ಮಾನಸಿಕ ಒತ್ತಡ ದೂರಕ್ಕೆ ಸಂಗೀತ ಸಿದ್ಧೌಷಧ: ಕೆ.ಟಿ. ಶಂಕರೇಗೌಡ

| Published : Apr 29 2024, 01:35 AM IST

ಸಾರಾಂಶ

ಮನುಷ್ಯನಿಗೆ ನೋವು-ದುಃಖ ಅಥವಾ ಸುಖದ ಕ್ಷಣಗಳಲ್ಲಿ ಸಂಗೀತದ ಇಂಪು ಜೀವನೋತ್ಸಾಹವನ್ನು ತುಂಬುತ್ತದೆ. ಸಂಗೀತದ ಮಾಧುರ್ಯ ಮನಸ್ಸನ್ನು ಮೃಧುಗೊಳಿಸುತ್ತಾ ಮಾನವೀಯತೆಯ ಕಡೆಗೆ ಮತ್ತು ಹೊಸತನದ ಕಡೆಗೆ ಕೊಂಡೊಯ್ಯುತ್ತದೆ ಎಂದು ವ್ಯಾಖ್ಯಾನಿಸಿದರು.

ಮಂಡ್ಯ: ಸಂಗೀತ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಮಾನಸಿಕ ಒತ್ತಡದಿಂದಲೂ ದೂರ ಮಾಡುವ ಸಿದ್ಧ ಔಷಧಿಯಾಗಿ ಬಳಕೆಯಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷ ಕೆ.ಟಿ. ಶಂಕರೇಗೌಡ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ನಡೆದ ನಗರದ ಹೊಸಹಳ್ಳಿಯ ಗುಡ್‌ವಾಯ್ಸ್ ಸಂಗೀತ ತರಬೇತಿ ಶಾಲೆಯ ವಾರ್ಷಿಕೋತ್ಸವ-ಪ್ರತಿಭಾ ಪ್ರದರ್ಶನ, ಗಣ್ಯರಿಗೆ ಸನ್ಮಾನ-ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ನೋವು-ದುಃಖ ಅಥವಾ ಸುಖದ ಕ್ಷಣಗಳಲ್ಲಿ ಸಂಗೀತದ ಇಂಪು ಜೀವನೋತ್ಸಾಹವನ್ನು ತುಂಬುತ್ತದೆ. ಸಂಗೀತದ ಮಾಧುರ್ಯ ಮನಸ್ಸನ್ನು ಮೃಧುಗೊಳಿಸುತ್ತಾ ಮಾನವೀಯತೆಯ ಕಡೆಗೆ ಮತ್ತು ಹೊಸತನದ ಕಡೆಗೆ ಕೊಂಡೊಯ್ಯುತ್ತದೆ ಎಂದು ವ್ಯಾಖ್ಯಾನಿಸಿದರು.

ಸಂಗೀತವೆಂಬುದು ತಪಸ್ಸಿದ್ದಂತೆ. ಧ್ಯಾನ, ನಿರಂತರ ಅಧ್ಯಯನದ ಮೂಲಕ ಈ ಕಲೆಯನ್ನು ಸಿದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೊಸದಾಗಿ ಸಂಗೀತ ಕ್ಷೇತ್ರವನ್ನು ಪ್ರವೇಶಿಸುವವರು ಈ ಕ್ಷೇತ್ರದ ದಿಗ್ಗಜರ ಸಾಧನೆ ಮತ್ತು ಶ್ರಮವನ್ನು ಅರ್ಥೈಸಿಕೊಂಡು ನಿರಂತರ ಅಭ್ಯಾಸದ ಮೂಲಕ ಸಾಧನೆಯ ಶಿಖರವನ್ನು ಏರುವಂತೆ ಹೇಳಿದರು.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಇಲ್ಲದೇ ಅವಕಾಶಗಳು ಸಿಗುವುದಿಲ್ಲ. ಅದೇ ರೀತಿ ಸಂಗೀತ ಕ್ಷೇತ್ರದಲ್ಲೂ ನಿರಂತರ ಶ್ರಮದಿಂದ ಅವಕಾಶಗಳು ದೊರೆಯುತ್ತವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಡಾ. ರಾಜ್‌ಕುಮಾರ್‌ರಂತಹ ಮೇರು ನಟರೇ ಹಲವು ಅಪಮಾನ, ಸವಾಲುಗಳನ್ನು ಎದುರಿಸಿ ಸಾಧನೆಯ ಉತ್ತುಂಗವೇರಿದ್ದು, ಇಂದಿನ ಕಲಾವಿದರಿಗೆ ಬಣ್ಣಿಸಿದರು.

ಜನಪದ ಗಾಯಕ ಮಹದೇವು ಕಾರ್ಯಕ್ರಮ ಉದ್ಘಾಟಿಸಿದರು. ಗಾಯಕರಾದ ರವಿಸಂತು, ಸಿ.ಪಿ. ವಿದ್ಯಾಶಂಕರ್, ಕಲಾವಿದರ ಜನಾರ್ಧನ್ ಕೊಂಡ್ಲಿ, ಗುಡ್‌ವಾಯ್ಸ್ ಸಂಗೀತ ತರಬೇತಿ ಶಾಲೆಯ ಸಿ. ದೇವರಾಜು, ಶಶಿಕುಮಾರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಲಾವಿದರಾದ ಶ್ರೀಕಂಠು, ಗುರುಮೂರ್ತಿ, ಗಾಮನಹಳ್ಳಿ ಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.