ಕಾಶ್ಮೀರದಲ್ಲಿ ಉಗ್ರರ ದಾಳಿ ವಿರುದ್ಧ ಮುಸ್ಲಿಂ ಸಮುದಾಯ ಆಕ್ರೋಶ

| Published : Apr 24 2025, 12:32 AM IST

ಕಾಶ್ಮೀರದಲ್ಲಿ ಉಗ್ರರ ದಾಳಿ ವಿರುದ್ಧ ಮುಸ್ಲಿಂ ಸಮುದಾಯ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾಕರ ದಾಳಿ ಖಂಡಿಸಿ ನಗರದ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ವತಿಯಿಂದ ಮುಸ್ಲಿಂ ಸಮುದಾಯದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಡಿಸಿ ಕಚೇರಿ ಮುಂದೆ ಪ್ರತಿಭಟನೆ । ಉಗ್ರರ ಗಲ್ಲಿಗೇರಿಸಿ ಘೋಷಣೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾಕರ ದಾಳಿ ಖಂಡಿಸಿ ನಗರದ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ವತಿಯಿಂದ ಮುಸ್ಲಿಂ ಸಮುದಾಯದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾರತ್ ಮಾತಾ ಕೀ ಜೈ, ಮಂಜುನಾಥ್ ಅಮರ್ ರಹೇ, ಇಂಡಿಯನ್ ಆರ್ಮಿ ಜಿಂದಾಬಾದ್, ಭಯೋತ್ಪಾದಕರನ್ನು ಗಲ್ಲಿಗೇರಿಸಿ ಎಂದು ಘೋಷಣೆ ಮೊಳಗಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಶಾಹೂದ್ ಅಮೀರ್, ಇದೊಂದು ಮನುಕುಲವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಯಾವ ಧರ್ಮಗಳು ಕೊಲ್ಲಲು ಹೇಳುವುದಿಲ್ಲ. ಕೊಲ್ಲುವವರಿಗೆ ಧರ್ಮವೇ ಇಲ್ಲ. ಮಾನವ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯವಿದು ಎಂದರು.

ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ, ಪ್ರಮುಖರಾದ ಮೌಲಾನಾ ಗುಲಾಬ್ ಬರ್ಖತಿ, ಮುನಾವರ್ ಪಾಷಾ, ಶರೀಫ್, ಅಶ್ರಫ್, ನಯಾಜ್ ಅಹಮ್ಮದ್, ಶಿ.ಜು. ಪಾಷಾ ಮತ್ತಿತರರು ಇದ್ದರು.

ಶಿವಮೊಗ್ಗ ವಕೀಲರ ಸಂಘ ಖಂಡನೆ

ಶಿವಮೊಗ್ಗ: ಕಾಶ್ಮೀರದಲ್ಲಿ ನಡೆದ ಉಗ್ರರ ಅಮಾನವೀಯ ಕೃತ್ಯವನ್ನು ಖಂಡಿಸಿ ಶಿವಮೊಗ್ಗ ವಕೀಲರ ಸಂಘದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ಉಗ್ರರಿಂದ ನರಮೇಧವಾಗಿದೆ. ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಘಟನೆ ಇದು. ಈ ಚಟುವಟಿಕೆಗಳನ್ನು ಬೆಂಬಲಿಸುವವರನ್ನು ನಿರ್ಮೂಲನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ, ಪದಾಧಿಕಾರಿಗಳಾದ ಎಸ್.ಎ.ಶ್ರೀನಿವಾಸ್, ಎಂ.ಬಿ. ಮಾಲತೇಶ್, ಎಂ.ಕಿಲಕಕುಮಾರಿ , ನಂದಿನಿದೇವಿ, ಜಗದೀಶ್, ಜನಾರ್ಧನ್ ಎಚ್.ಎಂ., ಅತಾವುಲ್ಲಾ ಖಾನ್, ನಿರಂಜನ್ ಮೋಹಿತೆ ಇತರರು ಇದ್ದರು.

ಉಗ್ರರ ದಾಳಿ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆಸಾಗರ: ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬುಧವಾರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು ಅತ್ಯಂತ ಅಮಾನುಷ ಕೃತ್ಯ ಇದಾಗಿದೆ. ಕಾಂಗ್ರೆಸ್ ಪಕ್ಷವು ಈ ದಾಳಿಯನ್ನು ಉಗ್ರವಾಗಿ ಖಂಡಿಸುತ್ತದೆ. ತಕ್ಷಣ ಉಗ್ರ ಕೃತ್ಯ ನಡೆಸಿದವರನ್ನು ಮಟ್ಟಹಾಕಿ. ದೇಶದಲ್ಲಿ ಮತ್ತೆ ಇಂತಹ ಕೃತ್ಯ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.ನಗರಸಭೆ ಸದಸ್ಯೆ ಮಧುಮಾಲತಿ, ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿದರು. ಪಕ್ಷದ ಪ್ರಮುಖರಾದ ಗಣಪತಿ ಮಂಡಗಳಳೆ, ಸೈಯದ್ ಜಾಕೀರ್, ಸದ್ದಾಂ, ಪಾರ್ವತಿ ಬೇಸೂರು, ರವಿ ಜಂಬೂರುಮನೆ, ರಮೇಶ್ ಚಂದ್ರಗುತ್ತಿ, ಮಹ್ಮದ್ ಜಿಕ್ರಿಯಾ, ಎಸ್.ಪಿ.ದೇವರಾಜ್, ಭೀರೇಶ್ ಕಾಗೋಡು ಇತರರು ಹಾಜರಿದ್ದರು.