ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಾಲೆಯಲ್ಲಿ ನೀರು ಹರಿಸುವ ಉದ್ದೇಶದಿಂದ ತಾಲೂಕು ವ್ಯಾಪ್ತಿಯ ಹೇಮಾವತಿ ಎಡದಂಡೆ ನಾಲೆಯ ೫೪ನೇ ವಿತರಣಾ ನಾಲಾ ಆಧುನೀಕರಣ ಕಾಮಗಾರಿಗೆ ನೀರಾವರಿ ಇಲಾಖೆ ಚಾಲನೆ ನೀಡಿದ್ದರೆ ಕೆಲವು ಸಂಘಟನೆಗಳು ಕಳಪೆ ಕಾಮಗಾರಿ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ಉದ್ದೇಶಿತ ಕಾಮಗಾರಿಗೆ ಅಡ್ಡಿಪಡಿಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿ ವಿತರಣಾ ನಾಲಾ ವ್ಯಾಪ್ತಿಯ ಕೆಲವು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಕೋಮಹಳ್ಳಿ ಭಾಗದ ರೈತ ಮುಖಂಡ ಮಂಜು ನೇತೃತ್ವದಲ್ಲಿ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ರೈತರು ಸ್ಥಗಿತಗೊಂಡಿರುವ ಕಾಮಗಾರಿ ಪುನಾರಂಭಿಸುವಂತೆ ಆಗ್ರಹಿಸಿದರು.
ಹಲವು ದಶಕಗಳಿಂದ ನಾಲೆ ಅಧುನೀಕರಣಗೊಳ್ಳದೆ ವಿತರಣಾ ನಾಲೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಇದರ ಪರಿಣಾಮ ನಾಲೆಯ ಅಚ್ಚುಕಟ್ಟು ಭಾಗದ ತೇಗನಹಳ್ಳಿ, ಅಣ್ಣೆಚಾಕನಹಳ್ಳಿ, ಕುಂದೂರು, ಕೋಮನಹಳ್ಳಿ, ಮಾಕವಳ್ಳಿ, ಹಿರಿಕಳಲೆ, ಲಿಂಗಾಪುರ, ಪುರ, ಗಾಂಧೀನಗರ, ಕಾಡುಮೆಣಸ, ಗಂಗನಹಳ್ಳಿ, ಹೆಗ್ಗಡಹಳ್ಳಿ, ಸಾಧುಗೋನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿನ ೫೧೭೫ ಎಕರೆ ಪ್ರದೇಶದ ಭೂಮಿಗೆ ನೀರು ಹರಿಯುತ್ತಿರಲಿಲ್ಲ ಎಂದಿದ್ದಾರೆ.ಮಾಕವಳ್ಳಿ ಗ್ರಾಮದ ರೈತ ಮುಖಂಡ ಕುಮಾರ್ ನೇತೃತ್ವದಲ್ಲಿ ದಶಕಗಳ ಕಾಲ ನಡೆದ ಹೋರಾಟದ ಫಲವಾಗಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ೫೫ ಕೋಟಿ ರು. ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿಗೆ ಹಸಿರು ನಿಶಾನೆ ತೋರಿಸಲಾಗಿತ್ತು. ಇದೀಗ ಕಾಮಗಾರಿ ಆರಂಭಿಸಿರುವ ಆರ್.ಕೆ.ಬಿ. ಕನ್‌ಸ್ಟ್ರಕ್ಷನ್ ಕಂಪನಿಯು ನೀರು ಹರಿಯದೆ ಹೂಳು ತುಂಬಿ, ಗಿಡಗೆಂಟೆಗಳು ಹಾಗೂ ಮುಳ್ಳಿನ ಪೊದೆಗಳಿಂದ ಮುಚ್ಚಿಕೊಂಡಿದ್ದ ನಾಲೆಗೆ ಸಿಮೆಂಟ್ ಕಾಂಕ್ರೀಟ್ ಲೈನಿಂಗ್ ಮಾಡಿ ಕಾಲುವೆಯ ಎರಡೂ ಬದಿಗಳಲ್ಲಿ ರಸ್ತೆ ನಿರ್ಮಿಸಿ ರೈತರ ದನಕರುಗಳು, ವಾಹನಗಳು ಹಾಗೂ ಎತ್ತಿನ ಗಾಡಿಗಳು ಸರಾಗವಾಗಿ ಓಡಾಡುವಂತೆ ಕಾಮಗಾರಿ ನಡೆಸುತ್ತಿದ್ದಾರೆ.
ನಮ್ಮ ಭೂಮಿಗೆ ನೀರು ಹರಿಯುವ ಮುನ್ನವೇ ಕಳಪೆ ಕಾಮಗಾರಿ ಹೆಸರಿನಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ವಿನಾಕಾರಣ ಕೆಲವರು ಕಾಲುವೆಯ ಲೈನಿಂಗ್ ಕೆಲಸಕ್ಕೆ ತೊಂದರೆ ನೀಡಿ ಅಡ್ಡಿಪಡಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ದೂರಿದರು.ಪ್ರಸ್ತುತ ಶೇ.೪೦ರಷ್ಟು ಕಾಮಗಾರಿ ಮಾತ್ರ ಮುಗಿದಿದ್ದು ಇನ್ನೂ ಶೇ.೬೦ರಷ್ಟು ಕಾಮಗಾರಿ ಮಾಡಬೇಕಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಈ ಭಾಗದ ರೈತರಾದ ನಾವು ಹಾಗೂ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಕಾಳಜಿಯಿಂದ ಎಚ್ಚರ ವಹಿಸುತ್ತೇವೆ. ೪೦ ವರ್ಷಗಳ ನಂತರ ನಡೆಯುತ್ತಿರುವ ನಾಲಾ ಆಧುನಿಕರಣ ಕೆಲಸಕ್ಕೆ ಯಾರೂ ತೊಂದರೆ ನೀಡಬಾರದು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಅಣ್ಣೆಚಾಕನಹಳ್ಳಿ ರಾಮಕೃಷ್ಣ, ಸತೀಶ್, ಮಂಜು, ಗಂಗನಹಳ್ಳಿ ರವಿಗೌಡ, ರಮೇಶ್, ಗವಿಗೌಡ, ಹಿರಿಕಳಲೆ ಸ್ವಾಮಿ, ಮಂಜುನಾಥ್, ರೋಷನ್, ತೇಗನಹಳ್ಳಿ ದಿನೇಶ್, ಕುಂದನಹಳ್ಳಿ ಸೋಮಶೇಖರ್, ರವಿ, ರಾಮಕೃಷ್ಣಅರಸ್, ಶಿವಕುಮಾರ್ ಸೇರಿದಂತೆ ಹಲವು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.