ಮಡಿಕೇರಿಯಲ್ಲಿ ‘ಮುಸ್ಲಿಂ ಕಪ್’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆರಂಭ

| Published : Feb 10 2025, 01:47 AM IST

ಸಾರಾಂಶ

20ನೇ ವರ್ಷದ ಮುಸ್ಲಿಂ ಕಪ್‌ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿ ಫೆ. 10ರಿಂದ 16ರ ವರೆಗೆ ಮಡಿಕೇರಿ ನಗರದ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಚಿಲ್ ಬಾಯ್ಸ್ ಮಡಿಕೇರಿ ಇವರ ವತಿಯಿಂದ 20ನೇ ವರ್ಷದ ಮುಸ್ಲಿಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫೆ.10ರಿಂದ 16ರ ವರೆಗೆ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಚಿಲ್ ಬಾಯ್ಸ್ ಸಂಸ್ಥೆಯ ಅಧ್ಯಕ್ಷ ಎಂ.ಎ.ಉನೈಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಸೋಮವಾರ ಬೆಳಗ್ಗೆ 9 ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅಬ್ದುಲ್ ರಶೀದ್ ಎಡಪಾಲ, ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಕತ್ತೂರು, ಪ್ರಧಾನ ಕಾರ್ಯದರ್ಶಿ ಆದಂ ಎಸ್, ಉದ್ಯಮಿಗಳಾದ ಟಿ.ಪಿ.ಮಂಜೇಶ್, ಮಕ್ಬೂಲ್, ಸುಂಟಿಕೊಪ್ಪ ಯುವ ಕಾಂಗ್ರೆಸ್ ಮುಖಂಡ ಹರ್ಷದ್ ಲತೀಫ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಸಮಾರೋಪ ಸಮಾರಂಭ ಫೆ.16 ರಂದು ನಡೆಯಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಅಂತಿಮ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಮಡಿಕೇರಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಸರತ್ ಪಾಷಾ ರೌಫ್, ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಉಪಾಧ್ಯಕ್ಷ ಸಿ.ಎ.ರಾಝಿಕ್, ಹಾಲುಗುಂದ ಗ್ರಾ.ಪಂ ಸದಸ್ಯ ಹನೀಫ್, ಉದ್ಯಮಿ ಹಾಗೂ ಸಮಾಜ ಸೇವಕ ಕೆ.ಎಂ.ಗಣೇಶ್ ಮತ್ತಿತರರು ಉಪಸ್ಥಿತರಿರುವರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ ಆಯ್ದ ಕೆಲವು ಬಡ ಕುಟುಂಬಗಳಿಗೆ ಚಿಲ್ ಬಾಯ್ಸ್ ವತಿಯಿಂದ ಸಹಾಯಧನ ನೀಡಲಾಗುವುದು. ಇದೇ ಸಂದರ್ಭ ಸಾರ್ವಜನಿಕರಿಗೆ ಉಚಿತವಾಗಿ ನೀಡಲು ಉದ್ದೇಶಿಸಿರುವ ಆಕ್ಸಿಜನ್ ಯಂತ್ರವನ್ನು ಉದ್ಘಾಟಿಸಲಾಗುವುದು.

ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಗಳಿಸುವ ತಂಡಕ್ಕೆ 1ಲಕ್ಷ ರು., ದ್ವಿತೀಯ 50 ಸಾವಿರ ರು., ತೃತೀಯ 20 ಸಾವಿರ ರು., ನಾಲ್ಕನೇ 10 ಸಾವಿರ ರು. ಹಾಗೂ ಇದರೊಂದಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಉತ್ತಮ ದಾಂಡಿಗ, ಉತ್ತಮ ಕೀಪರ್, ಉತ್ತಮ ಬೌಲರ್, ಶಿಸ್ತುಬದ್ಧ ತಂಡ ಮತ್ತು ವಿವಿಧ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರದರ್ಶನ ಪಂದ್ಯಾಟ ಕೊಡಗು ಪತ್ರಕರ್ತರ ಸಂಘ ಹಾಗೂ ಚಿಲ್ ಬಾಯ್ಸ್ ತಂಡದ ನಡುವೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಪಾಲ್ಗೊಳ್ಳುವಂತೆ ಎಂ.ಎ.ಉನೈಸ್ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಎಂ.ಎ.ಉನೈಸ್ (ಅಧ್ಯಕ್ಷರು) 97410 91808, ಹಂಜಾ (ಕಾರ್ಯದರ್ಶಿ) 98455 59131, ಜಂಶೀರ್ ಎಂ.ಎ (ಜಂಟಿ ಕಾರ್ಯದರ್ಶಿ) 89718 06657 ನ್ನು ಸಂಪರ್ಕಿಸಬಹುದಾಗಿದೆ.