ಸದ್ಯದ ಪರಿಸ್ಥಿತಿಯಲ್ಲಿ ನಷ್ಟದಲ್ಲಿದೆ ಮೈಸೂರು ಜಿಲ್ಲಾ ಹಾಲು ಒಕ್ಕೂಟ: ಎ.ಟಿ.ಸೋಮಶೇಖರ್

| Published : Sep 05 2024, 12:42 AM IST

ಸದ್ಯದ ಪರಿಸ್ಥಿತಿಯಲ್ಲಿ ನಷ್ಟದಲ್ಲಿದೆ ಮೈಸೂರು ಜಿಲ್ಲಾ ಹಾಲು ಒಕ್ಕೂಟ: ಎ.ಟಿ.ಸೋಮಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಜಿಲ್ಲಾ ಹಾಲು ಒಕ್ಕೂಟದಲ್ಲಿ ದಿನ ನಿತ್ಯ 9 ಲಕ್ಷ ಲೀಟರ್ ಹಾಲನ್ನು ಉತ್ಪಾದಕರಿಂದ ಖರೀದಿಸಲಾಗುತ್ತಿದೆ, ಆದರೆ 4 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ಮಾಡಲಾಗುತ್ತಿದೆ, ಉಳಿದ 4 ರಿಂದ 5 ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಿ ಶೇಖರ್ ಮಾಡಲಾಗಿದೆ. ಹಾಲಿನ ಪೌಡರ್ ಮಾಡಲು ರು. 300 ರಿಂದ 350 ವೆಚ್ಷವಾಗುತ್ತಿದ್ದು, ಮಾರುಕಟ್ಟೆ ದರ ರು. 200 ರಿಂದ 250 ಇದ್ದು, ಹಾಲಿನ ಪೌಡರ್ ಕೇಳುವವರೆ ಇಲ್ಲದಂತೆ ಆಗಿದೆ.

ಕನ್ನಡಪ್ರಭ ವಾರ್ತೆ ಭೇರ್ಯ

ಮೈಸೂರು ಜಿಲ್ಲಾ ಹಾಲು ಒಕ್ಕೂಟ ಸದ್ಯದ ಪರಿಸ್ಥಿತಿಯಲ್ಲಿ ನಷ್ಟದಲ್ಲಿದ್ದು, ಇಂದು ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ಖರೀದಿ ದರ 1 ರಿಂದ 1.50 ರು. ಕಡಿಮೆ ಮಾಡಲು ತೀರ್ಮಾನ ಆಗಬಹುದು, ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದು ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್ ಮನವಿ ಮಾಡಿದರು. ಕೆ.ಆರ್. ನಗರ ತಾಲೂಕಿನ ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ಜಿಲ್ಲಾ ಹಾಲು ಒಕ್ಕೂಟದಲ್ಲಿ ದಿನ ನಿತ್ಯ 9 ಲಕ್ಷ ಲೀಟರ್ ಹಾಲನ್ನು ಉತ್ಪಾದಕರಿಂದ ಖರೀದಿಸಲಾಗುತ್ತಿದೆ, ಆದರೆ 4 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ಮಾಡಲಾಗುತ್ತಿದೆ, ಉಳಿದ 4 ರಿಂದ 5 ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಿ ಶೇಖರ್ ಮಾಡಲಾಗಿದೆ. ಹಾಲಿನ ಪೌಡರ್ ಮಾಡಲು ರು. 300 ರಿಂದ 350 ವೆಚ್ಷವಾಗುತ್ತಿದ್ದು, ಮಾರುಕಟ್ಟೆ ದರ ರು. 200 ರಿಂದ 250 ಇದ್ದು, ಹಾಲಿನ ಪೌಡರ್ ಕೇಳುವವರೆ ಇಲ್ಲದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಡಳಿತ ಮಂಡಳಿಯ ಸಭೆಯಲ್ಲಿ ಹಲವಾರು ಬಾರಿ ಹಾಲಿನ ದರ ಕಡಿಮೆ ಆಗದಂತೆ ನಾನು ಸಾಕಷ್ಟು ಬಾರಿ ಹೋರಾಟ ಮಾಡಿದ್ದೇನೆ, ಈಗಾಗಲೇ ಐದಾರು ಹಾಲು ಒಕ್ಕೂಟಗಳು ನಷ್ಟವನ್ನು ಭರಿಸಲು ಹಾಲಿನ ದರ ಕಡಿಮೆಗೊಳಿಸಿವೆ ಎಂದು ಮಾಹಿತಿ ನೀಡಿದರು.

ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ 2.50 ಕೋಟಿ ರು. ವಹಿವಾಟು ನಡೆಸಿ 5.25 ಲಕ್ಷ ನಿವ್ವಳ ಲಾಭಗಳಿಸಿದೆ, ಇದರಲ್ಲಿ 2.50 ಲಕ್ಷ ಹಣವನ್ನು ಬೋನಸ್ ಮೂಲಕ ಹಾಲು ಸರಬರಾಜು ಮಾಡುವ ಉತ್ಪಾದಕರಿಗೆ ನೀಡಲಾಗುವುದು ಎಂದು ಪ್ರಕಟಿಸಿದರು.

ಸಂಘದ ಅಧ್ಯಕ್ಷ ಗಾಂಧಿ ಶಿವಣ್ಣ ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಮಹದೇವ, ಅನಿತಾ, ರಾಧಮ್ಮ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಸಂಘದ ಸಿಇಒ ಕೆ. ಮಹದೇವ್ ವಾರ್ಷಿಕ ವರದಿ ಓದಿ ಸಭೆಯಲ್ಲಿ ಮಂಡಿಸಿದರು. 2024-25 ನೇ ಸಾಲಿನ ಬಜೆಟ್ಚ ಬಗ್ಗೆ ಸರ್ವ ಸದಸ್ಯರಿಂದ ಒಪ್ಪಿಗೆ ಪಡೆಯಲಾಯಿತು.

ಮೈಮುಲ್ ಉಪ ವ್ಯವಸ್ಥಾಪಕ ಜಿ.ಎನ್. ಸಂತೋಷ್, ವಿಸ್ತರಣಾಧಿಕಾರಿ ಯು.ಬಿ. ಸುಮಂತ್, ಎಸ್.ಬಿ.ಐ. ಬ್ಯಾಂಕ್ ವ್ಯವಸ್ಥಾಪಕ ಧ್ರುವನಾಯಕ್, ಉಪಾಧ್ಯಕ್ಷ ಪುಟ್ಟೇಗೌಡ, ನಿರ್ದೇಶಕರಾದ ಗೋವಿಂದೇಗೌಡ, ಸಣ್ಣಸ್ವಾಮಿ, ಜಿ.ಕೆ. ಶಿವಣ್ಣೇಗೌಡ, ರಾಮೇಗೌಡ, ಜಿ.ಕೆ. ಚೇತನ್, ಜಯರಾಮ ಜೋಗಿ, ನಾಗಮ್ಮ, ಜಯಂತಿ, ಗ್ರಾಪಂ ಮಾಜಿ ಸದಸ್ಯ ಎಸ್. ರಾಮು, ವಿಎಸ್.ಎಸ್.ಎನ್ ಮಾಜಿ ಅಧ್ಯಕ್ಷ ದೇವರಾಜ್, ಮಹದೇವ, ಶಿವಣ್ಣ, ಡೈರಿ ಸಿಬ್ಬಂದಿಗಳಾದ ಜಿ.ಎಸ್. ವಿಶ್ವನಾಥ್, ಜಿ.ಆರ್. ಗಣೇಶ್ ಇದ್ದರು.