ಹಿರೇಮಠ ಜಾತ್ರೆಗೆ ತೇರು ನಿರ್ಮಿಸಿಕೊಟ್ಟ ಮುಸ್ಲಿಂ ಟ್ರಸ್ಟ್!

| Published : Mar 07 2024, 01:52 AM IST

ಸಾರಾಂಶ

ನರಗುಂದ ಪಟ್ಟಣದ ಐತಿಹಾಸಿಕ ಪಂಚಗೃಹ ಗುಡ್ಡದ ಹಿರೇಮಠದ ಸಿದ್ದೇಶ್ವರ ಜಾತ್ರೆಗೆ ಪಟ್ಟಣದ ಇಮಾಮ್‌ಸಾಹೇಬ್‌ ಮಹ್ಮದಸಾಬ್‌ ಶರಣರ ಸೇವಾ ಟ್ರಸ್ಟ್‌ ಸದಸ್ಯರು ₹30 ಲಕ್ಷ ವೆಚ್ಚದಲ್ಲಿ ನೂತನ ತೇರು ನಿರ್ಮಿಸಿಕೊಟ್ಟಿದ್ದಾರೆ.

ನರಗುಂದ: ಪಟ್ಟಣದ ಐತಿಹಾಸಿಕ ಪಂಚಗೃಹ ಗುಡ್ಡದ ಹಿರೇಮಠದ ಸಿದ್ದೇಶ್ವರ ಜಾತ್ರೆಗೆ ಪಟ್ಟಣದ ಇಮಾಮ್‌ಸಾಹೇಬ್‌ ಮಹ್ಮದಸಾಬ್‌ ಶರಣರ ಸೇವಾ ಟ್ರಸ್ಟ್‌ ಸದಸ್ಯರು ₹30 ಲಕ್ಷ ವೆಚ್ಚದಲ್ಲಿ ನೂತನ ತೇರು ನಿರ್ಮಿಸಿಕೊಟ್ಟು ಹಿಂದೂ-ಮುಸ್ಲಿಂ ಭಾವೈಕ್ಯಕ್ಕೆ ಗರಿ ಮೂಡಿಸಿದ್ದಾರೆ.ನಾಲ್ಕು ವರ್ಷಗಳ ಹಿಂದೆ ಪಟ್ಟಣದ ಮೆಹಬೂಬ್ ಸುಬಾನಿ ದರ್ಗಾದ ಬಾಬು ಅಜ್ಜನವರು ಪಂಚಗೃಹ ಗುಡ್ಡದ ಹಿರೇಮಠದ ಜಾತ್ರೆ ಕಾರ್ಯಕ್ರಮದಲ್ಲಿ ಪಂಚಪೀಠಾಧೀಶ್ವರರಲ್ಲಿ ಒಬ್ಬರಾದ ಉಜ್ಜಯಿನಿ ಜಗದ್ಗುರುಗಳ ಸಮ್ಮುಖದಲ್ಲಿ ಈ ಮಠಕ್ಕೆ ₹30 ಲಕ್ಷ ವೆಚ್ಚದಲ್ಲಿ ತೇರು ನಿರ್ಮಾಣ ಮಾಡಿ ಕೊಡುತ್ತೇನೆಂದು ವಾಗ್ದಾನ ಮಾಡಿದ್ದರು.

ಆದರೆ ಮಧ್ಯದಲ್ಲಿ ಕೊರೋನಾ ಕಾರಣದಿಂದ ತೇರು ನಿರ್ಮಾಣ ಮಾಡುವ ಕಾರ್ಯ ವಿಳಂಬವಾಯಿತು. 2023ರಲ್ಲಿ ಉಜ್ಜಯಿನಿಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ನೂತನ ತೇರಿನ ನಿರ್ಮಾಣದ ಪ್ರಸ್ತಾಪವಾದಾಗ ಬಾಬುಸಾಬ ಶರಣರು, ಒಂದು ವರ್ಷದೊಳಗೆ ನೂತನ ತೇರನ್ನು ಸೇವಾ ಟ್ರಸ್ಟ್ ಮೂಲಕ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದ್ದರು. ಅದರಂತೆ ಈಗ ರಥ ನಿರ್ಮಿಸಿಕೊಟ್ಟಿದ್ದಾರೆ.

ಸಂಪ್ರದಾಯದಂತೆ ರಥ: ಇಡಗುಂಜಿ ಗಣಪತಿ ದೇವಸ್ಥಾನದ ಪ್ರಧಾನ ರಥಶಿಲ್ಪಿ ಮೂಲಕ 25 ಅಡಿ ಎತ್ತರದ ರಥ ನಿರ್ಮಿಸಲಾಗಿದೆ. ಮುಸ್ಲಿಂ ಶರಣರು ರಥದ ನಿರ್ಮಾಣದ ನೇತೃತ್ವ ವಹಿಸಿಕೊಂಡಿದ್ದರೂ ವೀರಶೈವ ಲಿಂಗಾಯತ ಧರ್ಮದ ಸಂಪ್ರದಾಯದಂತೆ ರಥ ನಿರ್ಮಿಸಿ ಕೊಟ್ಟಿದ್ದಾರೆ. ನೂತನ ರಥಕ್ಕೆ ಐದು ದಿನಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳಂತೆ ಪೂಜೆ ಕಾರ್ಯಕ್ರಮ ನಡೆದಿದೆ. ಮಾ. 7ರಂದು ಸಂಜೆ 5.30ಕ್ಕೆ ಜಗದ್ಗುರುಗಳ ಸಮ್ಮುಖದಲ್ಲಿ ರಥೋತ್ಸವ ಜರುಗಲಿದೆ.ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಮಾ. 7ರಂದು ಮೆಹಬೂಬ್ ಸುಬಾನಿ ದರ್ಗಾದಿಂದ ಪಂಚಗೃಹ ಗುಡ್ಡದ ಹಿರೇಮಠದ ವರೆಗೆ ರಥದ ಮೆರವಣಿಗೆ ನಡೆಯಲಿದೆ. ಇದು ಸರ್ವಧರ್ಮದವರಿಂದ ನಿರ್ಮಾಣಗೊಂಡಿರುವ ರಥವಾಗಿದೆ. ಭಾವೈಕ್ಯದತ್ತ ಸಾಗಲು ನಾಂದಿ ಹಾಡಿದೆ ಎಂದು ನರಗುಂದ ಮೆಹಬೂಬ್ ಸುಬಾನಿ ದುರ್ಗಾದ ಶರಣ ಬಾಬು ಅಜ್ಜನವರು ಹೇಳುತ್ತಾರೆ.