರಭು ಒತ್ತಾಯಿಸಿದರು. ಚಾಮರಾನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರತಿ ವರ್ಷ ಕೊಳ್ಳೇಗಾಲ ಭಾಗದಲ್ಲಿ ಉಂಟಾಗುವ ನೆರೆ ಪ್ರವಾಹಕ್ಕೆ ಶಾಶ್ವತ ಪರಿಹಾರ ಕೊಡಿ, ಪ್ರವಾಹ ಮತ್ತು ಅತಿ ಮಳೆ ಗಾಳಿಯಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಹೇಶ್‌ಪ್ರಭು ಒತ್ತಾಯಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಪ್ರವಾಹದಿಂದಾಗಿ ಅನೇಕ ಕುಟುಂಬಗಳು ಸಂಕಷ್ಟಕ್ಕೀಡಾಗಿ ಅಪಾರ ಬೆಳೆ ನಷ್ಟವಾಗುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಕಾಳಜಿ ಕೇಂದ್ರದಲ್ಲಿರುವ ಜನರಿಗೆ ಸೂಕ್ತ ಪರಿಹಾರ ನೀಡಿ, ಅವರಿಗೆ ಪುನರ್ವಸತಿ ಕಲ್ಪಿಸಬೇಕು, ಪ್ರವಾಹದಿಂದ ಹೆಚ್ಚಿನ ನೀರು ಹರಿದು ಪೋಲಾಗುತ್ತಿದ್ದು, ಈ ನೀರನ್ನು ಜಿಲ್ಲೆಯ ಕೆರೆಗಳಿಗೆ ತುಂಬಿಸಲು ತಕ್ಷಣ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಸಂಬಂಧಪಟ್ಟ ನೀರಾವರಿ ಇಲಾಖೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಾದ್ಯಂತ ಸಣ್ಣ ಈರುಳ್ಳಿ ಸೇರಿದಂತೆ ಅಪಾರ ಬೆಳೆ ನಷ್ಟವಾಗಿದ್ದು. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು, ಖಾಸಗಿ ಬ್ಯಾಂಕುಗಳು ರೈತರಿಗೆ ನೀಡಿರುವ ಸಾಲದ ವಸೂಲಾತಿಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.

ಆ.೭ ಕ್ಕೆ ಜನಜಾಗೃತಿ,ರಕ್ತದಾನ ಶಿಬಿರ:

ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕವು ರೈತ ಸಂಘದ ಪುದುರಾಮಾಪುರ ಗ್ರಾಮ ಘಟಕದ ೨ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆ.೭ರಂದು ಪುದುರಾಮಾಪುರ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಜಾಗೃತಿ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರೈತರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಕೂಡ ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕೊಳ್ಳೇಗಾಲ, ಪ್ರಥಮ ಸಿವಿಲ್ ನ್ಯಾಯಾಧೀಶರಾದ ಎಂ.ಎಲ್. ನಂದಿನಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಶಿಲ್ಪಾನಾಗ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡುವರು. ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ಮಹೇಶ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಎಸ್ಪಿ ಡಾ.ಬಿ.ಟಿ.ಕವಿತಾ, ಜಿಪಂ ಸಿಇಒ ಮೋನ ರೋತ್, ಸರ್ವೋದಯ ಪಕ್ಷದ ಕಾರ್ಯದರ್ಶಿ ಪ್ರಸನ್ನ.ಎನ್ ಗೌಡ, ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್, ಸಿಡಿಪಿಒ ನಂಜಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಟಿಎಚ್‌ಒ ಡಾ.ಪ್ರಕಾಶ್, ಇಒ ಉಮೇಶ್, ತಹಸೀಲ್ದಾರ್ ಗುರುಪ್ರಸಾದ್, ಶಿವಪುರ ಮಹಾದೇವಪ್ಪ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಗೌಡೇಗೌಡ ಶೈಲೇಂದ್ರ ಸೇರಿದಂತೆ ಜಿಲ್ಲಾ ರೈತ ಸಂಘ ಘಟಕ, ಕೊಳ್ಳೇಗಾಲ ರೈತ ಸಂಘದ ಘಟಕದ ಸದಸ್ಯರು ಹನೂರು ಘಟಕದ ರೈತ ಸಂಘದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಬ್ಬಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಸಿ.ಭಾಸ್ಕರ್, ಹೊನ್ನಹಳ್ಳಿ ಲೋಕೇಶ್, ಗೌಡೇಗೌಡ, ವಸಂತಕುಮಾರ್ ಇದ್ದರು.