ವಾಸ್ತವ ಬದುಕು ತೆರೆದಿಡುವ ಡೇರ್‌ ಡೆವಿಲ್‌ ಮುಸ್ತಫಾ

| Published : Apr 02 2024, 01:08 AM IST

ಸಾರಾಂಶ

ವಿಜಯಪುರ ಸಾಂಸ್ಕೃತಿಕ ಜನೋತ್ಸವದಲ್ಲಿ ಡೇರ್ ಡೆವಿಲ್ ಮುಸ್ತಫಾ ಸಿನಿಮಾ ಪ್ರದರ್ಶನ, ಸಂವಾದ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ವಿಜಯಪುರವೈವಿಧ್ಯತೆಯ ಮಧ್ಯೆ ಸಾಮರಸ್ಯದ ಬದುಕಿನ ಮುನ್ನೋಟ ತೆರದಿಡುವ ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧಾರಿತ ಡೇರ್ ಡೆವಿಲ್ ಮುಸ್ತಫಾ ಚಲನಚಿತ್ರ ನಮ್ಮ ದೈನಂದಿನ ಬದುಕಿನ ವಾಸ್ತವ ತೆರೆದಿಡುತ್ತದೆ ಎಂದು ಸಿನಿಮಾ ನಿರ್ದೇಶಕ ಶಶಾಂಕ ಸೋಗಲ್ ಅಭಿಪ್ರಾಯಪಟ್ಟರು.

ಆವಿಷ್ಕಾರ, ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ 13ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ ಎರಡನೇ ದಿನ ಡೇರ್ ಡೆವಿಲ್ ಮುಸ್ತಫಾ ಸಿನಿಮಾ ಪ್ರದರ್ಶನ ಬಳಿಕ ಸಂವಾದದಲ್ಲಿ ಅವರು ಮಾತನಾಡಿದರು.

ಪೂರ್ಣಚಂದ್ರ ತೇಜಸ್ವಿಯವರ ಆಶಯ ಈಗಲೂ ಪ್ರಸ್ತುತವಾಗಿದೆ. ನಮ್ಮ ಸಿನಿಮಾ ಕೇವಲ ಮನರಂಜನೆಗಲ್ಲದೆ ಜನರಿಗೆ ಸಂದೇಶ ತಲುಪಿಸುವ ಉದ್ದೇಶ ಹೊಂದಿದೆ. ಡೇರ್‌ ಡೆವಿಲ್ ಮುಸ್ತಫಾ ಕಥೆ ನನ್ನಲ್ಲಿರುವ ಪೂರ್ವಾಗ್ರಹ ಪೀಡಿತ ಮನಸ್ಥಿತಿ ಬಲಿಸಿತು. ಜನರಲ್ಲಿರುವ ಪೂವಾಗ್ರಹವನ್ನು ಹೊಡೆದೋಡಿಸಿ

ಜನರು ಪರಸ್ಪರ ಸಾಮರಸ್ಯದಿಂದ ಬದುಕುವ ಸಂದೇಶ ಕೊಡಲು ಈ ಸಿನಿಮಾ ನಿರ್ಮಿಸಲಾಗಿದೆ. ನನ್ನ ಸಿನಿಮಾಗಳಲ್ಲಿ ಹೀರೋ, ವಿಲನ್‌ಗಳು ಇರುವುದಿಲ್ಲ. ಜನರಿಗೆ ವಿಚಾರಗಳನ್ನು ತಲುಪಿಸುವ ಕಥಾ ಹಂದರ ಹೊಂದಿರುತ್ತವೆ. ಸಿನಿಮಾಗಳು ಜನತೆಯ ನೈಜ ಸಮಸ್ಯೆಗಳನ್ನು ಚಿತ್ರಿಸುವುದರ ಜೊತೆಗೆ ಸಮಾಜದಲ್ಲಿ ಹೊಸ

ಬದಲಾವಣೆ ನಿರೀಕ್ಷಿಸುವಂತಿರಬೇಕು. ಈ ಚಲನಚಿತ್ರ ಸಮಾಜದಲ್ಲಿ ಸೌಹಾರ್ದತೆ ಜಾಗೃತಗೊಳಿಸುವ ಕೆಲಸ ಮಾಡಿದೆ ಎಂದು ಹೇಳಿದರು.

ಚಲನಚಿತ್ರದ ನಾಯಕ ನಟ ಶಿಶಿರ ಬೈಕಾಡಿ ಮಾತನಾಡಿ, ನಮ್ಮೆಲ್ಲ ಪೂರ್ವಗ್ರಹಗಳನ್ನು ಒಂದೆಡೆ ಇಟ್ಟು ಮುಕ್ತ ಮನಸ್ಸಿನಿಂದ ಚಿತ್ರ ವೀಕ್ಷಿಸಬೇಕು. ಸಿನಿಮಾಗಳು ಕೇವಲ ಮನರಂಜನೆಯ ಸಾಧನಗಳಾಗದೆ, ನಮ್ಮನ್ನು ಚಿಂತನೆಗೆ ಹಚ್ಚುವಂತಿರಬೇಕು. ಜೊತೆಗೆ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುವಂತಿರಬೇಕು ಎಂದು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕವಾಗಿ ಎಐಡಿಎಸ್ಓನ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿದರು. ಎಐಎಂಎಸ್ಎಸ್ ನ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ ಅಧ್ಯಕ್ಷತೆ ವಹಿಸಿದ್ದರು.