ಮೈಸೂರು ಚಲೋ: ಧಾರವಾಡ ಜಿಲ್ಲೆಯಿಂದ 2000 ಕಾರ್ಯಕರ್ತರು

| Published : Aug 06 2024, 12:34 AM IST

ಸಾರಾಂಶ

ಮುಡಾ ಹಗರಣದ ವಿಷಯ ಚರ್ಚೆ ಮಾಡುತ್ತೇವೆ ಎಂದ ಮೇಲೆ ಒಂದು ದಿನ ಮುಂಚಿತವಾಗಿ ಸದನವನ್ನು ಮೊಟಕುಗೊಳಿಸಿದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಸದನದಲ್ಲಿ ಭಯಭೀತರಾಗಿದ್ದರು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ:

ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋಗೆ ಬೆಂಬಲ ಸೂಚಿಸಲು ಧಾರವಾಡ ಜಿಲ್ಲೆಯಿಂದ ಆ. 6ರಂದು ನಡೆಯಲಿರುವ ನಾಲ್ಕನೇ ದಿನದಂದು 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಇದೇ ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಬಿಜೆಪಿ-ಜೆಡಿಎಸ್‌ ಪಕ್ಷಗಳೆರಡು ಸೇರಿಕೊಂಡು ಪಾದಯಾತ್ರೆ ನಡೆಸುತ್ತಿದ್ದೇವೆ. ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ ಎಂದರು.ನಮ್ಮ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು ಎರಡು ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದೇವೆ. ಆ. 6ರಂದು ನಡೆಯಲಿರುವ ಪಾದಯಾತ್ರೆಯಲ್ಲಿ ಜಿಲ್ಲೆಯ ಶಾಸಕರು, ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲು ಪಾದಯಾತ್ರೆ ನಡೆಸುತ್ತಿದ್ದೇವೆ. ಎರಡು ದೊಡ್ಡ ಭ್ರಷ್ಟಾಚಾರ ಆರೋಪ ಇದ್ದರೂ ಏನೂ ಆಗಿಲ್ಲ ಎನ್ನುತ್ತಿದ್ದಾರೆ. ವೇಣುಗೋಪಾಲ, ಸುರ್ಜೆವಾಲಾ ಮುಖ್ಯಮಂತ್ರಿಗಳಿಗೆ ಬೆಂಬಲಿಸಬೇಕು ಎಂದು ಸಚಿವರು, ಶಾಸಕರಿಗೆ ಹೇಳುತ್ತಿದ್ದಾರೆ. ಇದನ್ನು ನೋಡಿದರೆ, ಭ್ರಷ್ಟಾಚಾರದಲ್ಲಿ ಹೈಕಮಾಂಡ್‌ ಪಾಲು ಇದೆ ಎಂಬುದು ಸ್ಪಷ್ಟವಾಗುತ್ತಿದೆ. ಕರ್ನಾಟಕವನ್ನು ಕಾಂಗ್ರೆಸ್‌ ಹೈಕಮಾಂಡ್‌ ಎಟಿಎಂ ಮಾಡಿಕೊಂಡಿದೆ ಎಂಬುದು ಸಾಬೀತಾಗುತ್ತಿದೆ. ವಾಲ್ಮೀಕಿ ನಿಗಮದ ಹಗರಣದ ಹಣ ತೆಲಂಗಾಣ ಚುನಾವಣೆಯಲ್ಲಿ ಬಳಕೆ ಆಗಿದೆ. ಇದರ ಬಗ್ಗೆ ಎಲ್ಲ ಸಾಕ್ಷಿ ನಾವು ಕೊಟ್ಟಿದ್ದೇವೆ. ಪ್ರಕರಣ ಎಸ್‌ಐಟಿಗೆ ಕೊಟ್ಟು ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಮುಡಾ ಹಗರಣದ ವಿಷಯ ಚರ್ಚೆ ಮಾಡುತ್ತೇವೆ ಎಂದ ಮೇಲೆ ಒಂದು ದಿನ ಮುಂಚಿತವಾಗಿ ಸದನವನ್ನು ಮೊಟಕುಗೊಳಿಸಿದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಸದನದಲ್ಲಿ ಭಯಭೀತರಾಗಿದ್ದರು.

ನಮ್ಮ ಯಾತ್ರೆ ನೋಡಿ ಡಿಸಿಎಂ ಡಿ.ಕೆ. ಶಿವಕುಮಾರ ಕೂಡ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಕಾಲದಲ್ಲಿ ಭ್ರಷ್ಟಾಚಾರ ಆಗಿಲ್ವಾ? ಕೇಸ್‌ ಆಗಿಲ್ವಾ ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ. ಇವರದೇ ಸರ್ಕಾರವಿದೆಯೆಲ್ಲ ಎಲ್ಲ ಕೇಸ್‌ಗಳ ತನಿಖೆ ನಡೆಸಲಿ. ಬೇಡ ಎಂದವರು ಯಾರು? ನಿಮ್ಮ ಹತ್ತಿರ ದಾಖಲೆ ಇದ್ದರೆ ವಿಚಾರಣೆ ಮಾಡಿಸಿ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಯಾರೇ ತಪ್ಪು ಮಾಡಿದ್ದರೂ ತನಿಖೆ ನಡೆಸಲಿ. ಎಲ್ಲವನ್ನು ಸಿಬಿಐಗೆ ಕೊಟ್ಟು ಬಿಡಲಿ. ರಾಜ್ಯದ ಜನತೆಗೆ ಸ್ಪಷ್ಟತೆಯಾದರೂ ಸಿಗುತ್ತದೆ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಶಾಸಕರಿಗೆ, ಸಚಿವರು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಯಾದಗಿರಿ ಇನ್‌ಸ್ಪೆಕ್ಟರ್‌ ಪರಶುರಾಮ ಸಾವಿನ ಪ್ರಕರಣ ಮೊದಲಿಗೆ ಎಫ್‌ಐಆರ್‌ ಕೂಡ ದಾಖಲಿಸಿಕೊಂಡಿರಲಿಲ್ಲ. 18 ಗಂಟೆ ಬಳಿಕ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಇದೀಗ ನಿಗದಿಯಲ್ಲಿ ಮತ್ತೊಬ್ಬ ಇನ್‌ಸ್ಪೆಕ್ಟರ್‌ ತಿಮ್ಮೇಗೌಡ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಸ್ಥರು ಇದೀಗ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಈ ಎಲ್ಲ ನೋಡಿದರೆ ಎಂಥ ಆಡಳಿತ ನಡೆಸುತ್ತಿದೆ ಎಂಬುದು ಗೊತ್ತಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಸಿಬಿಐಯಲ್ಲಿ ಸಾಕಷ್ಟು ಕೇಸ್‌ಗಳು ಪೆಂಡಿಂಗ್‌ ಇವೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿಕೆ ನೀಡುತ್ತಿದ್ದಾರೆ. ಇವರ ಬಳಿ ಇರುವ ಸಿಐಡಿಯಲ್ಲಿ ಎಷ್ಟು ಕೇಸ್‌ಗಳಿವೆ ಎಂಬುದನ್ನು ತಿಳಿಸಲಿ ಎಂದು ಸವಾಲೆಸೆದರು.

ಶಾಸಕ ಬಸವನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಟೆಂಗಿನಕಾಯಿ, ಆ ಬಗ್ಗೆ ಪಕ್ಷದ ಉಸ್ತುವಾರಿ, ಹೈಕಮಾಂಡ್‌ ಕ್ರಮಕೈಗೊಳ್ಳುತ್ತದೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗುತ್ತದೆ ಎಂದರು.

ಯಾವುದೇ ಸರ್ಕಾರವನ್ನು ಕೆಡುವ ದುಸ್ಸಾಹಸಕ್ಕೆ ನಮ್ಮ ಪಕ್ಷವಾಗಲಿ, ಹೈಕಮಾಂಡ್ ಕೈ ಹಾಕುವುದಿಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್‌ಗೆ ಜನತೆ ಜನಾಭಿಪ್ರಾಯ ಕೊಟ್ಟು ಅಧಿಕಾರ ಕೊಟ್ಟಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೇಯರ್‌ ರಾಮಣ್ಣ ಬಡಿಗೇರ, ಪಕ್ಷದ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಉಪಮೇಯರ್‌ ದುರ್ಗಮ್ಮ ಬಿಜವಾಡ, ಮಾಜಿ ಮೇಯರ್‌ ವೀರಣ್ಣ ಸವಡಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ರವಿ ನಾಯ್ಕ ಸೇರಿದಂತೆ ಹಲವರಿದ್ದರು.