Muslim women brought a Hindu old woman to file a complaint!

ಉಡುಪಿ: ಅಹವಾಲು ಸಲ್ಲಿಸಲು ಅಸಹಾಯಕ ಹಿಂದೂ ವೃದ್ಧೆಯೊಬ್ಬರನ್ನು ಮುಸ್ಲಿಂ ಮಹಿಳೆಯರಿಬ್ಬರು ಕರೆದುಕೊಂಡ ಬಂದ ಸೌಹಾರ್ದ ಸಂದರ್ಭವೊಂದು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವೆ ಸಮ್ಮುಖದಲ್ಲಿ ನಡೆಯಿತು.ವಾಕರ್ ಹಿಡಿದುಕೊಂಡು ಓಡಾಡುವ ವೃದ್ಧ ಮಹಿಳೆಯೊಬ್ಬರು ತಮಗೆ ಉಳಿದುಕೊಳ್ಳಲು ಮನೆ ಇಲ್ಲ, ತಮ್ಮ ಬದುಕಿಗೆ ಸಹಾಯ ಮಾಡುವಂತೆ ಸಮಸ್ಯೆ ಹೇಳಿಕೊಳ್ಳಲು ಉಸ್ತುವಾರಿ ಸಚಿವರಲ್ಲಿ ಬಂದಿದ್ದರು, ಅವರನ್ನು ಮುಸ್ಲಿಂ ಮಹಿಳೆಯರಿಬ್ಬರು ಕರೆದುಕೊಂಡು ಬಂದಿದ್ದರು.

ಅಳುತ್ತಿದ್ದ ಮಹಿಳ‍ೆಯಿಂದ ಅಹವಾಲು ಅರ್ಜಿಯನ್ನು ಸ್ವೀಕರಿಸಿದ ಸಚಿವೆ ಅವರನ್ನು ಅಳದಂತೆ, ಅವರ ಸಮಸ್ಯೆ ಪರಿಹಾರ ಮಾಡಿಕೊಡುವುದಾಗಿ ಸಾಂತ್ವನ ಹೇಳಿದರು, ಈಗ ನಿಮ್ಮನ್ನು ಯಾರು ನೋಡಿಕೊಳ್ಳುತಿದ್ದಾರೆ ಎಂದು ಕೇಳಿದಾಗ ವೃದ್ಧ ಮಹಿಳೆ ಮುಸ್ಲಿಂ ಮಹಿಳೆಯರನ್ನು ತೋರಿಸಿ ಅವರು ತನಗೆ ಊಟ ಹಾಕುತಿದ್ದಾರೆ ಎಂದರು. ಮುಸ್ಲಿಂ ಮಹಿಳೆಯರು, ತಾವು ಈ ವೃದ್ಧೆಯ ನೆರೆಮನೆಯವರು, ಆಕೆಗೆ ಯಾರೂ ದಿಕ್ಕಿಲ್ಲ, ಮನೆ ಇಲ್ಲ, ಆಕೆಗೆ ಸಹಾಯ ಮಾಡುವಂತೆ ನಾವು ಎಲ್ಲ ಕಚೇರಿಗಳಿಗೆ ಹೋಗಿ ಕೇಳಿದ್ದೇವೆ, ಯಾರೂ ಸಹಾಯ ಮಾಡಿಲ್ಲ, ನಿಮ್ಮನ್ನು ಭೇಟಿಯಾಗಲು ಬೆಳಿಗ್ಗೆ 7 ಗಂಟೆಗೆ ವೃದ್ಧೆಯನ್ನು ಕರೆದುಕೊಂಡು ಬಂದು ಕಾಯುತಿದ್ದೇವೆ ಎಂದು ತಾವೂ ಕಣ್ಣೀರು ಮಿಡಿದರು. ಇದರಿಂದ ಅಚ್ಚರಿಗೊಳಗಾದ ಸಚಿವೆ, ಮಾಧ್ಯಮದರಿಗೆ, ನೋಡಿ ಇವರು ಮುಸ್ಲಿಂ ಅವರು ಹಿಂದೂ, ಇದು ಹಿಂದೂ ಮುಸ್ಲಿಂ ಬಾಂಧವ್ಯ, ಇದು ನಿಜವಾದ ಭಾರತ, ಬಿಜೆಪಿಯವರು ಇದನ್ನು ನೋಡಿ ಕಲಿಯಿರಿ ಎಂದು ಚಾಟಿ ಬೀಸಿದರು. ನಂತರ ವೃದ್ಧ ಮಹಿಳೆಗೆ ಖಂಡಿತವಾಗಿ ನಿಮ್ಮ ಸಮಸ್ಯೆ ಬಗ್ಗೆ ಹರಿಸುತ್ತೇನೆ, ನಿಶ್ಚಿಂತೆಯಾಗಿರಿ ಎಂದು ಆಶ್ವಾಸನೆ ನೀಡಿದರು.