ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಲಕ್ಷ್ಮಣ ಮುಳಗುಂದ ಮಾತನಾಡಿ, ವೇಗದ ಜೀವನದಲ್ಲಿ ಒತ್ತಡವು ಸಾಮಾನ್ಯ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಲು ಹಾಸ್ಯ ಮತ್ತು ನಗು ಅತ್ಯುತ್ತಮ ಔಷಧವಾಗಿದೆ ಎಂದರು.

ಗದಗ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಸಂಗೀತ ಮತ್ತು ನಗು ವ್ಯಾಯಾಮವು ಮನಸ್ಸಿಗೆ ಶಾಂತಿ ನೀಡುವುದರ ಜತೆಗೆ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ತಿಳಿಸಿದರು.

ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ತ ನಡೆದ ಒತ್ತಡ ರಹಿತ ಕ್ಯಾಂಪಸ್, ಸಂಗೀತ ಮತ್ತು ನಗು ವ್ಯಾಯಾಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಲಕ್ಷ್ಮಣ ಮುಳಗುಂದ ಮಾತನಾಡಿ, ವೇಗದ ಜೀವನದಲ್ಲಿ ಒತ್ತಡವು ಸಾಮಾನ್ಯ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಲು ಹಾಸ್ಯ ಮತ್ತು ನಗು ಅತ್ಯುತ್ತಮ ಔಷಧವಾಗಿದ್ದು, ಹಾಸ್ಯ ಚುಟುಕುಗಳು ಮನಸ್ಸನ್ನು ಹಗುರಗೊಳಿಸಿ ಚಿಂತೆಯನ್ನು ಕಡಿಮೆ ಮಾಡುತ್ತವೆ. ನಗುವಿನ ಮೂಲಕ ದೇಹದಲ್ಲಿ ಸಕಾರಾತ್ಮಕ ಹಾರ್ಮೋನುಗಳು ಬಿಡುಗಡೆಯಾಗಿ ಆರೋಗ್ಯ ಸುಧಾರಿಸುತ್ತದೆ ಎಂದರು.ಕಾರ್ಯಕ್ರಮದ ಸಂಯೋಜಕಿ ಸಾವಿತ್ರಿ ಟಿ. ಪ್ರಾಸ್ತಾವಿಕವಾಗಿ ಮಾತನಾಡಿ, ವೈದ್ಯರು ಮತ್ತು ತಜ್ಞರು ಪ್ರತಿದಿನ ಸ್ವಲ್ಪ ಸಮಯ ನಗುವಿಗೆ ಮೀಸಲಿಡಬೇಕೆಂದು ಸಲಹೆ ನೀಡುತ್ತಾರೆ. ಸ್ನೇಹಿತರೊಂದಿಗೆ ಹಾಸ್ಯ ಚಟುಕುಗಳನ್ನು ಹಂಚಿಕೊಳ್ಳುವುದು ಮತ್ತು ನಗು ವ್ಯಾಯಾಮಗಳಲ್ಲಿ ಭಾಗವಹಿಸುವುದು ಹಾಗೂ ಮನಸ್ಸಿಗೆ ಸಂತೋಷ ನೀಡುವ ಚಟುವಟಿಕೆಗಳನ್ನು ಅನುಸರಿಸುವುದರಿಂದ ಒತ್ತಡವನ್ನು ಸುಲಭವಾಗಿ ಕಡಿಮೆ ಮಾಡಬಹುದೆಂದರು.

ಅಧ್ಯಕ್ಷತೆಯನ್ನು ಪ್ರಾ. ಡಾ. ಸುಧಾ ಕೌಜಗೇರಿ ವಹಿಸಿದ್ದರು. ಈ ವೇಳೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಇಂಗ್ಲಿಷ್‌ ಪ್ರಾಧ್ಯಾಪಕ ಸಂತೋಷಕುಮಾರ ಲಮಾಣಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಶಬ್ಬೀರಭಾಷಾ ಆಲೂರ ಹಾಗೂ ಶರಣಪ್ಪ ಚಿಕ್ಕೇನಕೊಪ್ಪ ನಿರೂಪಿಸಿದರು. ಇಂಗ್ಲಿಷ್‌ ಪ್ರಾಧ್ಯಾಪಕ ವಿಜಯಕುಮಾರ ಎಸ್. ವಂದಿಸಿದರು.