ಸಾರಾಂಶ
ಧಾರವಾಡ:ಕೆಲವೇ ದಿನಗಳ ಹಿಂದಷ್ಟೇ ಮೂರು ಲಕ್ಷ ಅಂತರದಿಂದ ಗೆಲವು ಸಾಧಿಸುತ್ತೇನೆ ಎಂದು ಹೇಳಿದ್ದ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಇದೀಗ ನಾಲ್ಕು ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಮ್ಮ ಪ್ರಚಾರ ಜೋರಾಗಿ ನಡೆದಿದೆ. ಜನರ ಸ್ಪಂದನೆ ಉತ್ತಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಆಗಿರುವ ಕೆಲಸಗಳನ್ನು ಬಿಜೆಪಿ ಕಾರ್ಯಕರ್ತರು ಮತದಾರರಿಗೆ ತಿಳಿಯಪಡಿಸುತ್ತಿದ್ದಾರೆ. ಚುನಾವಣೆಗೆ ಸಮಯ ಹೆಚ್ಚು ನೀಡಿದ್ದು ಸಂತೋಷವಾಗಿದೆ. ಮತದಾರರು ತಮಗೆ ಮತ ನೀಡಲು ಹಾಗೂ ಮತ್ತೊಮ್ಮೆ ಮೋದಿ ಗೆಲ್ಲಿಸಲು ತುದಿಗಾಲಿನ ಮೇಲೆ ನಿಂತಿದ್ದಾರೆ ಎಂದರು.ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗದ ವಿಚಾರವಾಗಿ ಮಾತನಾಡಿದ ಅವರು, ಧಾರವಾಡ ಕ್ಷೇತ್ರ ಸೇರಿದಂತೆ ಕಾಂಗ್ರೆಸ್ಸಿಗೆ ಬಹಳ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿ ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹತಾಶರಾಗಿದ್ದಾರೆ ಎಂದರು. ಬಿಜೆಪಿಯಿಂದ ಕೆಲವರು ಹೊರಗೆ ಹೋಗುವ ವಿಚಾರವಾಗಿ, ನಮ್ಮ ಪಕ್ಷದಲ್ಲಿ ಈ ಸಲ ಬಹಳ ಆಕಾಂಕ್ಷಿಗಳಾಗಿದ್ದರು. ಹೀಗಾಗಿ ಸ್ವಲ್ಪ ಅಸಮಾಧಾನದ ಸಮಸ್ಯೆಯಾಗಿದೆ. ಪಕ್ಷದಿಂದ ಸ್ಪರ್ಧಿಸಿದವರು ಗೆಲ್ಲುವರೆಂಬ ವಿಶ್ವಾಸವಿದೆ. ಹೀಗಾಗಿ ಅಭ್ಯರ್ಥಿಯಾಗಲು ಪೈಪೋಟಿ ಇತ್ತು. ಅಸಮಾಧಾನಿತರ ಜೊತೆ ಮಾತುಕತೆಗಳು ನಡೆದಿವೆ. ಈಶ್ವರಪ್ಪ ಜೊತೆ ಪಕ್ಷದ ಮುಖಂಡರು ಮಾತನಾಡುತ್ತಿದ್ದಾರೆ. ಈಶ್ವರಪ್ಪ ಹಿರಿಯ, ಪಕ್ಷಕ್ಕೆ ಬದ್ಧತೆ ಇರುವ ನಾಯಕರು ಎಂದರು.ಚುನಾವಣಾ ಪ್ರಚಾರಕ್ಕೆ ಮಹಾದಾಯಿ ರೈತರು ಅಡ್ಡಿಪಡಿಸುತ್ತಾರೆಂಬ ಪ್ರಶ್ನೆಗೆ, ಈ ಯೋಜನೆ ಜಾರಿಗೆ ವನ್ಯಜೀವಿ ಪ್ರದೇಶದ ಗೊಂದಲವಿದೆ. ಮಹಾದಾಯಿ ವಿಷಯದಲ್ಲಿ ರಾಜ್ಯ ಸರ್ಕಾರ ಸೂಕ್ತ ಮಾಹಿತಿ ನೀಡುತ್ತಿಲ್ಲ. ಇಲ್ಲಿಯವರೆಗೆ ಆಗಿದ್ದೆಲ್ಲ ಬಿಜೆಪಿಯೇ ಮಾಡಿದೆ. ಕಾಂಗ್ರೆಸ್ ಏನೂ ಮಾಡಿಲ್ಲ, ತದ್ವಿರುದ್ಧವಾಗಿ ನಡೆದುಕೊಂಡು ಬಂದಿದೆ. ಇಷ್ಟೊತ್ತಿಗೆ ಕೆಲಸ ಮುಗಿಬೇಕಿತ್ತು. ವನ್ಯಜೀವಿ ಮಂಡಳಿ ಸಮಯ ತೆಗೆದುಕೊಂಡಿದ್ದಕ್ಕೆ ವಿಳಂಬವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕಿದೆ. ವನ್ಯಜೀವಿ ಮಂಡಳಿ ಸಮಸ್ಯೆ ಇತ್ಯರ್ಥವಾದರೆ ನಾವು ಕಾಮಗಾರಿ ಆರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಹುಬ್ಬಳ್ಳಿಗೂ ಬರಲಿದ್ದಾರೆ ಮೋದಿ:
ಶಿವಮೊಗ್ಗದಲ್ಲಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದ್ದು ಅದೇ ರೀತಿ ಮೋದಿ ಹುಬ್ಬಳ್ಳಿಗೂ ಬರಲಿದ್ದಾರೆ. ಹಾವೇರಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಚಾರ ನಡೆಯಲಿದೆ. 3-4 ಕ್ಷೇತ್ರಗಳ ಪ್ರಚಾರ ಸೇರಿಸಿ ಹುಬ್ಬಳ್ಳಿಗೆ ಬರಲಿದ್ದಾರೆ ಎಂದು ಪ್ರಹ್ಲಾದ ಜೋಶಿ ಹೇಳಿದರು.