ಮೈಸೂರು ದಸರಾ ನೆನಪಿಸಿದ ಪಂಜಿನ ಕವಾಯತು

| Published : Jan 20 2024, 02:03 AM IST

ಸಾರಾಂಶ

ಕರ್ನಾಟಕ ಪೊಲೀಸ್‌ ಇಲಾಖೆಯ ನೇತೃತ್ವದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನೆರವೇರುವ ಆಕರ್ಷಕ ಪಂಜಿನ ಕವಾಯತನ್ನು ನೆನಪಿಸುವಂಥ ಮೈನವಿರೇಳಿಸುವ ಪ್ರದರ್ಶನ ಶುಕ್ರವಾರ ಸಂಜೆ ಇಲ್ಲಿನ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದು ಸಾವಿರಾರು ಜನರ ಚಪ್ಪಾಳೆ, ಕೇಕೆಯನ್ನು ಗಿಟ್ಟಿಸಿಕೊಂಡಿತು.

ಬೀದರ್‌: ಕರ್ನಾಟಕ ಪೊಲೀಸ್‌ ಇಲಾಖೆಯ ನೇತೃತ್ವದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನೆರವೇರುವ ಆಕರ್ಷಕ ಪಂಜಿನ ಕವಾಯತನ್ನು ನೆನಪಿಸುವಂಥ ಮೈನವಿರೇಳಿಸುವ ಪ್ರದರ್ಶನ ಶುಕ್ರವಾರ ಸಂಜೆ ಇಲ್ಲಿನ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದು ಸಾವಿರಾರು ಜನರ ಚಪ್ಪಾಳೆ, ಕೇಕೆಯನ್ನು ಗಿಟ್ಟಿಸಿಕೊಂಡಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ ಹಾಗೂ ಚಂದ್ರಕಾಂತ ಪೂಜಾರಿ ಮತ್ತು ಡಿಎಸ್‌ಪಿ ಶಿವನಗೌಡ ಪಾಟೀಲ್‌ ಅವರು ಸಮ್ಮುಖದಲ್ಲಿ ಪೊಲೀಸ್‌, ಅಬಕಾರಿ ಸೇರಿದಂತೆ ವಿವಿಧ ಸಮವಸ್ತ್ರಧಾರಿ ಇಲಾಖೆಯ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ನಡೆದ ಪಂಜಿನ ಕವಾಯತು ಅತ್ಯಂತ ಆಕರ್ಷಕ ಹಾಗೂ ಐತಿಹಾಸಿಕವಾಗಿತ್ತು.

ಶುಕ್ರವಾರ ಸಂಜೆ 5ರಿಂದ ಕನ್ನಡ ಜ್ಯೋತಿ ರಥಯಾತ್ರೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ 50ರ ಸಂಭ್ರಮದ ಲೋಗೋ ನಿರ್ಮಾಣವಾದರೆ ಆಗಸದಲ್ಲಿ ಕತ್ತಲಾಗುತ್ತಿದ್ದಂತೆ ಪಂಜಿನ ಕವಾಯತು ಆರಂಭವಾಗಿ ಅಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಮನರಂಜಿಸಿದ್ದು ಮೈಸೂರು ಮಹಾನಗರದಲ್ಲಿ ಮೈಸೂರು ದಸರಾ ನಂತರ ಗಡಿ ನಾಡು ಬೀದರ್‌ ಜಿಲ್ಲೆಯಲ್ಲಿಯೇ ಪೊಲೀಸ್‌ ಇಲಾಖೆಯ ನೇತೃತ್ವದಲ್ಲಿ ಪಂಜಿನ ಕವಾಯತು ಎಲ್ಲರನ್ನು ಮಂತ್ರಮುಗ್ಧಗೊಳಿಸಿತ್ತು.

ಪಂಜಿನ ಕವಾಯತಿನಲ್ಲಿ ಬೀದರ್, ಕರ್ನಾಟಕ 50 ಹೀಗೆಯೇ ವಿವಿಧ ಮಾದರಿಗಳನ್ನು ಸುಮಾರು 200 ಜನ ಅಧಿಕಾರಿ, ಸಿಬ್ಬಂದಿಗಳು ಎರಡೂ ಕೈಗಳಲ್ಲಿ ಬೆಂಕಿ ಕಾರುವ ಪಂಜುಗಳನ್ನು ಹಿಡಿದು ಮೈನವಿರೇಳಿಸುವಂತೆ ಪ್ರದರ್ಶಿಸಿದ ಪೊಲೀಸರು ಸೇರಿದಂತೆ ವಿವಿಧ ಸಮವಸ್ತ್ರಧಾರಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಸಾಹಸ ಹಾಗೂ ಈ ಪ್ರದರ್ಶನಕ್ಕೆ ಪೂರ್ವ ತಯಾರಿಗೆ ಸಹಕರಿಸಿದ ಅಧಿಕಾರಿ ಸಿಬ್ಬಂದಿಗಳೆಲ್ಲರಿಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಅಭಿನಂದಿಸಿದರು.

ಸಮವಸ್ತ್ರ ಇಲಾಖೆಗಳ ಪೈಕಿ ಪೊಲೀಸ್‌, ಅಬಕಾರಿ, ಎಎಸ್ಐಎಸ್‌ಎಫ್‌, ಕೆಎಸ್‌ಆರ್‌ಪಿ, ಅಗ್ನಿಶಾಮಕ ದಳ, ಕಾರಾಗೃಹ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಸಿಬ್ಬಂದಿಗಳು ಸೇರಿ ಈ ಪಂಜಿನ ಕವಾಯತು ಪ್ರದರ್ಶನ ನೀಡಿದರು.