ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ನನ್ನ ಕರ್ತವ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

| Published : Jan 06 2025, 01:02 AM IST

ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ನನ್ನ ಕರ್ತವ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಂಚರತ್ನ ಯೋಜನೆ ಇಟ್ಟುಕೊಂಡು ಹೋರಾಡಿತು. ಆದರೆ, ಜನರು ಬೆಂಬಲ ನೀಡಲಿಲ್ಲ. ನನಗೆ 5 ವರ್ಷ ಸಂಪೂರ್ಣ ಆಡಳಿತ ನಡೆಸಲು ಸರ್ಕಾರ ಕೊಟ್ಟಿದ್ದರೆ ರಾಜ್ಯವನ್ನು ರಾಮರಾಜ್ಯ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಮಂಡ್ಯ ಜನತೆ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿ ಕಳುಹಿಸಿದ್ದರಿಂದ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವನಾಗಿದ್ದೇನೆ. ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡಬೇಕಾಗಿರುವುದು ನನ್ನ ಕರ್ತವ್ಯ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಹಲಗೂರು ಪ್ರೌಢಶಾಲಾ ವಿದ್ಯಾ ಸಂಸ್ಥೆ ಆವರಣದಲ್ಲಿ ನಡೆದ ಬೃಹತ್ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ನನಗೆ ರಾಜಕೀಯವಾಗಿ ಯಾವುದೇ ಸ್ಥಾನಮಾನ ದೊರಕಿದ್ದರೂ ಅದು ನಿಮಗೆ ಸಲ್ಲುತ್ತದೆ ಎಂದರು.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಂಚರತ್ನ ಯೋಜನೆ ಇಟ್ಟುಕೊಂಡು ಹೋರಾಡಿತು. ಆದರೆ, ಜನರು ಬೆಂಬಲ ನೀಡಲಿಲ್ಲ. ನನಗೆ 5 ವರ್ಷ ಸಂಪೂರ್ಣ ಆಡಳಿತ ನಡೆಸಲು ಸರ್ಕಾರ ಕೊಟ್ಟಿದ್ದರೆ ರಾಜ್ಯವನ್ನು ರಾಮರಾಜ್ಯ ಮಾಡುತ್ತಿದೆ ಎಂದರು.

ಪ್ರತಿ ಹೋಬಳಿಯಲ್ಲಿ 20 ಹಾಸಿಗೆಗಳ ಆಸ್ಪತ್ರೆ, ಮಕ್ಕಳ ಶಿಕ್ಷಣಕ್ಕಾಗಿ ಸುಸಜ್ಜಿತ ಶಾಲೆ, ರೈತರಿಗೆ ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆ ಬೆಳೆಯಲು ಅನುಕೂಲ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತಿದ್ದೆ. ಆದರೆ, ಜನರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಕಾಲದಲ್ಲಿ ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ 200 ರು. ಮಾಶಾಸನ ನೀಡುತ್ತಿದ್ದು, ನಾನು ಸಿಎಂ ಆದಾಗ 500 ನಂತರ ಸಾವಿರ ರು.ಗೆ ಹೆಚ್ಚಿಸಿದೆ. ಜೊತೆಗೆ 25 ಕೋಟಿ ರು. ಸಾಲಮನ್ನಾ ಮಾಡಿದೆ. ಇದರಿಂದ ನಿಮ್ಮ ಮನೆಯವರ 2 ರಿಂದ 3 ಲಕ್ಷ ರು. ಸಾಲ ಮನ್ನಾವಾಗಿದೆ. ಅದನ್ನು ಯಾರು ನೆನೆಪಿಸಿಕೊಳ್ಳದೆ ಬರೀ 2000 ರು. ಬಗ್ಗೆ ಮಾತ್ರ ಯೋಚಿಸಿದರು ಎಂದರು.

ರಾಜ್ಯದ ಹಲವು ಕಡೆ ಬಾಣಂತಿಯರ ಸಾವು ಸರ್ಕಾರದ ಹಣದ ದಾಹದಿಂದ ಕಳಪೆ ಔಷಧಿಗಳನ್ನು ಖರೀದಿಸಿ ಬಡವರಿಗೆ ನೀಡಿ ಸಾವು ನೋವಿಗೆ ಕಾರಣವಾಗಿರುವುದು ಜಗಜಾಹಿರಾಗಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಶಕ್ತಿಯುಳ್ಳಂತವರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಹಲವು ಖಾಸಗಿ ವೈದ್ಯರು ಭಾಗವಹಿಸಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಡಿಸಿದರು.