ಶಿವಗಂಗ ಗ್ರಾಮದ ಬೆಸ್ಕಾಂ ಆವರಣದಲ್ಲಿ 1 ಕೋಟಿ 20 ಲಕ್ಷ ರು. ವೆಚ್ಚದಲ್ಲಿ ಬೆವಿಕಂ ಕಾರ್ಯ ಮತ್ತು ಪಾಲನ ಶಾಖೆ ನೂತನ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ನಾನು ಆಡಳಿತ ಪಕ್ಷದ ಎಂಎಲ್‍ಎ ಅಲ್ಲ, ವಿರೋಧ ಪಕ್ಷದಲ್ಲಿದ್ದುಕೊಂಡು ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ತಂದು ದಿನನಿತ್ಯವು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿದ್ದೇನೆ. ಅಧಿಕಾರ ಶಾಶ್ವತವಾಗಿರಲ್ಲ. ಇರುವಷ್ಟು ದಿನ ಹತ್ತಾರು ಜನಕ್ಕೆ ಉಪಯೋಗವಾಗುವ ಕೆಲಸವಾಗಬೇಕೆಂಬುದು ನನ್ನ ಮೂಲ ಉದ್ದೇಶ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಶಿವಗಂಗ ಗ್ರಾಮದ ಬೆಸ್ಕಾಂ ಆವರಣದಲ್ಲಿ 1 ಕೋಟಿ 20 ಲಕ್ಷ ರು. ವೆಚ್ಚದಲ್ಲಿ ಬೆವಿಕಂ ಕಾರ್ಯ ಮತ್ತು ಪಾಲನ ಶಾಖೆ ನೂತನ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಮಳೆ ಇಲ್ಲದೆ ರೈತರು ಅಡಿಕೆ ತೋಟಗಳನ್ನು ಕಡಿದು ಹಾಕಿದರೆ ಮನಸ್ಸಿಗೆ ಎಷ್ಟು ನೋವಾಗುತ್ತದೆಂಬ ಅರಿವಿಟ್ಟುಕೊಂಡಿದ್ದೇನೆ. ಚಿಕ್ಕಕೆರೆಯಲ್ಲಿ 130 ಕೋಟಿ ರು. ವೆಚ್ಚದಲ್ಲಿ ಮೂರು ಮೋಟಾರ್ ಹಾಕಿಸಿ ಮಲಸಿಂಗನಹಳ್ಳಿ ಗುಡ್ಡದ ಮೇಲೆ ಟ್ಯಾಂಕ್ ಕಟ್ಟಿಸಿ ನೀರು ಹರಿಸಲಾಗುವುದು. ಸೂರ್ಯ ಚಂದ್ರ ಇರುವವರೆಗೂ ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡಿದ್ದೇನೆಂದು ತಿಳಿಸಿದರು.ತಾಲೂಕಿನಾದ್ಯಂತ 17 ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಇಷ್ಟಕ್ಕೆ ಸುಮ್ಮನಾಗಿಲ್ಲ. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ರೇಷ್ಮೆ ಇಲಾಖೆಗೆ ಸೇರಿದ 13.5 ಎಕರೆ ಜಾಗವನ್ನು ವಿದ್ಯುತ್ ಇಲಾಖೆಗೆ ನೀಡಿದ್ದು, 500 ಕೋಟಿ ರು.ವೆಚ್ಚದಲ್ಲಿ 400 ಕೆ.ವಿ. ಪವರ್ ಸ್ಟೇಷನ್ ಕಟ್ಟಿಸುತ್ತೇನೆ. ಜೋಗ್‍ಫಾಲ್ಸ್‍ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಿ ದಿನಕ್ಕೆ ಎಂಟ್ಹತ್ತು ಗಂಟೆಗಳ ಕಾಲ ನಿರಂತರವಾಗಿ ರೈತರಿಗೆ ವಿದ್ಯುತ್ ನೀಡಲಾಗುವುದು ಎಂದರು.
ಇನ್ನೂ ಎರಡು ತಿಂಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು. ಕೆರೆಗಳು ಇಲ್ಲದ ಕಡೆ ಚೆಕ್‍ಡ್ಯಾಂಗಳನ್ನು ಕಟ್ಟಿಸಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿರುವುದರ ಪರಿಣಾಮ ಬೋರ್‍ವೆಲ್‍ಗಳಲ್ಲಿ ನೀರಿದೆ. ಯಾರು ನಿಮ್ಮ ಕಷ್ಟ-ಸುಖಕ್ಕೆ ಸ್ಪಂದಿಸುತ್ತಾರೆಂಬುದನ್ನು ಅರಿತುಕೊಂಡು ಚುನಾವಣೆಯಲ್ಲಿ ಮತ ನೀಡಿ. ಗಿಲಿಟ್ ಮಾಡುವವರ ಮಾತಿಗೆ ಮರುಳಾಗಬೇಡಿ. ತೇಕಲವಟ್ಟಿ, ಕೊಳಾಳ್ ಕಡೆಗೆ ಹೋದರೆ ಬೋರ್‍ವೆಲ್‍ಗಳಲ್ಲಿ ಒಂದು ಹನಿಯೂ ನೀರು ಇರುತ್ತಿರಲಿಲ್ಲ. ಸಾವಿರಾರು ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದರಿಂದ ಬೋರ್‌ಗಳಲ್ಲಿ ನೀರು ಚಿಮ್ಮುತ್ತಿದೆ. ನಾನು ಹೊಸದಾಗಿ ಎಂಎಲ್‍ಎ ಆದವನಲ್ಲ. 32 ವರ್ಷಗಳ ಕೆಳಗೆ ಭರಮಸಾಗರದಿಂದ ಪ್ರಥಮವಾಗಿ ಸ್ಪರ್ಧಿಸಿ ಗೆದ್ದ ಮೇಲೆ ಐದು ವರ್ಷಗಳಲ್ಲಿ 383 ಹಳ್ಳಿಗಳಲ್ಲಿ ರಸ್ತೆಗಳನ್ನು ಮಾಡಿಸಿದ್ದರಿಂದ ಜನ ರಸ್ತೆ ರಾಜ ಎಂಬ ಬಿರುದು ನೀಡಿ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿ ಎರಡನೆ ಬಾರಿಗೂ ಚುನಾವಣೆಯಲ್ಲಿ ಗೆಲ್ಲಿಸಿದರೆಂದು ಸ್ಮರಿಸಿಕೊಂಡರು.ಈ ಸಂದರ್ಭದಲ್ಲಿ ನಾರದಮುನಿ ವಸಂತ್‍ಕುಮಾರ್, ಲವಕುಮಾರ್, ಗಿರೀಶ್, ಸತೀಶ್, ಮೌನೇಶ್, ಪ್ರಕಾಶ್, ದಿನೇಶ್, ಬೆಸ್ಕಾಂ ಎಇಇ ಜಯಣ್ಣ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.