ಹಿಂದೂ-ಮುಸ್ಲಿಂ ಹಬ್ಬಗಳಲ್ಲಿ ಪರಸ್ಪರ ಸನ್ಮಾನ: ರಾಷ್ಟ್ರಕ್ಕೆ ಮಾದರಿ

| Published : Sep 20 2024, 01:39 AM IST

ಹಿಂದೂ-ಮುಸ್ಲಿಂ ಹಬ್ಬಗಳಲ್ಲಿ ಪರಸ್ಪರ ಸನ್ಮಾನ: ರಾಷ್ಟ್ರಕ್ಕೆ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ಈದ್‌ ಮಿಲಾದ್‌ ಕಾರ್ಯಕ್ರಮದ ಅಂಗವಾಗಿ ಬಸವಕಲ್ಯಾಣ ಕೋಟೆಯಿಂದ ಗಾಂಧಿ ವೃತ್ತದ ವರೆಗೆ ಮುಸ್ಲಿಂ ಸಮುದಾಯದವರು ಭವ್ಯ ಮೆರವಣಿಗೆ ನಡೆಸಿದರು

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ನಗರದಲ್ಲಿ ನಡೆದಿರುವ ಈದ್‌ ಮಿಲಾದ್‌ ಮತ್ತು ಗಣೇಶ ಉತ್ಸವ ಕಾರ್ಯಕ್ರಮಗಳಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯಿಂದ ನಡೆದುಕೊಂಡಿದ್ದು ರಾಷ್ಟ್ರಕ್ಕೆ ಹೊಸ ಮಾದರಿಯಾಗಿದೆ. ಶರಣರ ನಾಡಿನಲ್ಲಿ ಹಿಂದೂ ಮುಸ್ಲಿಂ ಭಾಯಿ ಭಾಯಿ ಎನ್ನುವ ವಾಕ್ಯದಂತೆ ಎರಡೂ ಹಬ್ಬಗಳನ್ನು ಇಬ್ಬರೂ ಕೂಡಿ ಆಚರಿಸಿದ್ದು ದೇಶಕ್ಕೆ ಮಾದರಿ ಸಂದೇಶ ಕಳುಹಿಸದಂತಾಗಿದೆ ಎಂದು ಡಿವೈಎಸ್‌ಪಿ ಜೆಎಸ್‌ ನ್ಯಾಮೆಗೌಡ ತಿಳಿಸಿದರು.

ಎರಡೂ ಹಬ್ಬಗಳ ಪ್ರಾರಂಭ ಮುನ್ನ ಪೊಲೀಸ್‌ ಠಾಣೆಯಲ್ಲಿ ಹಲವಾರು ಶಾಂತಿ ಸಭೆ ಕರೆಯಲಾಗಿತ್ತು. ಈ ವೇಳೆ ಡಿವೈಎಸ್‌ಪಿ ಜೆ.ಎಸ್‌ ನ್ಯಾಮೆಗೌಡ ಅವರು ಹಿಂದೂ-ಮುಸ್ಲಿಂ ಸಹೋದರರು ಆತ್ಮೀಯವಾಗಿ ಹಬ್ಬ ಆಚರಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ, ಒಬ್ಬರ ಹಬ್ಬದಲ್ಲಿ ಮತ್ತೋಬ್ಬರು ಪಾಲ್ಗೊಂಡು ಪರಸ್ಪರ ಅನ್ಯೋನ್ಯವಾಗಿ ಸಾಮರಸ್ಯದಿಂದ ಬದುಕಿ ಬಾಳಬೇಕು ಎಂದು ಸಲಹೆ ನೀಡಿದರು.

ಈದ್ಗಾ ಸಮಿತಿಯ ಅಧ್ಯಕ್ಷ ಅಮೀರ್‌ ಸೇಠ, ಯುವರಾಜ ಭೆಂಡೆ ಅವರು ಡಿವೈಎಸ್‌ಪಿ ನ್ಯಾಮೆಗೌಡರ ಹಾಗೂ ಸಿಪಿಐ ಅಲಿಸಾಬ್‌ ಅವರ ಸಲಹೆ ಕಾರ್ಯರೂಪಕ್ಕೆ ಬಂದಿರುವುದು ನಮ್ಮೆಲ್ಲರಿಗೆ ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದರು.

ಸೆ. 16ರಂದು ಈದ್‌ ಮಿಲಾದ್‌ ಕಾರ್ಯಕ್ರಮದ ಅಂಗವಾಗಿ ಬಸವಕಲ್ಯಾಣ ಕೋಟೆಯಿಂದ ಗಾಂಧಿ ವೃತ್ತದ ವರೆಗೆ ಮುಸ್ಲಿಂ ಸಮುದಾಯದವರು ಭವ್ಯ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮೆರವಣಿಗೆಯು ಭವಾನಿ ಮಂದಿರ ಹತ್ತಿರ ಬಂದಾಗ ಹಿಂದೂಗಳು ಮುಸ್ಲಿಂ ಸಮುದಾಯದವರಿಗೆ ಶಾಲು ಹೊದಿಸಿ ಸನ್ಮಾನಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವೈಕ್ಯತೆಯನ್ನು ಮೆರೆದರು. ಬುಧವಾರ ರಾತ್ರಿ ಗಣೇಶ ವಿಸರ್ಜನೆ ಕಾರ್ಯಕ್ರಮವು ಸಹ ಕೋಟೆಯಿಂದ ತ್ರಿಪೂರಾಂತ ಕೆರೆಯ ವರೆಗೆ ನಡೆಯುವ ಮೆರವಣಿಗೆ ಸಂದರ್ಭದಲ್ಲಿ ಕೂಡ ಮುಸ್ಲಿಂ ಸಮುದಾಯದವರು ಆಗಮಿಸಿ ಗಣೇಶನಿಗೆ ಪೂಜೆ ಸಲ್ಲಿಸಿ 12ಕ್ಕೂ ಅಧಿಕ ಗಣೇಶ ಮಂಡಳಿಗಳ ಪ್ರಮುಖರಿಗೆ ಶಾಲು ಹೊದಿಸಿ ಸನ್ಮಾನಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಈ ವರ್ಷದ ವಿಶೇಷತೆಯಾಗಿತ್ತು.

ಮುಸ್ಲಿಂ ಮುಖಂಡರಾದ ಯಸ್ರಬ್‌ ಅಲಿ ಖಾದ್ರಿ, ನ್ಯಾಯವಾದಿ ಮೀರ್‌ ಅಮಾನತ್‌ ಅಲಿ, ಖಲೀಲ್‌, ಮುಸ್ಲಿಂ ಬೈತುಲಮಾಲ್‌ ಅಧ್ಯಕ್ಷ ಮುಕ್ದಮ್‌ ಮೊಹಿಯೋದ್ದಿನ್, ಅಜರ್‌ ಅಲಿ ನವರಂಗ, ಗಫೂರ ಪೇಶ ಇಮಾಮ್‌, ಏಜಾಜ್‌ ಲಾತೂರೆ, ಹಿಂದೂ ಸಮಾಜದ ಮುಖಂಡರಾದ ದೀಪಕ ಗುಡ್ಡಾ, ಕಿರಣ, ಸಂತೋಷ ಸಾಳುಂಕೆ, ಪ್ರದೀಪ ಬೇಂದ್ರೆ ಮುಂತಾದವರು ಪಾಲ್ಗೊಂಡು ಗಣೇಶ ಉತ್ಸವದಲ್ಲಿ ಭ್ರಾತೃತ್ವತೆಯನ್ನು ತೋರಿಸಿಕೊಟ್ಟರು.