ಸಂಗೀತ ಮನರಂಜನೆಯ ಮಾಧ್ಯಮವಾಗಿರದೆ ಆತ್ಮ ಜ್ಞಾನದ ಮಾರ್ಗವೂ ಆಗಿದೆ. ಸಂಗೀತಕ್ಕೆ ಮನಸ್ಸನ್ನು ಶಾಂತವಾಗಿಡುವ ಶಕ್ತಿಯಿದೆ. ಸಂಗೀತ ಭಗವಂತನ ಆರಾಧನೆಯ ಮಾರ್ಗವೂ ಹೌದು.

ಗದಗ: ಗದುಗಿಗೆ ಸಂಗೀತದ ಗದ್ದುಗೆಯ ಗೌರವ ತಂದುಕೊಟ್ಟವರು ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರು. ಸಂಗೀತದ ಮೂಲಕ ಅಂಧ, ಅನಾಥರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಆತ್ಮವಿಶ್ವಾಸ ತುಂಬಿದರು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ರವಿ ಗುಂಜಿಕರ ತಿಳಿಸಿದರು.ನಗರದ ಭಾರತೀಯ ಶಿಕ್ಷಣ ಸಂಸ್ಥೆಯ ಚಿಕ್ಕಟ್ಟಿ ಸಭಾ ಭವನದಲ್ಲಿ ಕಲಾ ವಿಕಾಸ ಪರಿಷತ್‌ನಿಂದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ 134ನೇ ಜಯಂತಿ, ಅಮರ ಸ್ವರ ಸಮಾರೋಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಗೀತ ಮನರಂಜನೆಯ ಮಾಧ್ಯಮವಾಗಿರದೆ ಆತ್ಮ ಜ್ಞಾನದ ಮಾರ್ಗವೂ ಆಗಿದೆ. ಸಂಗೀತಕ್ಕೆ ಮನಸ್ಸನ್ನು ಶಾಂತವಾಗಿಡುವ ಶಕ್ತಿಯಿದೆ. ಸಂಗೀತ ಭಗವಂತನ ಆರಾಧನೆಯ ಮಾರ್ಗವೂ ಹೌದು ಎಂದರು.ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರೊ. ಎಸ್.ವೈ. ಚಿಕ್ಕಟ್ಟಿ ಮಾತನಾಡಿ, ಕಲಾ ವಿಕಾಸ ಪರಿಷತ್‌ನವರು ನಮ್ಮ ಶಾಲೆಯಲ್ಲಿ ಸುಮಾರು 20 ವರ್ಷಗಳಿಂದ ಪಂಚಾಕ್ಷರಿ ಗವಾಯಿಗಳವರ ಜಯಂತಿಯನ್ನು ಆಚರಿಸುತ್ತಾ ಬಂದಿದ್ದಾರೆ. ಇದು ಬಯಸದೇ ಬಂದ ನಮ್ಮ ಭಾಗ್ಯವೆಂದರು.

ಕಲಾ ವಿಕಾಸ ಪರಿಷತ್‌ ಅಧ್ಯಕ್ಷ ಸಿ.ಕೆ.ಎಚ್. ಶಾಸ್ತ್ರೀ(ಕಡಣಿ) ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ಕುಮಾರ ಹಿರೇಮಠ ಗುತ್ತರಗಿ ಶಾಸ್ತ್ರೀಯ ಸಂಗೀತ, ಧಾರವಾಡದ ಆಕಾಶವಾಣಿ ದೂರದರ್ಶನ ಕಲಾವಿದೆ ಡಾ. ಸುಮಾ ಬಸವರಾಜ ವಚನ ಸಂಗೀತ, ಕಲಾ ವಿಕಾಸ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಮತಾ ನಂದಿಹಳ್ಳಿ ಭಕ್ತಿ ಸಂಗೀತ ನಡೆಸಿಕೊಟ್ಟರು. ಶ್ರೀಕಾಂತ ಗಂಗಾವತಿ ಅವರು ತಬಲಾ, ಹನುಮಂತ ಹಾರ‍್ಮೋನಿಯಂ ಸಾಥ್‌ ನೀಡಿದರು.

ಬೆಟಗೇರಿಯ ಉದಯೋನ್ಮುಖ ಕಲಾವಿದೆ ತನಿಷಾ ಸತೀಶಕುಮಾರ ವಜ್ರೇಶ್ವರಿ ಅವರು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ನಿವೃತ್ತ ಉಪನ್ಯಾಸಕ ಪ್ರೊ. ಅನ್ನದಾನಿ ಹಿರೇಮಠ, ಸುರೇಶ ಅಂಗಡಿ, ಪ್ರಾ. ಬಸವರಾಜ ಗಿರಿತಮ್ಮಣ್ಣವರ, ಪ್ರಾ. ಡಾ. ಬಿಪಿನ್ ಚಿಕ್ಕಟ್ಟಿ, ಉಪ ಪ್ರಾ. ಶೋಭಾ ಸ್ಥಾವರಮಠ, ರಿಯಾನಾ ಮುಲ್ಲಾ ಮೊದಲಾದವರು ಇದ್ದರು. ರೇಖಾ ಬಾಳಿಹಳ್ಳಿಮಠ ಪ್ರಾರ್ಥಿಸಿದರು. ಗಣೇಶ ಬಡ್ನಿ ಸ್ವಾಗತಿಸಿದರು. ಶಂಕರ ವಂದಿಸಿದರು. ಕನ್ನಡ ಪ್ರಾಧ್ಯಪಕ ಸಾಹಿತಿ ಶ್ರೀಶೈಲ ಬಡಿಗೇರ ಕಾರ್ಯಕ್ರಮ ನಡೆಸಿಕೊಟ್ಟರು.