ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಆಕಾಂಕ್ಷಿಗಳು ಸಭೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದೇ ಪ್ರಜಾಪ್ರಭುತ್ವವಾಗಿದ್ದು, ಪಕ್ಷವು ಟಿಕೆಟ್ ನೀಡುವವರಿಗೆ ನಾವು ಬೆಂಬಲಿಸುತ್ತೇವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ಸಮರ್ಥಗೆ ಟಿಕೆಟ್‌ ಕೊಡಿಸುವ ಆಲೋಚನೆ ಇಲ್ಲ: ಡಾ.ಪ್ರಭಾ

- - -

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಆಕಾಂಕ್ಷಿಗಳು ಸಭೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದೇ ಪ್ರಜಾಪ್ರಭುತ್ವವಾಗಿದ್ದು, ಪಕ್ಷವು ಟಿಕೆಟ್ ನೀಡುವವರಿಗೆ ನಾವು ಬೆಂಬಲಿಸುತ್ತೇವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಾವನವರಾದ ಶಾಮನೂರು ಶಿವಶಂಕರಪ್ಪನವರಿಗೆ 5 ಸಲ ಶಾಸಕರಾಗಿ ಹಾಗೂ ಒಂದು ಸಲ ಸಂಸದರಾಗಿ ಆರಿಸಿದಕ್ಕಾಗಿ ನಾವು ಚಿರಋಣಿಯಾಗಿದ್ದೇವೆ. ಮಾವನವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.

ಜನಸೇವೆಗೆ ಸೂಕ್ತರಾದವರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡುತ್ತೇವೆ. ಕಾಂಗ್ರೆಸ್‌ ಅಭ್ಯರ್ಥಿಯನ್ನೇ ಉಪ ಚುನಾವಣೆಯಲ್ಲಿ ಗೆಲ್ಲಿಸಬೇಕೆಂಬುದು ನಮ್ಮ ಒತ್ತಾಸೆ. ನಮ್ಮ ಹಿರಿಯ ಪುತ್ರ ಸಮರ್ಥ ದಕ್ಷಿಣ-ಉತ್ತರ ಕ್ಷೇತ್ರಗಳು, ಲೋಕಸಭೆ ಚುನಾವಣೆ ವೇಳೆ ನಮ್ಮೆಲ್ಲರ ಪರ ಅತ್ಯಂತ ಸಕ್ರಿಯವಾಗಿ, ಜನರೊಂದಿಗೆ ಬೆರೆತು ಪ್ರಚಾರ ಕೈಗೊಂಡಿದ್ದಾರೆ. ಪಕ್ಷದ ಸಂಘಟನೆಗೆ ಓಡಾಡಿದ್ದಾರೆ. ಸರಳ, ಜನಾನುರಾಗಿ ಸಮರ್ಥಗೆ ಜನರೂ ಆಶೀರ್ವದಿಸಿದ್ದಾರೆ. ಸಮರ್ಥಗೆ ಚುನಾವಣೆ ಟಿಕೆಟ್ ಕೊಡಿಸುವ, ದಕ್ಷಿಣ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಎಂಬ ಆಲೋಚನೆಯೂ ನಮ್ಮಲ್ಲಿಲ್ಲ ಎಂದು ಸಂಸದೆ ತಿಳಿಸಿದರು.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಬಗ್ಗೆ ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಆದರೆ, ಚುನಾವಣಾ ಆಯೋಗ ಸಮರ್ಥ ಉತ್ತರ ನೀಡದೇ, ಕೇಂದ್ರದ ಕೈಗೊಂಬೆ ರೀತಿ ಕೆಲಸ ಮಾಡುತ್ತಿದೆ. ಮತದಾನದ ಹಕ್ಕು ಎಲ್ಲರಿಗೂ ಇದೆ. ಆದರೆ, ಮತದಾರರ ಪಟ್ಟಿ ಎಷ್ಟು ಪಾರದರ್ಶಕ ಎಂಬುದಷ್ಟೇ ನಮ್ಮ ಪ್ರಶ್ನೆ. ಈ ಬಗ್ಗೆ ತಾಲೂಕು, ಜಿಲ್ಲಾ ಕೇಂದ್ರ, ರಾಜ್ಯ ಮಟ್ಟದಲ್ಲೂ ಪ್ರತಿಭಟಿಸಿ, ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪನವರ ನಿಧನ ಹಿನ್ನೆಲೆಯಲ್ಲಿ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಮತದಾರರನ್ನು ಸರಿಯಾಗಿ ಪರಿಶೀಲಿಸಿ, ಪಟ್ಚಿ ತಯಾರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಸಂಸದೆ ಡಾ.ಪ್ರಭಾ ವಿವರಿಸಿದರು.

- - -

-ಫೋಟೋ: ಡಾ.ಪ್ರಭಾ