ಸಾರಾಂಶ
ಕನ್ನಡಪ್ರಭ ವಾರ್ತೆ ಕಡೂರು
ಮುಸ್ಲಿಂ ಸಮದಾಯವು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಮತ ನೀಡುವ ಮೂಲಕ ಅವರನ್ನು ಗೆಲ್ಲಿಸುತ್ತೇವೆ ಎಂದು ಪಟ್ಟಣದ ಜರೀನಾ ಬೀಬಿ ದರ್ಗಾ ಸಮಿತಿ ಅಧ್ಯಕ್ಷ ಸಿ.ಇಮ್ರಾನ್ ಖಾನ್ ಹೇಳಿದರು.ಅವರು ಪಟ್ಟಣದ ದರ್ಗಾದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ 10 ವರ್ಷದಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿ ಅವರು ರೈಲ್ವೆ, ವಿಮಾನ, ಎಲ್‍ಐಸಿಯಂತಹ ಸರ್ಕಾರಿ ಸ್ವಾಮ್ಯದ ಕಂಪನಿ ಖಾಸಗೀಕರಣ ಮಾಡಿ ಮಾರಾಟ ಮಾಡಿದ್ದಾರೆ. ಜಾತಿ-ಧರ್ಮದ ಮೇಲೆ ರಾಜಕೀಯ ಮಾಡುತ್ತಿರುವ ಮೋದಿ ಕೆಳಗಿಳಿಸಬೇಕೆಂಬ ನಿರ್ಣಯ ಕೈಗೊಂಡಿರುವ ಅಲ್ಪ ಸಂಖ್ಯಾತರು, ಈ ಭಾರಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸಲಿದ್ದೇವೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಅಬೀದ್ ಪಾಷಾ ಮಾತನಾಡಿ, ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿಗಳಿಂದ ನಮ್ಮ ಸಮಾಜದ ಬಡವರಿಗೆ, ಮಹಿಳೆಯರಿಗೆ ಅನುಕೂಲವಾಗಿದೆ. ಬರಗಾಲದ ಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗಳು ಜೀವನಕ್ಕೆ ನೆಮ್ಮದಿ ನೀಡಿವೆ. ಅಲ್ಲದೆ ಶಾಸಕ ಕೆ.ಎಸ್.ಆನಂದ್ ಅವರು ಕ್ಷೇತ್ರದ ಮಸೀದಿ, ಕಬರಸ್ಥಾನ್ ಮತ್ತು ರಸ್ತೆ, ಚರಂಡಿ ನಿರ್ಮಿಸಲು 2 ಕೋಟಿಗೂ ಅಧಿಕ ಹಣವನ್ನು ಅಭಿವೃದ್ಧಿಗೆ ನೀಡಿದ್ದು, ಸಮುದಾಯ ಭವನ ನಿರ್ಮಿಸಲು ಒತ್ತು ನೀಡಿದ್ದಾರೆ. ಈ ಹಿನ್ನೆಲೆ ಕ್ಷೇತ್ರದ ಅಭಿವೃದ್ಧಿಗಾಗಿ ಆನಂದ್ ಅವರ ಕೈ ಬಲಪಡಿಸಲು ಶ್ರೇಯಸ್ ಪಟೇಲ್ ಅವರಿಗೆ ಮತ ನೀಡಲಿದ್ದೇವೆ. ಮೈತ್ರಿಯಿಂದ ಈಗ ಜನತಾದಳ ಬಜರಂಗದಳವಾಗಿದೆ ಎಂದು ಲೇವಡಿ ಮಾಡಿದರು.ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಸೈಯದ್ ಆರೀಫ್ ಮಾತನಾಡಿ, ಈ ಚುನಾವಣೆಯು ಸಂವಿಧಾನ ಮತ್ತು ಆರ್‌ಎಸ್‍ಎಸ್ ಎಂದಾಗಿದೆ. ಈ ದೇಶದ ಸಂವಿಧಾನ ಉಳಿಸಬೇಕು ಎಂಬ ನಿಟ್ಟಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿ ದೇಶದಾದ್ಯಂತ ಮತ ನೀಡಿ ರಾಷ್ಟ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಶ್ರಮಿಸಲಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ನಿಸಾರ್ ಅಹಮದ್, ಬಿಜೆಪಿಯಿಂದ ಮುಸ್ಲಿಂ ಸಮಾಜಕ್ಕೆ ಕಿರುಕುಳವಾಗುತ್ತಿದ್ದು ನಮ್ಮ ಪರಿಸ್ಥಿತಿ ಡೂ ಆರ್ ಡೈ ಎಂಬಂತಾಗಿದೆ,. ಅಂಬೇಡ್ಕರ್ ರಚಿಸಿದ ಸಂವಿಧಾನ ಉಳಿಸಲು ಕಾಂಗ್ರೆಸ್‍ಗೆ ಮತ ನೀಡಬೇಕು ಎಂದರು.ದರ್ಗಾ ಸಮಿತಿ ಪದಾಧಿಕಾರಿ ಅತಾವುಲ್ಲಾ ಸಾಬ್, ಕಾರ್ಯದರ್ಶಿ ಅನ್ಸರ್, ಮಂಡಿ ಇಕ್ಬಾಲ್, ಎನ್. ಬಶೀರ್ ಸಾಬ್, ಡಿ.ಕೆ.ಹೈದರ್, ಮಹಮದ್ ಯಾಸಿನ್, ಇಕ್ಬಾಲ್, ಖಾದರ್,ಮೊಹಿದ್ದೀನ್ ಖಾನ್, ಆರಿಫ್,ಮೆಹಬೂಬ್ ಖಾನ್ ಮತ್ತಿತರರು ಇದ್ದರು.