ವಕ್ಫ್‌ ಆಸ್ತಿ ಒತ್ತುವರಿ ಬಗ್ಗೆ ಸಮಗ್ರ ತನಿಖೆಗೆ ಮುತಾಲಿಕ್‌, ಮಾಣಿಪ್ಪಾಡಿ ಆಗ್ರಹ

| Published : Nov 21 2024, 01:00 AM IST

ವಕ್ಫ್‌ ಆಸ್ತಿ ಒತ್ತುವರಿ ಬಗ್ಗೆ ಸಮಗ್ರ ತನಿಖೆಗೆ ಮುತಾಲಿಕ್‌, ಮಾಣಿಪ್ಪಾಡಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ಸಂದರ್ಭ ವಕ್ಫ್‌ ಸಂತ್ರಸ್ತರಿಗಾಗಿ ಶ್ರೀರಾಮಸೇನೆಯ ಸಹಾಯವಾಣಿ(9945288819) ಸಂಖ್ಯೆಯನ್ನು ಅನಾವರಣಗೊಳಿಸಲಾಯಿತು. ವಕ್ಫ್‌ ಬೋರ್ಡ್‌ನಿಂದ ಸಮಸ್ಯೆಗೆ ಒಳಗಾದ ರೈತರು ಹಾಗೂ ಬಡವರಿಗಾಗಿ ಈ ಸಹಾಯವಾಣಿ ತೆರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಒತ್ತುವರಿಯಾದ 29 ಸಾವಿರ ಎಕರೆ ವಕ್ಫ್‌ ಭೂಮಿಯನ್ನು ಮತ್ತೆ ವಕ್ಫ್‌ ಸುಪರ್ದಿಗೆ ಒಪ್ಪಿಸಬೇಕು. ವಕ್ಫ್‌ ಭೂಮಿ ಒತ್ತುವರಿ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಮತ್ತು ರಾಜ್ಯ ಅಲ್ಪಸಂಖ್ಯಾತ ಆಯೋಗ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಗಳೂರಿನ ಆರ್ಯ ಸಮಾಜ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ ಒತ್ತುವರಿ ಕುರಿತ ಆಯೋಗದ ವರದಿಯನ್ನು ಮಂಡಿಸದೆ ಹಿಂದಿನ ಬಿಜೆಪಿ ಸರ್ಕಾರ ಒಳ್ಳೆಯ ಅವಕಾಶವನ್ನು ವೃಥಾ ಕೈಚೆಲ್ಲಿದೆ. ಹಣಬಲ, ತೋಳ್ಬಲ ಜೋರಾಗಿ ಇದ್ದುದರಿಂದ ಬಿಜೆಪಿ ಸರ್ಕಾರ ವರದಿಯನ್ನು ಜಾರಿಗೆ ತಂದಿಲ್ಲ. ಈಗ ಬಿಜೆಪಿ ವಕ್ಫ್‌ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದರು.

ಪ್ರಮೋದ್‌ ಮುತಾಲಿಕ್‌ ಮಾತನಾಡಿ, 2013ರಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಸರ್ಕಾರ ವಕ್ಫ್‌ ಬೋರ್ಡ್‌ಗೆ ಪರಮಾಧಿಕಾರ ನೀಡಿತು. ಅಲ್ಲಿಂದ ಇಲ್ಲಿವರೆಗೆ 9.40 ಲಕ್ಷ ಎಕರೆ ವಕ್ಫ್‌ ಆಸ್ತಿ ಒತ್ತುವರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್‌ ಕಾಯ್ದೆಗೆ 44 ತಿದ್ದುಪಡಿ ತರಲು ಮುಂದಾಗಿದ್ದು, ಪ್ರತ್ಯೇಕ ಸಮಿತಿಯನ್ನೂ ರಚಿಸಿದ್ದಾರೆ. ಇದರ ಬೆನ್ನಲ್ಲೇ ಪಹಣಿ ಪತ್ರಗಳಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗುತ್ತಿದೆ. ಇದರ ವಿರುದ್ಧ ಈಗಾಗಲೇ ಶ್ರೀರಾಮಸೇನೆ ರಾಜ್ಯವ್ಯಾಪಿ ಮನೆ, ಮಠ, ಮಂದಿರ, ಶಾಲಾ, ಕಾಲೇಜು, ಸಂಘಸಂಸ್ಥೆಗಳಿಗೆ ತೆರಳಿ ಮನವರಿಕೆ ಮಾಡುತ್ತಿದೆ ಎಂದರು.

ವರದಿ ಕೋರ್ಟ್‌ ಒಪ್ಪಿಕೊಂಡಿದೆ: ಅನ್ವರ್‌ ಮಾಣಿಪ್ಪಾಡಿ ಮಾತನಾಡಿ, ವಕ್ಫ್‌ ಆಸ್ತಿ ಒತ್ತುವರಿ ಕುರಿತು ನಾನು ಸಲ್ಲಿಸಿದ ವರದಿಯನ್ನು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಹಾಗೂ ಲೋಕಾಯುಕ್ತ ನ್ಯಾಯಾಲಯ ಒಪ್ಪಿಕೊಂಡಿದೆ. ಹಾಗಾಗಿ 7 ಸಾವಿರ ಪುಟಗಳ ವರದಿಯ ಉಲ್ಲೇಖದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಶ್ರೀರಾಮಸೇನೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆನಂದ್‌ ಅಡ್ಯಾರ್‌, ವಿಭಾಗ ಅಧ್ಯಕ್ಷ ಮಧುಸೂದನ, ಜಿಲ್ಲಾಧ್ಯಕ್ಷ ಅರುಣ್‌ ಇದ್ದರು. ನ.22 ರಂದು ಜಮೀರ್‌ಗೆ ಮನವಿ ವಕ್ಫ್‌ ವಿವಾದ ಹುಟ್ಟುಹಾಕಿದ ವಿಚಾರಕ್ಕೆ ಸಂಬಂಧಿಸಿ ನ.22ರಂದು ಸಚಿವ ಜಮೀರ್‌ ಅಹ್ಮದ್‌ನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ವಕ್ಫ್‌ ಒತ್ತುವರಿಗೆ ಸಂಬಂಧಿಸಿ ಕ್ಷಮೆಗೆ ಆಗ್ರಹಿಸಲಿದ್ದಾರೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು.

ವಕ್ಫ್‌ ಸಂತ್ರಸ್ತರಿಗೆ ಸಹಾಯವಾಣಿ

ಇದೇ ಸಂದರ್ಭ ವಕ್ಫ್‌ ಸಂತ್ರಸ್ತರಿಗಾಗಿ ಶ್ರೀರಾಮಸೇನೆಯ ಸಹಾಯವಾಣಿ(9945288819) ಸಂಖ್ಯೆಯನ್ನು ಅನಾವರಣಗೊಳಿಸಲಾಯಿತು.

ವಕ್ಫ್‌ ಬೋರ್ಡ್‌ನಿಂದ ಸಮಸ್ಯೆಗೆ ಒಳಗಾದ ರೈತರು ಹಾಗೂ ಬಡವರಿಗಾಗಿ ಈ ಸಹಾಯವಾಣಿ ತೆರೆಯಲಾಗಿದೆ. ವಕ್ಫ್‌ನಿಂದ ತೊಂದರೆಗೆ ಒಳಗಾದವರು ಎಲ್ಲಿಗೆ ಹೋಗಬೇಕು, ಯಾವ ರೀತಿ ಹೋರಾಟ ಮಾಡಬೇಕು ಎಂದು ಗೊತ್ತಿಲ್ಲದವರಿಗೆ ನಾವು ಸಹಾಯ ಮಾಡುತ್ತೇವೆ. ಮೂರು ಹೈಕೋರ್ಟ್‌ಗಳಲ್ಲಿ ಐವರು ವಕೀಲರ ನೇಮಕ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಕಾನೂನು ಹೋರಾಟಕ್ಕೆ ಬೆಂಬಲ ನೀಡಲು ಈ ಸಹಾಯವಾಣಿ ಆರಂಭಿಸಲಾಗಿದೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು.