ಪಕ್ಷಾಂತರಿಗಳ ವಿರುದ್ಧ ಮಾತ್ರ ನನ್ನ ಸ್ಪರ್ಧೆ: ದಿನೇಶ್‌

| Published : May 28 2024, 01:04 AM IST

ಸಾರಾಂಶ

ನನ್ನ ಸ್ಪರ್ಧೆ ಪಕ್ಷಾಂತರಿಗಳ ವಿರುದ್ಧವೇ ಹೊರತು ಪಕ್ಷದ ವಿರುದ್ಧ ಅಲ್ಲ. ಈ ಹಿಂದೆ ಎರಡು ಬಾರಿ ಕಾಂಗ್ರೆಸ್‌ನಿಂದ ಪರಿಷತ್ ಚುನಾವಣೆಗೆ ನಿಂತು ಅಲ್ಪ ಮತದಿಂದ ಸೋಲನುಭವಿಸಿದ್ದೆ ಎಂದರು. ಇಲ್ಲಿಯವರೆಗೂ ಪಕ್ಷದ ವಿರುದ್ಧ ಹೆಜ್ಜೆ ಇಟ್ಟಿರಲಿಲ್ಲ. ಆದರೆ ಈ ಬಾರಿ ೧೦ ತಿಂಗಳ ಮೊದಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರಿಂದಲೇ ಕ್ಷೇತ್ರಾದ್ಯಂತ ಸಂಚರಿಸಿ ಪದವೀಧರರ ನೋಂದಣಿ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ.

ಕನ್ನಡಪ್ರಭವಾರ್ತೆ ಸಾಗರ

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನನ್ನ ಬೆಂಬಲಿಸುತ್ತಾರೆ ಎನ್ನುವ ನಂಬಿಕೆಯಿದೆ ನೈಋತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಎಸ್.ಪಿ. ದಿನೇಶ್ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಸ್ಪರ್ಧೆ ಪಕ್ಷಾಂತರಿಗಳ ವಿರುದ್ಧವೇ ಹೊರತು ಪಕ್ಷದ ವಿರುದ್ಧ ಅಲ್ಲ. ಈ ಹಿಂದೆ ಎರಡು ಬಾರಿ ಕಾಂಗ್ರೆಸ್‌ನಿಂದ ಪರಿಷತ್ ಚುನಾವಣೆಗೆ ನಿಂತು ಅಲ್ಪ ಮತದಿಂದ ಸೋಲನುಭವಿಸಿದ್ದೆ ಎಂದರು. ಇಲ್ಲಿಯವರೆಗೂ ಪಕ್ಷದ ವಿರುದ್ಧ ಹೆಜ್ಜೆ ಇಟ್ಟಿರಲಿಲ್ಲ. ಆದರೆ ಈ ಬಾರಿ ೧೦ ತಿಂಗಳ ಮೊದಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರಿಂದಲೇ ಕ್ಷೇತ್ರಾದ್ಯಂತ ಸಂಚರಿಸಿ ಪದವೀಧರರ ನೋಂದಣಿ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಅಂತಿಮವಾಗಿ ಹೈಕಮಾಂಡ್ ಪಕ್ಷಾಂತರಿಗಳಿಗೆ ಮಣೆ ಹಾಕಿದೆ. ಇದನ್ನು ವಿರೋಧಿಸಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಎಂದರು.

ಹಣ ಬಲವೋ, ಜನ ಬಲವೊ ಎನ್ನುವುದು ನಿರ್ಧರಿಸುವ ಚುನಾವಣೆ ಇದಾಗಿದ್ದು ಹಾಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಯಾವೆಲ್ಲ ಪಕ್ಷದಲ್ಲಿ ಎಷ್ಟೆಷ್ಟು ದಿನ ಇದ್ದರೆನ್ನುವುದು ಮತದಾರರು, ಪಕ್ಷದ ಮುಖಂಡರಿಗೂ ಗೊತ್ತಿದೆ. ಆದರೂ ಅವರಿಗೇ ಮಣೆ ಹಾಕಿರುವುದು ವಿರೋಧಿಸಿದ್ದೇನೆ. ಇದಕ್ಕೆ ಪಕ್ಷದ ಹಲವು ಮುಖಂಡರು ಆಂತರಿಕವಾಗಿ ಬೆಂಬಲ ಸೂಚಿಸಿದ್ದಾರೆ. ಕ್ಷೇತ್ರದ ಎಲ್ಲ ಪದವೀಧರರ ಧ್ವನಿ, ಸೇವಾಕಾಂಕ್ಷಿಯಾಗಿ ಕಣಕ್ಕಿಳಿದಿದ್ದೇನೆ. ನಿರುದ್ಯೋಗಿ ಪದವೀಧರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ. ಸುಧಾಕರ್, ಸಚಿನ್, ಡಾ.ಉಮೇಶ್ ಇದ್ದರು. ನಂತರ ಪಟ್ಟಣದ ಎಲ್.ಬಿ.ಕಾಲೇಜು, ಇಂದಿರಾಗಾಂಧಿ ಮಹಿಳಾ ಕಾಲೇಜು, ನ್ಯಾಯಾಲಯದ ಆವರಣದಲ್ಲಿ ಪ್ರಚಾರ ನಡೆಸಿದರು.