ಸಾರಾಂಶ
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯು ಗೊರವರ ಸರಪಳಿ ಪವಾಡ, ಕಂಚಿವೀರರ ಭಗಣಿ ಗೂಟ ಪವಾಡಗಳೊಂದಿಗೆ ಮಂಗಳವಾರ ಸಂಭ್ರಮದೊಂದಿಗೆ ತೆರೆಕಂಡಿತು.ಗಂಗಿಮಾಳಮ್ಮ ದೇವಸ್ಥಾನ ಆವರಣದಲ್ಲಿ ದೇವಸ್ಥಾನದ ಕಂಚಿವೀರರು ಹಾಗೂ ಗೊರವರ ಸರಪಳಿ ಪವಾಡಗಳನ್ನು ನೆರವೇರಿಸಿದರು. ಡೆಂಕಣಮರಡಿಯಲ್ಲಿ ರಾಕ್ಷಸರನ್ನು ಸಂಹರಿಸಿ ವಿಜಯ ಸಾಧಿಸಿದ ಸವಿನೆನಪಿಗಾಗಿ ಕಾರ್ಣಿಕ ಶುಭ ನುಡಿದ ಬಳಿಕ ಸರಪಳಿ ಮತ್ತು ಭಗಣಿಗೂಟ ಪವಾಡಗಳು ಜರುಗುವುದು ಸಂಪ್ರದಾಯ.
ದೇವಸ್ಥಾನದ ಬಾಬುದಾರರಾದ ಕಂಚಿವೀರರು (ಪಂಚವೀರರು) ನಡೆಸಿದ ಭಗಣಿಗೂಟ, ಸರಪಳಿ ಪವಾಡಗಳು ನೆರೆದಿದ್ದ ಭಕ್ತರನ್ನು ರೋಮಾಂಚನಗೊಳಿಸಿದವು. ಆದಿಕರ್ನಾಟಕ ಜನಾಂಗದ ಕಂಚಿವೀರರೆಂದು ಕರೆಯುವ ಇವರು ಭಗಣಿಗೂಟ ಪವಾಡಗಳನ್ನು ನೆರವೇರಿಸಿದರು. ಅದೇ ರೀತಿ ಗೊರವರು ಸರಪಳಿ ಪವಾಡ ಮಾಡುವುದು ಸಂಪ್ರದಾಯವಾಗಿದೆ ಎನ್ನುತ್ತಾರೆ ದೇವಸ್ಥಾನ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್.ಪವಾಡ ಮಾಡುವ ಕಂಚಿವೀರರು ನಾನಾ ರೀತಿಯ ಐದು ವೇಷ ಧರಿಸಿದ್ದರು. ವೀರಭದ್ರನ ಅವತಾರದಲ್ಲಿ ಕಾಲಿಗೆ ಭಗಣಿಗೂಟ ಬಡಿದುಕೊಳ್ಳುವುದು, ಕಾಲಿಗೆ ರಂಧ್ರ ಕೊರೆದು ಮುಳ್ಳು ದಾಟಿಸುವುದು, ಮುಂಗೈಗೆ ಕಬ್ಬಿಣ ಆರತಿ ಚುಚ್ಚಿ ದೀಪ ಬೆಳಗಿಸುವುದು, ಗೊರವರು ಕಬ್ಬಿಣದ ಸರಪಳಿ ಹರಿಯುವುದು ಹೀಗೆ ಹತ್ತಾರು ಪವಾಡಗಳು ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದವು.
ಕಂಚಿವೀರರನ್ನು ಮೆರವಣಿಗೆ ಮೂಲಕ ಕರೆತಂದು ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಅವರ ಸಮ್ಮುಖದಲ್ಲಿ ಗಂಗಿಮಾಳಮ್ಮ ದೇವಸ್ಥಾನದ ಸರಪಳಿ ಪವಾಡ ಕಟ್ಟೆ ಮುಂದೆ ಮಂಗಳವಾರ ಪವಾಡಗಳ ಆಯುಧಗಳನ್ನು ಕಂಚಿವೀರರು ಪೂಜಿಸಿದರು.ಭಗಣಿ ಗೂಟಗಳು, ಚರ್ಮದ ಮಿಣಿಗಳು, ಮುಳ್ಳುಗಳು, ಖಡ್ಗಗಳು, ಸರಪಳಿಗಳು ಸೇರಿ ಎಲ್ಲ ಆಯುಧಗಳಿಗೆ ಪೂಜೆ ಸಲ್ಲಿಸಿ, ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಭಂಡಾರ ಆಶೀರ್ವಾದವನ್ನು ಪಡೆದು ಕಂಚಿವೀರರು ಪವಾಡಗಳನ್ನು ಪ್ರದರ್ಶಿಸಿದರು.
ಕಟ್ಟಿಗೆಯಿಂದ ಮಾಡಿದ ಭಗಣಿಗೂಟವೆಂಬ ಆಯುಧವನ್ನು ಕಂಚಿವೀರರು ಬಲಗಾಲಿನ ಕೆಳಗೆ ಏಳು ಕೋಟಿ ಏಳು ಕೋಟಿಗೋ ಎಂದು ಮೈಲಾರಲಿಂಗನ ನಾಮಸ್ಮರಣೆ ಮಾಡುತ್ತಾ ಬಡಿದುಕೊಂಡರು. ಆಗ ಕಾಲಿನಲ್ಲಿ ರಂಧ್ರ ಕೊರೆದುಕೊಂಡು ಚರ್ಮದಿಂದ ಮಾಡಿದ ಮಿಣಿ, ಮುಳ್ಳು ದಾಟಿಸಿಕೊಂಡರು. ಕಂಚಿವೀರರು ಮೈಲಾರಲಿಂಗ ದೇವರ ಕುರಿತು ಕೈಯಲ್ಲಿ ಖಡ್ಗಗಳನ್ನು ಹಿಡಿದು ದೇವರ ಮಹಿಮೆ ಸಾರುವ ಒಡಪುಗಳನ್ನು ಹೇಳಿದರು.ಕಂಚಿವೀರರು ಮತ್ತು ಗೊರವರು ಕಬ್ಬಿಣದ ಸರಪಳಿಯನ್ನು ದೇವರ ನಾಮ ಸ್ಮರಿಸುತ್ತಾ ಸರಪಳಿ ಹರಿದರು. ಕಂಚಿವೀರರು ಮತ್ತು ಗೊರವರು ಸರಪಳಿಗಳನ್ನು ಕಿತ್ತು ಹಾಕುವಾಗ, ನೆರೆದಿದ್ದ ಭಕ್ತರು ಮತ್ತು ಗೊರವರ ಢಮರುಗಗಳ ಶಬ್ದ ಪವಾಡ ಮಾಡುವವರಿಗೆ ಹುಮ್ಮಸ್ಸು ನೀಡಿದವು.
ಪವಾಡಗಳನ್ನು ಮೈಲಾರ ಗ್ರಾಮದ ಕಂಚಿವೀರರು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದಿದ್ದಾರೆ. ಪವಾಡ ಮಾಡುವ ಮುನ್ನಾ ದಿನ ಕಂಚಿವೀರರು, ಒಂದು ದಿನದ ಉಪವಾಸ ವ್ರತದಲ್ಲಿರುತ್ತಾರೆ. ವ್ರತಕ್ಕೆ ಭಂಗ ಬರಬಾರದೆಂದು ಮಹಿಳೆಯರನ್ನು ಮನೆಯಿಂದ ಹೊರಗೆ ಕಳಿಸುತ್ತಾರೆ. ಕಾರಣ ಪವಾಡಗಳಿಗೆ ತೊಂದರೆ ಆಗದಂತೆ ಮಡಿಯಿಂದ ಪವಾಡಗಳನ್ನು ಮಾಡಬೇಕು ಎನ್ನುತ್ತಾರೆ ಕಂಚಿವೀರರು.ಈ ಪವಾಡಗಳನ್ನು ಮಾಡಿದಾಗ ಮಾತ್ರ ಮದುವೆ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ಯುವಕರು ಪವಾಡ ಮಾಡಬೇಕು ಎನ್ನುತ್ತಾರೆ ವೆಂಕಪ್ಪಯ್ಯ ಒಡೆಯರ್.