ಸಂಪಾಯಿತಲೇ ಪರಾಕ್‌ಮೈಲಾರಲಿಂಗೇಶ್ವರ ಕಾರ್ಣಿಕ

| Published : Feb 27 2024, 01:38 AM IST

ಸಾರಾಂಶ

ಈ ಭವಿಷ್ಯ ನುಡಿಯು ಹೆಚ್ಚಾಗಿ ಕೃಷಿ, ರಾಜಕೀಯ, ಆರ್ಥಿಕ, ವಾಣಿಜ್ಯ ಕ್ಷೇತ್ರಕ್ಕೆ ಹೆಚ್ಚಾಗಿ ಅನ್ವಯವಾಗುತ್ತಿದೆ ಎಂಬುದು ಭಕ್ತರ ನಂಬಿಕೆ.

ಹೂವಿನಹಡಗಲಿ: "ಸಂಪಾಯಿತಲೇ ಪರಾಕ್‌'''' ಇದು ವಿಜಯನಗರ ಜಿಲ್ಲೆ ಹೂವಿನಹಡಗರಿ ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯ ಐತಿಹಾಸಿಕ ಪ್ರಸಿದ್ಧ ಕಾರ್ಣಿಕೋತ್ಸವದ ನುಡಿ.

ಮೈಲಾರದ ಪುಣ್ಯಭೂಮಿ ಡೆಂಕಣಮರಡಿಯಲ್ಲಿ ಸೋಮವಾರ ಸಂಜೆ 5.30 ಗಂಟೆಗೆ ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತ ಸಮೂಹದ ಮಧ್ಯೆ ತುಪ್ಪ ಸವರಿದ 20 ಅಡಿ ಉದ್ದದ ಐತಿಹಾಸಿಕ ಬಿಲ್ಲನೇರಿದ ಗೊರವಯ್ಯ ಕಾರ್ಣಿಕದ ರಾಮಣ್ಣ ದಶದಿಕ್ಕುಗಳತ್ತ ನೋಡುತ್ತಾ ಸದ್ದಲೇ...! ಎಂದು ಏರುಧ್ವನಿಯಲ್ಲಿ ಕೂಗಿದ ಕೂಡಲೇ ಡೆಂಕಣಮರಡಿಯಲ್ಲಿ ಕಾರ್ಣಿಕ ನುಡಿಗಾಗಿ ಕಾತರರಾಗಿದ್ದ ಲಕ್ಷಾಂತರ ಭಕ್ತಗಣ ಸೇರಿದಂತೆ, ಪಶು ಪಕ್ಷಿಗಳು ಕ್ಷಣಕಾಲ ಮೌನಕ್ಕೆ ಶರಣಾಗಿದ್ದವು. ಆಗ ಕಾರ್ಣಿಕ ನುಡಿಯುವ ಗೊರವಯ್ಯ "ಸಂಪಾಯಿತಲೇ ಪರಾಕ್ " ಎಂದು ಕಾರ್ಣಿಕ ನುಡಿದರು.

ಕಾರ್ಣಿಕೋತ್ಸವ ಮುಗಿದ ಕೂಡಲೇ ಡೆಂಕಣಮರಡಿಯಲ್ಲಿ ನೆರೆದಿದ್ದ ಭಕ್ತ ಸಮೂಹವು ಕಾರ್ಣಿಕ ನುಡಿಯ ಗೂಡಾರ್ಥವನ್ನು ತಮ್ಮೊಳಗೆ ಚರ್ಚಿಸುವುದು ಎಲ್ಲೆಡೆ ಕಂಡುಬಂತು. ಈ ಭವಿಷ್ಯ ನುಡಿಯು ಹೆಚ್ಚಾಗಿ ಕೃಷಿ, ರಾಜಕೀಯ, ಆರ್ಥಿಕ, ವಾಣಿಜ್ಯ ಕ್ಷೇತ್ರಕ್ಕೆ ಹೆಚ್ಚಾಗಿ ಅನ್ವಯವಾಗುತ್ತಿದೆ ಎಂಬುದು ಭಕ್ತರ ನಂಬಿಕೆ.

ಈ ಬಾರಿಯ ಕಾರ್ಣಿಕ ನುಡಿಯನ್ನು ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್‌ ವಿಶ್ಲೇಷಣೆ ಮಾಡುತ್ತಾ, ಈ ಬಾರಿ ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿದೆ. ಎಲ್ಲ ರೀತಿಯಿಂದಲ್ಲೂ ರಾಜ್ಯ ಸುಭಿಕ್ಷೆಯಿಂದ ಇರುತ್ತದೆ. ಜತೆಗೆ ಮುಂಬರುವ ದಿನಗಳಲ್ಲಿ, ಸರ್ಕಾರ ನೀಡುತ್ತಿರುವ ಸೌಲಭ್ಯಗಳಿಂದ ದೇಶ ಮತ್ತು ರಾಜ್ಯ ಆರ್ಥಿಕವಾಗಿ ಸದೃಢವಾಗಲಿದೆ. ಒಟ್ಟಾರೆ ಜನ ಸುಖದಿಂದ ಜೀವನ ಸಾಗಿಸುತ್ತಾರೆಂದರು.

124ನೇ ಕಾರ್ಣಿಕ: ಕಳೆದ ವರ್ಷ "ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್‌ " ಎಂಬ ಕಾರ್ಣಿಕ ನುಡಿಯನ್ನು ಗೊರವಯ್ಯ ರಾಮಣ್ಣ ನುಡಿದ್ದರು. ದಾಖಲೆಯ ಪ್ರಕಾರ ಈ ವರ್ಷದ "ಸಂಪಾಯಿತಲೇ ಪರಾಕ್‌ " ಈ ಕಾರ್ಣಿಕ 124ನೇ ಭವಿಷ್ಯ ನುಡಿಯಾಗಿದೆ.

ವಿಜಯದ ಸಂಕೇತ: ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಅನತಿ ದೂರದಲ್ಲಿರುವ ಡೆಂಕಣಮರಡಿಯಲ್ಲಿ ಮೈಲಾರಲಿಂಗ ಮತ್ತು ಗಂಗಿಮಾಳಮ್ಮ ಇಬ್ಬರೂ ಶಿವ ಪಾರ್ವತಿ ಅವತಾರ ಎತ್ತಿ ಮಲ್ಲಾಸುರ ಮಣಿಕಾಸುರರನ್ನು ಸಂಹರಿಸಿದ ವಿಜಯೋತ್ಸವದ ಸವಿನನಪಿಗಾಗಿ ಕಾರ್ಣಿಕ ಶುಭನುಡಿ ಹೇಳುವ ಪರಂಪರೆ ನಡೆದು ಬಂದಿದೆ.

ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ದೇವಸ್ಥಾನದಿಂದ ಅಶ್ವರೂಢರಾಗಿ ಕಾರ್ಣಿಕ ಗೊರವಯ್ಯನನ್ನು ಕರೆತಂದು ಕಾರ್ಣಿಕ ನುಡಿಯಲು ಆದೇಶಿಸುವ ಪರಂಪರೆ ಇಂದಿಗೂ ನಡೆದುಬಂದಿದೆ.

ಮೂರ್ತಿ ಮೆರವಣಿಗೆ: ಮೈಲಾರದ ಡೆಂಕಣಮರಡಿಗೆ ದೇವಸ್ಥಾನದಿಂದ ವಿಜಯನಗರ ಅರಸರು ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ದಾನವಾಗಿ ನೀಡಿರುವ ಮೈಲಾರಲಿಂಗ ಸ್ವಾಮಿ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳು ಹಾಗೂ ಗೊರವರ ಢಮರುಗ ಬಾರಿಸಿ ಗೊರವರ ನೃತ್ಯ ಮಾಡುತ್ತಾ ಮೆರವಣಿಗೆಯ ಮೂಲಕ ಡೆಂಕಣಮರಡಿಗೆ ಕರೆತರಲಾಯಿತು.

ಮುಗಿಲು ಮುಟ್ಟಿದ ಘೋಷಣೆ: ಡೆಂಕಣಮರಡಿಯಲ್ಲಿ ಕಾರ್ಣಿಕ ನುಡಿಯಲು 11 ದಿನಗಳ ಕಾಲ ಉಪವಾಸ ವ್ರತಾಚರಣೆಯಲ್ಲಿರುವ ಗೊರವಯ್ಯ ಕಾರ್ಣಿಕದ ರಾಮಣ್ಣನನ್ನು ಕರೆತಂದರು. ಆಗ ನೆರೆದಿದ್ದ ಸಾವಿರಾರು ಭಕ್ತರು ಏಳು ಕೋಟಿ, ಏಳು ಕೋಟಿ, ಏಳು ಕೋಟಿಗೋ. ಛಾಂಗ್ ಬಲೋ..., ಛಾಂಗ್‌ ಬಲೋ... ಎಂದು ದೇವರ ನಾಮಸ್ಮರಣೆ ಮುಗಿಲು ಮುಟ್ಟಿತ್ತು.

ಆಯುಧದೊಂದಿಗೆ ಕಂಚಿ ವೀರರು: ದೇವಸ್ಥಾನದ ಮಹಾದ್ವಾರದ ಬಳಿ ಇಡಲಾಗುವ ಮೈಲಾರಲಿಂಗೇಶ್ವರ ಹಾಗೂ ಗಂಗಿಮಾಳಮ್ಮ ದೇವಿಯ ಪಾದರಕ್ಷೆಯನ್ನು ಬಾಬುದಾರರು, ಗೊರವರು ಢಮರುಗ ಬಾರಿಸುತ್ತಾ, ಮೆರವಣಿಗೆಯ ಮೂಲಕ ಕರೆತಂದರು. ಜತೆಗೆ ಕಂಚಿವೀರರು ಕೂಡಾ ತಮ್ಮ ಆಯುಧಗಳನ್ನು ಹಿಡಿದುಕೊಂಡು ಡೆಂಕಣಮರಡಿಗೆ ಬಂದು ಕಾರ್ಣಿಕ ನುಡಿಗೆ ಸಾಕ್ಷಿಯಾದರು.

ಪರಿಷೆ ತುಂಬೆಲ್ಲಾ ಧ್ವನಿವರ್ಧಕ: ಡೆಂಕಣಮರಡಿಯಲ್ಲಿ ಕಾರ್ಣಿಕ ನುಡಿ ಸ್ಪಷ್ಟವಾಗಿ ಎಲ್ಲರಿಗೂ ಕೇಳಿಸುವಂತೆ ಇಡೀ ಜಾತ್ರೆಯಲ್ಲಿ ಭಕ್ತರು ಇದ್ದ ಸ್ಥಳದಲ್ಲೇ ಜಿಲ್ಲಾಡಳಿತ ಗುಣಮಟ್ಟದ ಧ್ವನಿವರ್ಧಕಗಳನ್ನು ಅಳವಡಿಸಿದ್ದರು. ವಿವಿಧ ತಂತ್ರಜ್ಞಾನ ಬಳಕೆಯಿಂದ ಕಾರ್ಣಿಕ ನುಡಿ ಭಕ್ತರಲ್ಲಿ ಗೊಂದಲ ಮೂಡಲಿಲ್ಲ. ಈ ಹಿಂದೆ ಹಲವು ಬಾರಿ ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳದೇ ಗೊಂದಲ ಉಂಟಾಗುತ್ತಿತ್ತು.

ಈ ಸಂದರ್ಭದಲ್ಲಿ ಶಾಸಕ ಕೃಷ್ಣನಾಯ್ಕ, ಕಾಗಿನೆಲೆಯ ನಿರಂಜನಾನಂದ ಪುರಿ ಸ್ವಾಮೀಜಿ, ಹೊಳಲಿನ ಚೆನ್ನಬಸವೇಶ್ವರ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ಇದ್ದರು. ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ, ಐಜಿಪಿ ಬಿ.ಎಸ್. ಲೋಕೇಶಕುಮಾರ, ಎಸ್ಪಿ ಶ್ರೀಹರಿಬಾಬು, ಜಿಪಂ ಸಿಇಒ ಬಿ. ಸದಾಶಿವ ಪ್ರಭು, ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಸ್ವಾಮಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ. ಗಂಗಾಧರ, ಪ್ರಕಾಶ ರಾವ್‌ ಮತ್ತು ದೇವಸ್ಥಾನದ ಇಒ ಕೃಷ್ಣಪ್ಪ, ತಹಸೀಲ್ದಾರ್‌ ವಿ. ಕಾರ್ತಿಕ್‌ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಲಾರ ಕಾರ್ಣಿಕ: ಧರ್ಮದರ್ಶಿ ಕೆಂಡಾಮಂಡಲ

ಹೂವಿನಹಡಗಲಿ: ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯ ಬಗ್ಗೆ ದೇವಸ್ಥಾನದ ಧರ್ಮದರ್ಶಿ ಗುರು ವೆಂಕಪ್ಪಯ್ಯ ಒಡೆಯರ್ ಅಪಸ್ವರ ಎತ್ತಿದ್ದು, ಈ ಬಾರಿಯ ಕಾರ್ಣಿಕ ನುಡಿಯ ಬಗ್ಗೆ ವಿಶ್ಲೇಷಣೆ ಮಾಡಲು ನಿರಾಕರಿಸಿರುವ ಪ್ರಸಂಗ ಡೆಂಕಣಮರಡಿಯಲ್ಲಿ ಜರುಗಿದೆ.

ಗೊರವಯ್ಯ ಕಾರ್ಣಿಕದ ರಾಮಪ್ಪನ ವಿರುದ್ಧ ಮತ್ತೆ ತಿರುಗಿಬಿದ್ದ ವೆಂಕಪ್ಪಯ್ಯ ಒಡಯರ್‌ ಇವರ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಡೆಂಕಣ ಮರಡಿಯ ಪುಣ್ಯಭೂಮಿಯಲ್ಲೇ ಇವರಿಬ್ಬರ ನಡುವೆ ಜಟಾಪಟಿ ಶುರುವಾಗಿದೆ.

ಕಾರ್ಕಣಿ ನುಡಿಯುವ ಗೊರವಯ್ಯ ಸಂಪ್ರದಾಯದ ನಿಯಮಗಳನ್ನು ಗಾಳಿಗೆ ತೂರಿದ್ದಾರೆಂದು ಆರೋಪಿಸಿದ್ದಾರೆ.

ಮೈಲಾರದ ಕಪಿಲ ಗುರುಪೀಠದ ಧರ್ಮದ ನಿಯಮಗಳನ್ನು ಪಾಲಿಸದೆ ಗೊರವಯ್ಯ ರಾಮಣ್ಣ ಕಾರ್ಣಿಕ ನುಡಿ ನುಡಿದ್ದಾರೆ. ಈ ಬಾರಿಯ ಕಾರ್ಣಿಕ ಇದು ದೈವವಾಣಿಯಲ್ಲ. ಗೊರವಯ್ಯ ರಾಮಪ್ಪನ ವಾಣಿ. ಇದನ್ನು ನಂಬುವುದು ಬಿಡುವುದು ಭಕ್ತರಿಗೆ ಬಿಟ್ಟಿದ್ದು. ಜಿಲ್ಲಾಧಿಕಾರಿ ಹಾಗೂ ಭಕ್ತರು ಇವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿವರ್ಷ ಭಕ್ತರಿಗೆ ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಮೂಡುತ್ತದೆ. ಜತೆಗೆ ಮೈಲಾರಲಿಂಗೇಶ್ವರ ಕಾರ್ಣಿಕದ ಬಗ್ಗೆ ಭಕ್ತರು ಇಟ್ಟಿರುವ ನಂಬಿಕೆ ಮತ್ತು ಮಹತ್ವ ದೂರವಾಗಲಿದೆ. ದೇವಸ್ಥಾನ ಹಾಗೂ ಗುರುಪೀಠದ ಪದ್ಧತಿ ಅನುಸರಿಸಿದರೆ ಮಾತ್ರ ದೈವವಾಣಿ ನುಡಿಯಲಿಕ್ಕೆ ಸಾಧ್ಯ. ಈ ಕುರಿತು ತಾವು ಕಾನೂನು ಹೋರಾಟ ಮಾಡುತ್ತೇವೆಂದು ವೆಂಕಪ್ಪಯ್ಯ ಒಡೆಯರ್‌ ಎಚ್ಚರಿಕೆ ನೀಡಿದ್ದಾರೆ.