ಮೈಸೂರು ಪಾದಯಾತ್ರೆ ಬಿಜೆಪಿಗೇ ತಿರುಗು ಬಾಣ: ಸಚಿವ ಮಧು ಬಂಗಾರಪ್ಪ

| Published : Aug 04 2024, 01:20 AM IST

ಸಾರಾಂಶ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪಾತ್ರ ಇಲ್ಲದಿದ್ದರೂ ಕೂಡ ತನಿಖೆಗೆ ಆದೇಶ ನೀಡಿದ್ದರೂ ಕೂಡ ಬಿಜೆಪಿ ಇದನ್ನು ಸೃಷ್ಟಿಸಿ ಗೊಂದಲ ಹುಟ್ಟಿಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಂಬರ್ ಒನ್ ಭ್ರಷ್ಟಾಚಾರಿ ವಿಜಯೇಂದ್ರ ಮತ್ತು ಆತನ ಗ್ಯಾಂಗ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದೆ. ಇದು ಅವರಿಗೆ ತಿರುಗುಬಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪಾತ್ರ ಇಲ್ಲದಿದ್ದರೂ ಕೂಡ ತನಿಖೆಗೆ ಆದೇಶ ನೀಡಿದ್ದರೂ ಕೂಡ ಬಿಜೆಪಿ ಇದನ್ನು ಸೃಷ್ಟಿಸಿ ಗೊಂದಲ ಹುಟ್ಟಿಸುತ್ತಿದೆ. ಮೈಸೂರು ಪಾದಯಾತ್ರೆ ಬಿಜೆಪಿ, ಜೆಡಿಎಸ್ ನಾಯಕರ ಕರ್ಮಕಾಂಡಗಳ ಬಯಲಿಗೆ ಎಳೆಯುವ ದಾರಿಯಾಗಲಿದೆ ಎಂದರು.

ಬಿಜೆಪಿ ಇದ್ದಾಗಲೇ ಮುಡಾ ಸೈಟ್ ನೀಡಿದ್ದು, ಆಗ ಇದೇ ವಿಜಯೇಂದ್ರನೇ ಇದನ್ನು ನಿರ್ವಹಣೆ ಮಾಡಿದ್ದು. ಎಲ್ಲಾ ಪಕ್ಷದವರು ನಿವೇಶನವನ್ನು ತೆಗೆದುಕೊಂಡಿದ್ದಾರೆ. ಇದಾದ ನಂತರ ಅನೇಕ ಮುಖ್ಯಮಂತ್ರಿಗಳು ಈ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಏಕೆ ಆಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡಲಿಲ್ಲ. ಈಗ ಯಾಕೆ ಕೊಟ್ಟಿ ದ್ದಾರೆ. ಅವರು ಕೊಟ್ಟಿರುವ ನೋಟಿಸ್ ಅನ್ನು ಹಿಂದಕ್ಕೆ ಪಡೆಯುವಂತೆ ಈಗಾಗಲೇ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಇದನ್ನು ಎಲ್ಲರೂ ಒಟ್ಟಾಗಿ ಎದುರಿಸುತ್ತೇವೆ ಎಂದು ತಿಳಿಸಿದರು.

ಸೂಡಾ ಹಗರಣ ತನಿಖೆಗೆ:

ಶಿವಮೊಗ್ಗದ ಸೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೆ ತನಿಖೆಗೆ ಒತ್ತಾಯಿಸುತ್ತೇವೆ. ಇಂತಹ ಹಗರಣಗಳನ್ನು ಹೊರಗೆ ತರಬೇಕು. ಬಿ.ಎಸ್. ಯಡಿಯೂರಪ್ಪ ನವರು ಇನ್ನೇನು ಮುಖ್ಯಮಂತ್ರಿ ಸ್ಥಾನದಿಂದ ಹೊರಬರಬೇಕು ಎಂದಾಗ ಈ ಕೇಸ್ ವಾಪಸ್ ತೆಗೆದುಕೊಂಡಿದ್ದರು. ಈಗ ಇದನ್ನು ನಾವು ಬಿಡುವುದಿಲ್ಲ. ಇದರ ಜೊತೆಗೆ ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ ಸೇರಿದಂತೆ ನಾವು ಈ ಹಿಂದೆ ಹೇಳಿದಂತೆ ಎಲ್ಲಾ ಹಗರಣಗಳನ್ನು ಹೊರಗೆಳೆಯುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಎಂ.ಮಂಜುನಾಥಗೌಡ, ಆಯನೂರು ಮಂಜುನಾಥ್, ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಕಲೀಂ ಪಾಷಾ, ಚಂದ್ರಭೂಪಾಲ್, ರಮೇಶ್ ಹೆಗ್ಡೆ, ಎಸ್.ಕೆ. ಮರಿಯಪ್ಪ, ಶರತ್ ಮರಿಯಪ್ಪ, ಜಿ.ಡಿ. ಮಂಜುನಾಥ್, ಇಕ್ಕೇರಿ ರಮೇಶ್, ಶಿವಾನಂದ್, ಹಾಲಪ್ಪ, ಯಮುನಾ ರಂಗೇಗೌಡ, ವಿಜಯ್ ಕುಮಾರ್, ಶಿವಪ್ಪ ಮುಂತಾದವರಿದ್ದರು. ಚೋಟಾ ಸಹಿ ಹಾಕಿ ತಂದೆ ಜೈಲಿಗಟ್ಟಿದ್ದ ವಿಜಯೇಂದ್ರ!

ಬಿ.ವೈ.ವಿಜಯೇಂದ್ರ ಒಬ್ಬ ಭಾರಿ ಭ್ರಷ್ಟಾಚಾರದ ಮನುಷ್ಯ. ಈತನ ಮೇಲೆ ಅನೇಕ ಕೇಸ್ ಗಳು ಇನ್ನೂ ಜೀವಂತವಾಗಿವೆ. ಚೋಟಾ ಸಹಿ ಮಾಡಿ ಅವರ ತಂದೆ ಯವರನ್ನೇ ಜೈಲಿಗೆ ಕಳಿಸಿದ ಮನುಷ್ಯ. ಈಗ ಸಿದ್ಧರಾಮಯ್ಯ ಅವರ ವಿರುದ್ಧ ಮಾತನಾಡುತ್ತಿದ್ದಾನೆ. ಈತನ ವಿರುದ್ಧ ಅವರದೇ ಪಕ್ಷದ ಯತ್ನಾಳ್ ಅವರು ಉಗಿಯುತ್ತಿದ್ದರೂ ಕೂಡ ಅವರಿಗೆ ಉತ್ತರ ಕೊಡದೇ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಾನೆ. ಈತನಿಗೆ ಯಾವ ಯೋಗ್ಯತೆ ಇದೆ. ಈತನ ಎಲ್ಲಾ ಭ್ರಷ್ಟಾಚಾರಗಳನ್ನು ಬಯಲಿಗೆ ಎಳೆದೇ ಎಳೆಯುತ್ತೇವೆ. ಈತ ಕೊನೆಗೆ ಭಸ್ಮಾಸುರನಾಗುತ್ತಾನೆ. ಇಷ್ಟರಲ್ಲಿಯೇ ಈತನ ಪಿಕ್ಚರ್ ಬಿಡಿಸುತ್ತೇವೆ ಎಂದು ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.ನೆರೆ ಸಂತ್ರಸ್ತರ ಪರವಾಗಿ ಸರ್ಕಾರವಿದೆ: ಸಚಿವ

ಮಳೆಹಾನಿಯಿಂದ ಇಡೀ ರಾಜ್ಯವೇ ತತ್ತರಿಸಿ ಹೋಗಿದ್ದು, ಸರ್ಕಾರ ಅವರ ಜೊತೆಗಿದೆ. ರಾಜ್ಯದಲ್ಲಿ ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕೆರೆ ಕಟ್ಟೆಗಳು ತುಂಬಿವೆ. ರೈತರು ಹರ್ಷಿತರಾಗಿದ್ದಾರೆ. ಆದರೆ, ಇದರ ಜೊತೆಗೆ ನೋವುಗಳೂ ಸಂಭವಿಸಿವೆ. ಅನೇಕ ಕಡೆ ಗುಡ್ಡಗಳು ಕುಸಿದಿವೆ. ಬೆಳೆ ಹಾನಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಹಲವು ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಶಿವಮೊಗ್ಗ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ. ಮಲೆನಾಡು ಭಾಗಗಳೂ ಸೇರಿದಂತೆ ಭದ್ರಾವತಿಯಲ್ಲೂ ಕೂಡ ಸಾಕಷ್ಟು ಹಾನಿಯಾಗಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಆಯಾ ಭಾಗದ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಮಳೆಹಾನಿಯಿಂದ ಜಿಲ್ಲೆಯಲ್ಲಿ ಅನೇಕ ಮನೆಗಳು ಸಂಪೂರ್ಣ ಇಲ್ಲವೇ ಭಾಗಶಃ ನಾಶವಾಗಿವೆ. ಈ ಹಿಂದೆ ಮನೆ ಹಾನಿಗೆ ಬಿಜೆಪಿ ಸರ್ಕಾರ 5 ಲಕ್ಷ ನೀಡಿತ್ತು. ಇದನ್ನು ಹಲವರು ದುರುಪಯೋಗಪಡಿಸಿಕೊಂಡಿದ್ದರು. ಅದು ಗಮನಕ್ಕೆ ಬಂದಿದೆ. ಈ ಬಾರಿ ಹಾನಿಯಾದ ಪ್ರತಿ ಮನೆಗೆ 1.20 ಲಕ್ಷ ರೂ. ನೀಡಲು ತೀರ್ಮಾನಿಸಿ ದ್ದೇವೆ. ತಾತ್ಕಾಲಿಕವಾಗಿ ರೇಷನ್ ತೆಗೆದುಕೊಳ್ಳಲು 5 ಸಾವಿರ ರೂ. ನೀಡಲಾಗುವುದು. ಕೇಂದ್ರ ಸರ್ಕಾರ ಕೂಡ 6500 ರು. ಕೊಡುತ್ತದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ವಿವಿಧ ಯೋಜನೆಗಳಡಿಯಲ್ಲಿಯೇ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದಲೇ ನೆರವು ನೀಡಲಾಗುವುದು ಎಂದು ತಿಳಿಸಿದರು.

ಇನ್ನು, ಶಾಲೆಗಳ ದುರಸ್ತಿ ಕೂಡ ಆಗುತ್ತಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಶರಾವತಿ ಸೇರಿದಂತೆ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಹಲವು ಬಾರಿ ಸಭೆ ನಡೆಸಿದೆ. ಅವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಲು ದೇವದಾಸ್ ಕಾಮತ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಸಹಕರಿಸಬೇಕು. ರಾಜ್ಯದಿಂದ ಆಯ್ಕೆಯಾದ ಸಂಸದರು ಶಾಶ್ವತವಾಗಿ ಈ ಸಮಸ್ಯೆ ಬಗೆಹರಿಸಲು ಸಹಕಾರ ನೀಡಬೇಕು. ಸರ್ಕಾರ ಯಾವತ್ತೂ ರೈತರ ಪರವಾಗಿ ಇದೆ ಎಂದರು.

ಮೈಸೂರು ಪಾದಯಾತ್ರೆ ಕೈಬಿಡಲು ಆಗ್ರಹಿಸಿ ಕತ್ತೆ ಮೆರವಣಿಗೆ

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮರ್ಥ ಆಡಳಿತ ನೀಡುತ್ತಿದ್ದು, ಅವರ ಏಳಿಗೆ ಸಹಿಸಲಾರದೇ ಹತಾಶರಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಡಾ ಹಗರಣದ ನೆಪವೊಡ್ಡಿ ಮೈಸೂರು ಪಾದಯಾತ್ರೆ ಹಮ್ಮಿಕೊಂಡಿದ್ದು, ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ರಾಜ್ಯ ಕುರುಬರ ಸಂಘ ಮತ್ತು ಅಹಿಂದ ಸಂಘಟನೆ ಪ್ರಮುಖರು ಸೀನಪ್ಪ ಶೆಟ್ಟಿ ವೃತ್ತ (ಗೋಪಿ ವೃತ್ತ)ದಲ್ಲಿ ಕತ್ತೆಗಳ ಮೆರವಣಿಗೆ ನಡೆಸಿ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಪ್ರತಿಭಟನೆ ನಡೆಸಿದರು.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಪಷ್ಠೀಕರಣ ನೀಡಲಾಗಿದೆ. ಬಿಜೆಪಿಯ ಯತ್ನಾಳ್ ಕೂಡ ಹಗರಣವಾಗಿದ್ದರೆ ತನಿಖಾ ವರದಿ ಬರಲಿ ಎಂದು ಹೇಳಿ ಪಾದಯಾತ್ರೆಯನ್ನು ಲೇವಡಿ ಮಾಡಿದ್ದಾರೆ. ಹೀಗಿದ್ದರೂ ಸಿಎಂ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸುವ ವಿಪಕ್ಷಗಳ ಹುನ್ನಾರವನ್ನು ನಾವು ಖಂಡಿಸುತ್ತೇವೆ. ಪಾದಯಾತ್ರೆ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅಹಿಂದ ಸಂಘಟನೆಗಳ ಮೂಲಕ ವಿವಿಧ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರಾಜ್ಯ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಪಿ.ಶೇಷಾದ್ರಿ, ಪ್ರಮುಖರಾದ ಇಕ್ಕೇರಿ ರಮೇಶ್, ಎಸ್.ಬಿ. ಅಶೋಕ್ ಕುಮಾರ್, ಸುರೇಶ್ ಬಾಬು, ರಾಮಚಂದ್ರಪ್ಪ, ತಂಗರಾಜ್, ಕುಮಾರ್, ಮಮತಾ ಸಿಂಗ್ ಮೊದಲಾದವರಿದ್ದರು.

ಶೀಘ್ರವೇ ಬಿಎಸ್‌ವೈ ಅಕ್ರಮ ವಿರುದ್ಧ ಪಾದಯಾತ್ರೆ: ನಾಯ್ಕ

ಶಿಕಾರಿಪುರ: ರಾಜ್ಯ ಕಂಡ ಅಪರೂಪದ ಜನಪರ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಿನಾಕಾರಣ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತಿತರರು ಹೋರಾಟ ಪಾದಯಾತ್ರೆ ಹಮ್ಮಿಕೊಳ್ಳುವ ತುರಾತುರಿಯಲ್ಲಿದ್ದಾರೆ. ಆದರೆ ಯಡಿಯೂರಪ್ಪ ಕುಟುಂಬದ ಅಕ್ರಮಗಳ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆಯನ್ನು ಶೀಘ್ರದಲ್ಲಿಯೇ ಹಮ್ಮಿಕೊಳ್ಳಲಾಗುವುದು ಎಂದು ಕೆಡಿಪಿ ಸದಸ್ಯ ಹಾಗೂ ತಾಲೂಕು ಅಹಿಂದ ವರ್ಗದ ಮುಖಂಡ ರಾಘವೇಂದ್ರ ನಾಯ್ಕ ತಿಳಿಸಿದರು.ಬುಧವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರಕ್ಕೆ ಬರಿಗೈಲಿ ಧಾವಿಸಿದ ಯಡಿಯೂರಪ್ಪನವರು ಶಿಕಾರಿಪುರಕ್ಕೆ ಗುಮಾಸ್ತರಾಗಿ ಬಂದು ಇದೀಗ ಹೇರಳ ಹಣ ಆಸ್ತಿ ಪಾಸ್ತಿ ಗಳಿಸಿದ್ದು, 1983 ರಲ್ಲಿ ಶಾಸಕರಾಗುವ ಮೂಲಕ ರಾಜಕಾರಣ ಪ್ರವೇಶಿಸಿದ ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿಯಾಗಿ ಜನತೆ ನೀಡಿದ ತೆರಿಗೆ ಹಣ ದುರುಪಯೋಗಪಡಿಸಿಕೊಂಡು ಅವರ ಕುಟುಂಬ ಹೇರಳ ಆಸ್ತಿಪಾಸ್ತಿ ಸಂಪಾದಿಸಿದ್ದಾರೆ. ಹೀಗಿದ್ದೂ ಮುಖ್ಯಮಂತ್ರಿ ವಿರುದ್ಧ ಪಾದಯಾತ್ರೆ ಕೈಗೊಳ್ಳಲು ವಿಜಯೇಂದ್ರಗೆ ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯನವರ ತೇಜೋವಧೆ ತಡೆಯಲು ರಾಜ್ಯದ ಅಹಿಂದ ವರ್ಗ ಅವರ ಪರ ನಿಲ್ಲಲಿದೆ. ಶೀಘ್ರದಲ್ಲಿಯೇ ದಿನ ಹಾಗೂ ಪಾದಯಾತ್ರೆಯ ರೂಪರೇಷೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳರ ಮಾತನಾಡಿ, ಸಿದ್ದರಾಮಯ್ಯ ಗೋವಿನ ರೀತಿ ಅವರು ನೀಡಿದ ಹಲವು ಭಾಗ್ಯ ಅಮೃತ ರೀತಿ ಅವರ ವಿರುದ್ಧ ಹಗುರವಾಗಿ ಮಾತನಾಡದಂತೆ ಎಚ್ಚರಿಸಿದರು. ಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯ ಕುಮಾರನಾಯ್ಕ, ಮಂಜುನಾಥ ನಾಯ್ಕ ಮುಖಂಡ ಗೋಪಿನಾಥ್, ಚರಣ್ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ: ಪತ್ರಿಕಾಗೋಷ್ಠಿಯಲ್ಲಿ ಕೆಡಿಪಿ ಸದಸ್ಯ, ಅಹಿಂದ ವರ್ಗದ ಮುಖಂಡ ರಾಘವೇಂದ್ರ ನಾಯ್ಕ ಮಾತನಾಡಿದರು.